ದಾವಣಗೆರೆ, ಫೆ.6- ಮುಂಬರುವ ವಿಧಾನ ಸಭಾ ಚುನಾವಣೆಯಲ್ಲ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ಮಹಾನಗರ ಪಾಲಿಕೆ ಕಚೇರಿ ಬಲಭಾಗದಲ್ಲಿರುವ ನೌಕರರ ಸಭಾಂಗಣದ ಕಟ್ಟಡದಲ್ಲಿ ವಿದ್ಯುನ್ಮಾನ ಮತ ಯಂತ್ರ ಮತದಾನ ಪ್ರಾತ್ಯಕ್ಷಿಕೆ ಆರಂಭಿಸಲಾಗಿದ್ದು, ಸೋಮವಾರದಿಂದ ಹತ್ತು ದಿನಗಳ ಕಾಲ ಪ್ರತಿ ದಿನ ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ಈ ಪ್ರಾತ್ಯಕ್ಷಿಕೆ ನಡೆಯಲಿದೆ.
ಇಂದು ಸಂಜೆ ಮಾಧ್ಯಮದವರಿಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟ ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ದಾವಣಗೆರೆ ಉತ್ತರ ಹಾಗೂ ದಾವಣಗೆರೆ ದಕ್ಷಿಣ ಮತ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾಧ್ಯಮದವರು, ರಾಜಕೀಯ ಮುಖಂಡರು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಗಾಗಿ ಮಾದರಿ ಮತಗಟ್ಟೆ ಕೇಂದ್ರಗಳನ್ನು ರಚಿಸಿ, ವಿದ್ಯುನ್ಮಾನ ಮತ ಯಂತ್ರ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ಹೇಳಿದರು.
ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 136 ಸ್ಥಳಗಳಲ್ಲಿ 212 ಮತಗಟ್ಟೆ ಕೇಂದ್ರ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 123 ಸ್ಥಳಗಳಲ್ಲಿ 242 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಿ, ಮತದಾರರಿಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ಪ್ರತಿ ಕೇಂದ್ರದಲ್ಲಿ ದಿನಕ್ಕೆ ಕನಿಷ್ಟ 50 ಮತದಾರರಿಂದ ಅಣಕು ಮತದಾನ ಮಾಡಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಉತ್ತರ-ದಕ್ಷಿಣ ವಿಧಾನಸಭಾ ಕ್ಷೇತ್ರದ 454 ಕೇಂದ್ರಗಳಲ್ಲಿ ಮತದಾನ ಪ್ರಾತ್ಯಕ್ಷಿಕೆ
ಪ್ರತಿಯೊಬ್ಬರಲ್ಲೂ ಮತದಾನದ ಅರಿವು ಮೂಡಿಸಿದಾಗ ಮತದಾನದ ಪ್ರಮಾಣ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗದ ಸೂಚನೆಯಂತೆ ಪ್ರಾತ್ಯಕ್ಷಿಕೆ
ನೀಡಿ ಅರಿವು ಮೂಡಿಸಲಾಗುತ್ತಿದೆ.
– ರೇಣುಕಾ, ಪಾಲಿಕೆ ಆಯುಕ್ತರು.
ಮಾಯಕೊಂಡ ವ್ಯಾಪ್ತಿಯಲ್ಲಿ ಪ್ರಾತ್ಯಕ್ಷಿಕೆ
ದಾವಣಗೆರೆ, ಫೆ. 6 – ಇವಿಎಂ ಮೂಲಕ ಮತದಾನ ಮಾಡುವ ವಿಧಾನ ಕುರಿತು ಜಾಗೃತಿ ಮೂಡಿಸುವ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಎಂ.ಬಿ. ಅಶ್ವತ್ಥ್ ಚಾಲನೆ ನೀಡಿದರು. ಚುನಾವಣಾ ಆಯೋಗದ ಸೂಚನೆಯಂತೆ ಪ್ರಸ್ತುತ ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಂದು 23 ಸಿಬ್ಬಂದಿಯ ತಂಡ, 46 ಸ್ಥಳಗಳಲ್ಲಿ ಮತದಾನದ ಬಗ್ಗೆ ಜಾಗೃತಿ ನೀಡಲಿದೆ ಎಂದು ಅಶ್ವತ್ಥ ತಿಳಿಸಿದರು.
ಪ್ರತಿ ದಿನ ಅಣಕು ಮತದಾನ ಬಳಿಕ ಮತ ಯಂತ್ರಗಳನ್ನು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಪಾಲಿಕೆ ಕಚೇರಿಯಲ್ಲಿಯೇ ನಿಗದಿಪಡಿಸಿರುವ ಮಾದರಿ ಭದ್ರತಾ ಕೊಠಡಿ ಯಲ್ಲಿಡಲಾಗುವುದು. ಭದ್ರತಾ ಕೊಠಡಿಗೂ ಪೊಲಿಸ್ ಭದ್ರತೆ ಒದಗಿಸಲಾಗುವುದು ಎಂದರು.
ಪ್ರಾತ್ಯಕ್ಷಿಕೆಗಾಗಿ ಅಗತ್ಯ ಡೆಮ್ಮಿ ಮತ ಯಂತ್ರ, ವಿವಿ ಪ್ಯಾಟ್‌ಗಳನ್ನು ಆಯೋಗ ಒದಗಿಸಿದೆ. ಮತದಾನದ ಬಳಿಕ ಪ್ರತಿದಿನ ಮತದಾನದ ಯಂತ್ರಗಳನ್ನು ಅಗತ್ಯ ಭದ್ರತೆಯೊಂದಿಗೆ ಮಾದರಿ ಭದ್ರತಾ ಕೊಠಡಿಯಲ್ಲಿರಿಸಲಾಗುವುದು. ಇದಕ್ಕಾಗಿ ಅಗತ್ಯವಿರುವ ಎಲ್ಲ ಹಂತದ ಸಿಬ್ಬಂದಿ, ಸೆಕ್ಟರ್ ಹಾಗೂ ಇತರೆ ಅಧಿಕಾರಿಗಳನ್ನು ಆಯೋಗದ ಮಾರ್ಗಸೂಚಿಯಂತೆ ನಿಯೋಜಿಸಲಾಗಿದೆ. ಒಟ್ಟಾರೆ ನೈಜ ಮತದಾನದಂತೆ ಎಲ್ಲ ಪ್ರಕ್ರಿಯೆಗಳ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.
ಪಾಲಿಕೆಯಲ್ಲಿನ ಪ್ರಾತ್ಯಕ್ಷಿಕೆ ಕೇಂದ್ರವನ್ನು ಮಾದರಿ ಮತಗಟ್ಟೆಯ ರೀತಿಯಲ್ಲಿ ಸಿದ್ಧಪಡಿಸಲಾಗಿತ್ತು. ಮತಗಟ್ಟೆ ಅಧಿಕಾರಿ, ಮತಗಟ್ಟೆ ಸಹಾಯಕ ಸೇರಿದಂತೆ ಸಿಬ್ಬಂದಿ ಮತದಾರರ ನೋಂದಣಿ, ಮತ ಯಂತ್ರ, ವಿವಿ ಪ್ಯಾಟ್ ಬಳಸಿ ಮಾಧ್ಯಮದವರಿಂದ ಅಣಕು ಮತದಾನ ಪ್ರಕ್ರಿಯೆ ನಡೆಸಿದರು. ತಮ್ಮ ಹೆಸರು ನೋಂದಣಿ ಮಾಡಿ, ಮತ ಚಲಾಯಿಸಿ, ಚಲಾಯಿಸಿರುವ ಮತವನ್ನು ವಿವಿಪ್ಯಾಟ್‌ನಲ್ಲಿ ಖಚಿತಪಡಿಸಿಕೊಂಡರು.
ಸಹಾಯಕ ಚುನಾವಣಾಧಿಕಾರಿ ಹಾಗೂ ಪರಿಷತ್ ಕಾರ್ಯದರ್ಶಿ ಕೆ. ಜಯಣ್ಣ, ಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುನಿಲ್ ಈ ಸಂದರ್ಭದಲ್ಲಿದ್ದರು. ಮತಗಟ್ಟೆ ಅಧಿಕಾರಿಗಳಾಗಿ ಕಿರಣ್, ವಿನಾಯಕ ಕಾರ್ಯ ನಿರ್ವಹಿಸಿದರು.