ಸತ್ಯ, ಶುದ್ಧ ಕಾಯಕ ಮಾಡುತ್ತಿದ್ದ ಮಾಚಿದೇವರು

ಸತ್ಯ, ಶುದ್ಧ ಕಾಯಕ ಮಾಡುತ್ತಿದ್ದ ಮಾಚಿದೇವರು

ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಜಿ.ಪಂ. ಸಿಇಒ ಡಾ. ಎ. ಚನ್ನಪ್ಪ ಸ್ಮರಣೆ

ದಾವಣಗೆರೆ, ಫೆ.1- ಎಲ್ಲಾ ಶರಣರೊಂದಿಗೆ ಇದ್ದ ಮಾಚಿದೇವರಿಗೆ ಅಗಾಧ ಜ್ಞಾನವಿತ್ತು. ಅವರು ಪ್ರಕೃತಿ ಮಡಿಲಲ್ಲಿ ಇದ್ದ ಕಾರಣ ಪ್ರಕೃತಿಯನ್ನು ಕಾಪಾಡುವ ಜತೆಗೆ ಸತ್ಯ, ಶುದ್ಧವಾದ ಕಾಯಕ ಮಾಡುತ್ತಿದ್ದರು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಡಾ. ಎ. ಚನ್ನಪ್ಪ ತಿಳಿಸಿದರು.

ಅವರು, ಇಂದು ವಿನೋಬನಗರದ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಮಾಜ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದಲ್ಲಿ ಆಯೋಜಿಸ ಲಾಗಿದ್ದ ವಚನ ಸಂರಕ್ಷಕ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಡಿವಾಳ ಮಾಚಿದೇವರು ಅಂದಿನ ದಿನಮಾನಗಳಲ್ಲೇ ಭ್ರಷ್ಟತನದ ವಿರುದ್ದ ಹೋರಾಟ ನಡೆಸಿದವರು. 12ನೇ ಶತಮಾನ ಎಂದರೆ ಕಾಯಕದ ಕಾಲ. ಕಾಯಕ ಹೊರತುಪಡಿಸಿ ಯಾವ ಶರಣರೂ ಏನನ್ನೂ ಮಾಡುತ್ತಿರಲಿಲ್ಲ. ಕಾಯಕದ ನಂತರ ಅನುಭವ ಮಂಟಪದಲ್ಲಿ ಸಾಮಾಜಿಕ ಚಿಂತನೆಯಲ್ಲಿ ತೊಡಗಿರುತ್ತಿದ್ದರು ಎಂದರು.

 12ನೇ ಶತಮಾನದಲ್ಲಿ ಆಗಿನ ರಾಜ ಬಿಜ್ಜಳನ ಮುಂದೆಯೇ ವೃತ್ತಿಯಲ್ಲಿ ಸತ್ಯ, ಶುದ್ಧತೆ ಇರುವ ಶಿವಶರಣರ ಬಟ್ಟೆಗಳನ್ನು ಮಾತ್ರ ಶುದ್ಧಗೊಳಿಸುವ ಕಾಯಕ ನಾನು ಮಾಡುತ್ತಿದ್ದೇನೆ ಎಂದು ಮಾಚಿದೇವರು ನಿಷ್ಟೂರವಾಗಿ ಹೇಳಿ ದ್ದರು. ಅಂತಹ ದಿಟ್ಟತನದ ವ್ಯಕ್ತಿತ್ವ ಮಡಿವಾಳ ಮಾಚಿದೇವರದು ಎಂದರು. ಮಹನೀಯರ ಜಯಂತಿಗಳಲ್ಲಿ ಪುಸ್ತಕ ಪ್ರಕಟಿಸುವುದು ಓದುವುದು, ಮಕ್ಕಳಿಗೂ ಓದಿಸುವುದರ ಮೂಲಕ ಶರಣರ ಬಗ್ಗೆ ತಿಳಿಸುವ ಕೆಲಸ ಮಾಡಬೇಕು. ಮಾಚಿದೇವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ಭಾರತದ ಎಲ್ಲಾ ಸಮುದಾಯಗಳು ಕಾಯಕ ನಿರತ ಸಮಾಜಗಳಾಗಿದ್ದು, ಶರಣರ ತತ್ವ, ಆದರ್ಶಗಳನ್ನು ನೆನಪು ಮಾಡಿಕೊಂಡು ಮುಂದೆ ಸಾಗಬೇಕೆಂದು ಕರೆ ನೀಡಿದರು.

ಹಾವೇರಿಯ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕ ತೇಜಪ್ಪ ಎನ್. ಮಡಿವಾಳರ ಮಾತನಾಡಿ, ಮಾಚಿದೇವರನ್ನು ಪೌರಾಣಿಕ ಮತ್ತು ವೈಜ್ಞಾನಿಕ ಹಿನ್ನೆಲೆಯಲ್ಲಿ ಗುರುತಿಸಬಹುದು. ಶರಣರು ಪವಾಡ ಪುರುಷರಲ್ಲ. ಅವರು ಕಾಯಕ ಮತ್ತು ದಾಸೋಹ ಪ್ರಿಯರು. ಅಂತೆಯೇ ಮಾಚಿದೇವರು ಕಥೆಯಿಂದ ದೊಡ್ಡವರಾದವರಲ್ಲ. ಅವರ ಕಾಯಕದಿಂದ ದೊಡ್ಡವರಾದವರು. ಶಿವಶರಣರು ಕೇವಲ ಕಾಯಕ ಯೋಗಿಗಳು. ಶರಣರು ಎಂಎ, ಪಿಹೆಚ್‍ಡಿ ಮಾಡಿದವರಲ್ಲ. ಶರಣರು ಕನಸಿನಲ್ಲೂ ಕಾಯಕ ಜಪಿಸುತ್ತಿದ್ದರು ಎಂದರು.

ಮಾಚಿದೇವರನ್ನು ಗಣಾಚಾರಿಯಾಗಿಯೂ ನೋಡುತ್ತೇವೆ. ಸೇನೆಯನ್ನೇ ನಾವುಗಳು ಗಣಾಚಾರಿ ಎನ್ನುತ್ತೇವೆ. ಕಲ್ಯಾಣ ಕ್ರಾಂತಿಯಲ್ಲಿ ವಚನದ ಕಟ್ಟುಗಳನ್ನು ರಕ್ಷಿಸುವ ಮೂಲಕ ಸಮಾಜದ ಎಲ್ಲಾ ಸ್ತರದ ಕಲುಷಿತ ಬಟ್ಟೆ, ಮನಸ್ಸನ್ನು ಸ್ವಚ್ಛ ಮಾಡಿದರು. ಸರೋವರಕ್ಕೆ ಸಮಾನವಾದ ವ್ಯಕ್ತಿ ಯಾರಾದರೂ ಇದ್ದರೆ ಅದು ಮಾಚಿದೇವರು. ಪುರವಂತಿಕೆ ಮಾಡುವ ಅಗ್ನಿ ಕುಂಡ ಕಂಡುಹಿಡಿದಿದ್ದು ಮಡಿವಾಳರು. ಬಿಜ್ಜಳ ಸೈನ್ಯದ ಮನೋಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲು ಕಂಡುಹಿಡಿದಿದ್ದು ಎಂದು ಸ್ಮರಿಸಿದರು.

ವಚನ ರಕ್ಷಣೆಗಾಗಿ ಕಲ್ಯಾಣದಿಂದ ಉಳುವಿಗೆ ಹೋದಾಗ ಹೆಂಡತಿಯನ್ನು ಬಿಟ್ಟುಹೋದರು. ಆದರೆ ವಚನಗಳ ಗಂಟನ್ನು ತೆಗೆದುಕೊಂಡು ಹೋದರು. ಬಿಜ್ಜಳ ರಾಜ ಎಲ್ಲಾ ಶರಣರನ್ನ, ಅವರು ಬರೆದ ವಚನಗಳನ್ನು ಕಂಡಲ್ಲಿ ಸುಟ್ಟು ಹಾಕಿ ಎಂದು ಆದೇಶಿಸಿದ್ದ. ಅವರಿಂದ ಪ್ರಾಣದ ಹಂಗು ತೊರೆದು ವಚನ ರಕ್ಷಿಸಿದರು. ಅಂತಹ ದಾರ್ಶನಿಕರ ನೆನೆಯುವಿಕೆ ನಮಗೆ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ, ಕಾರ್ಯಾಧ್ಯಕ್ಷ ಹೆಚ್.ಜಿ.ಉಮೇಶ್, ಪತ್ರಕರ್ತ ಎಂ.ವೈ.ಸತೀಶ್ ಧನಂಜಯ, ವಿಜಯಕುಮಾರ್, ಡೈಮಂಡ್ ಮಂಜುನಾಥ್, ಎಂ.ಮಂಜುನಾಥ್, ಪರಶುರಾಮ್, ಎಂ.ರುದ್ರೇಶ್, ಸುಭಾಷ್, ಬಾತಿಶಂಕರ್, ಎಂ.ಡಿ.ಹನುಮಂತಪ್ಪ, ಅಜಯ್‍ಕುಮಾರ್, ಕಿಶೋರ್‍ಕುಮಾರ್, ನಾಗಮ್ಮ, ಶ್ರೀಧರ್, ಹುಲಿಕಟ್ಟೆ ರಾಮಚಂದ್ರಪ್ಪ, ಎನ್.ಓಂಕಾರಪ್ಪ, ಅಂಜಿನಪ್ಪ ಪೂಜಾರ್ ಹಾಗೂ ಇತರರು ಇದ್ದರು.

ಇದೇ ವೇಳೆ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಎಸ್.ಹರ್ಷಕುಮಾರ್, ಎಂ.ಕಿರಣ್ ಇವರನ್ನು ಸನ್ಮಾನಿಸಲಾಯಿತು.

error: Content is protected !!