ದಾವಣಗೆರೆ, ಜ.29- ವಿದ್ಯೆಯಿಲ್ಲದೆ ಪ್ರಪಂಚದಲ್ಲಿ ಹೇಗಾದರೂ ಬದುಕಬಹುದು. ಆದರೆ, ಬುದ್ಧಿ ಇಲ್ಲದೇ ಬದುಕುವುದು ತೀರಾ ದುಸ್ತರ ಎಂದು ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ಅಭಿಪ್ರಾಯ ಪಟ್ಟರು.
ಅವರು ಡಾ.ಬಸವನಗೌಡ ಮೆಮೋ ರಿಯಲ್ ಎಜುಕೇಶನ್ ಟ್ರಸ್ಟ್‌ನ ವಿನಾ ಯಕ ಪಬ್ಲಿಕ್ ಶಾಲೆ ಮತ್ತು ಕಾನ್ವೆಂಟ್ ಶಾಲೆಗಳ 23ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಶಾಲಾ ಶಿಕ್ಷಣವು ವಿದ್ಯೆ ಕೊಡುವುದರತ್ತ ಕೇಂದ್ರೀಕೃತವಾಗಿರು ತ್ತದೆ. ಮಕ್ಕಳಿಗೆ ಬುದ್ಧಿ ಕೊಡುವ ಪ್ರಕ್ರಿಯೆಯು ಮನೆಗಳಲ್ಲಿಯೇ ಆಗಬೇಕಾಗಿದ್ದು, ಪೋಷಕರ ಹೊಣೆ ಮಹತ್ತರವಾಗಿದೆ. ಪ್ರಸ್ತುತ ಸಮಾಜದಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳನ್ನು ಹೆಚ್ಚಾಗಿ ಕಾಣುತ್ತಿದ್ದೇವೆ. ಆದರೆ, ಸಮಾಜದ ಸಣ್ಣಪುಟ್ಟ ಸವಾಲುಗಳನ್ನು ಎದುರಿಸಲು ಅಂಜುವುದನ್ನೂ ಕಾಣುತ್ತಿದ್ದೇವೆ. ಇದಕ್ಕೆ ಕಾರಣ ವಿದ್ಯೆ ಒದಗಿದೆಯೇ ಹೊರತು ಬುದ್ಧಿ ಕೊಡುವ ಪ್ರಕ್ರಿಯೆಯಲ್ಲಿ ಹಿಂಜರಿತವಾಗಿದೆ ಎಂಬುದು ಸಾಬೀತಾಗುತ್ತದೆ. ಈ ನಿಟ್ಟಿನಲ್ಲಿ ಆತ್ಮಾವಲೋಕನವು ಪೋಷಕರಲ್ಲೂ ಆಗಬೇಕಿದೆ ಎಂದ ಮಂಜುನಾಥ್, ದಶಕಗಳ ಹಿಂದೆಯೇ ಹಳೆ ದಾವಣಗೆರೆ ಪ್ರದೇಶದಲ್ಲಿ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಉದ್ದೇಶದಿಂದ ವಿನಾಯಕ ಸ್ಕೂಲ್ ಆರಂಭವಾದದ್ದು ಶ್ಲ್ಯಾಘನೀಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ದಾವಣಗೆರೆ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಅಂಬಣ್ಣ ಮಾತನಾಡಿ, ಮಕ್ಕಳಿಗೆ ಶಾಲಾ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವನ್ನೂ ಕೊಡಬೇಕಾದ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಹೆಚ್.ಜಿ.ಪ್ರಕಾಶ್ ಮಾತನಾಡಿ, ಸರ್ವ ಧರ್ಮೀ ಯರಿಗೂ ಏಕ ದೇವಸ್ಥಾನವೆಂದರೆ ಅದು ಶಾಲೆ ಎಂದರು.
ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಡೀನ್ ಡಾ. ಮಲ್ಲಿಕಾರ್ಜುನ ಎಸ್.ಹೊಳಿ ಮಾತನಾಡಿ, ಆಧುನಿಕ ತಂತ್ರಜ್ಞಾನಗಳ ಮಾಹಿತಿಯು ಮಾಧ್ಯಮಿಕ ಶಾಲಾ ಹಂತದಿಂದಲೂ ಕೊಡುವುದು ಇಂದಿನ ಅವಶ್ಯ ಎಂದರು.
ಜಿಲ್ಲಾ ಶಾಶ್ವತ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಅಧ್ಯಕ್ಷ ತ್ಯಾವಣಿಗಿ ವೀರಭದ್ರ ಸ್ವಾಮಿ ಮಾತನಾಡಿ, ಮೊಬೈಲ್ ಕೊಡುವ ಮೂಲಕ ಮಕ್ಕಳ ಭವಿಷ್ಯ ಹಾಳು ಮಾಡದಿರಿ ಎಂದು ಪೋಷಕರಲ್ಲಿ ಮನವಿ ಮಾಡಿದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿ ಡಾ. ಶಶಿಕಲಾ ಕೃಷ್ಣಮೂರ್ತಿ ಮಾತನಾಡಿ, ಬಾಯಿಯೇ ನಮಗೆ ದೊಡ್ಡ ಶತ್ರುವಾಗಲು ಬಿಡಬಾರದು. ತಿನ್ನುವಲ್ಲಿ, ಮಾತಾಡುವಲ್ಲಿ ಎಚ್ಚರಿಕೆ ಬೇಕು ಎಂದು ತಿಳಿ ಹೇಳಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ವೀರೇಶ್ ಬಿರಾದಾರ್ ಶಿಕ್ಷಣದೊಂದಿಗೆ ಸಂಸ್ಕಾರವೂ ಅಗತ್ಯ ಎಂದರು. ಭಾಗ್ಯಲಕ್ಷ್ಮಿ ಹಾಗೂ ಶಾಹೀನ್ ನಿರೂಪಿಸಿದ ಕಾರ್ಯಕ್ರಮ ದಲ್ಲಿ ಸುಚಿತ್ರಾ ಸ್ವಾಗತಿಸಿದರು. ಸರೋಜಾ ವಂದಿಸಿದರು.
ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊ ಟ್ಟರು, ಚನ್ನಗಿರಿ ವಿರೂಪಾಕ್ಷಪ್ಪ ಧರ್ಮ ಶಾಲಾದಲ್ಲಿ ಕಾರ್ಯಕ್ರಮ ನೆರವೇರಿತು.