`ಜನತಾವಾಣಿ’ ಸಹಯೋಗದ ವನಿತಾ ಸಮಾಜದ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ವಿವಿ ಹಿರಿಯ ಪ್ರಾಧ್ಯಾಪಕಿ ಪ್ರೊ. ವಿಜಯಾದೇವಿ
ದಾವಣಗೆರೆ, ಜ.29- ಸಾಧನೆಗೈದ ಮಹಿಳೆಯರ ಬಗ್ಗೆಯೂ ನೆನಪಿಸಿಕೊಳ್ಳುವ ಅಗತ್ಯವಿದೆ. ಅಲ್ಲದೇ, ಮಹಿಳೆಯರ ಸಾಮರ್ಥ್ಯವನ್ನು ಸಮಾಜ ಗುರುತಿಸುವ ಕೆಲಸ ಆಗಬೇಕು ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎಮೆರಿಟಿಸ್ ಪ್ರಾಧ್ಯಾಪಕಿ ಪ್ರೊ. ವಿಜಯಾದೇವಿ ಸದಾಶಯ ವ್ಯಕ್ತಪಡಿಸಿದರು.
ಅವರು, ಇಂದು ನಗರದ ಕುವೆಂಪು ಕನ್ನಡ ಭವನದಲ್ಲಿ ಜನತಾವಾಣಿ ಕನ್ನಡ ದಿನಪತ್ರಿಕೆ ಸಹಯೋಗದಲ್ಲಿ ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಘಟಕ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, 28 ನೇ ವಾರ್ಷಿ ಕೋತ್ಸವ, ಪುಸ್ತಕ ಬಿಡುಗಡೆ, ದತ್ತಿ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಸಮಾ ರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯರನ್ನು ಸಾಮರ್ಥ್ಯದ ನೆಲೆ ಯಲ್ಲಿ ಗುರುತಿಸುವ ಕೆಲಸವಾಗುತ್ತಿಲ್ಲ ವೆಂದರೆ ನಾವಿನ್ನೂ ಎಲ್ಲಿದ್ದೇವೆ? ಎಂಬ ಪ್ರಶ್ನೆ ಮೂಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದ ರಲ್ಲದೇ, ಸಾಧನೆ ಮೆರೆದ ಮಹಿಳೆಯರ ಶೌರ್ಯ, ಪ್ರತಾಪ, ಬುದ್ಧಿವಂತಿಕೆಗಳ ಬಗ್ಗೆ ಹೇಳದಿದ್ದರೆ ಅದು ಮುಂದಿನ ಪೀಳಿಗೆಗೆ ತಿಳಿಯುವುದಿಲ್ಲ ಎಂದು ತಿಳಿಸಿದರು.
ಬಾಂಧವ್ಯ ಬೆಸೆದು ಆನಂದ ಕೊಡುವ ಶಕ್ತಿ ಸಾಹಿತ್ಯಕ್ಕಿದೆ. ಎಲ್ಲಾ ಸಾಹಿತ್ಯದ ಪ್ರಕಾರ ಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುವುದು ಸಾಹಿತ್ಯ ಪರಿಷತ್ತಿಗೆ. ಮಹಿಳಾ ಸಾಹಿತಿಗಳು ಎಂದಿಗೂ ಕಳೆದು ಹೋದವ ರಾಗದೇ, ಕಳೆದು ಹೋದವರನ್ನು ಸಮಾ ಜದ ಮುಖ್ಯ ವಾಹಿನಿಗೆ ತಂದು ಬೆಳೆಸು ವಂತವರಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಜಿಲ್ಲೆಯಲ್ಲಿ 190 ದತ್ತಿಗಳು ಮತ್ತು ದಾವಣಗೆರೆ ತಾಲ್ಲೂಕಲ್ಲಿ 80 ದತ್ತಿಗಳಿವೆ. ಈ ರೀತಿ ಅವರ ಹೆಸರಲ್ಲಿ ಪ್ರಶಸ್ತಿ ನೀಡುವ ಮೂಲಕ ವರ್ಷಕ್ಕೊಮ್ಮೆ ಅವರನ್ನು ಸ್ಮರಿಸಲಾಗುತ್ತದೆ. ಈಗಾಗಲೇ ಸಾಹಿತ್ಯ ಪರಿಷತ್ತಿನಲ್ಲಿ ಅವಿರತ ಕಾರ್ಯಕ್ರಮಗಳು ನಡೆಯುತ್ತಿದ್ದು, ನನ್ನ ಅವಧಿಯಲ್ಲಿ ಇದು 79ನೇ ಕೃತಿ ಬಿಡುಗಡೆಯಾಗಿದೆ. ಯಾರೇ ಕೃತಿ ಬಿಡುಗಡೆ ಮಾಡಲು ನಮ್ಮ ಸಾಹಿತ್ಯ ಪರಿಷತ್ತು ಬಾಗಿಲು ತೆರೆದಿರುತ್ತದೆ. ನಮ್ಮ ಸಂಯುಕ್ತಾಶ್ರಯದಲ್ಲಿ ಮಾಡಿದರೆ ಭವನ ಉಚಿತವಾಗಿ ನೀಡುತ್ತೇವೆ ಎಂದರು.
ಕಳೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಅನುದಾನ ಮೀಸಲಿಡಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ಈಚೆಗೆ ಹಾವೇರಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕನ್ನಡ ಸಾಹಿತ್ಯ ಪರಿಷತ್ ನ ಎಲ್ಲಾ ನಿರ್ಣಯಗಳಿಗೂ ಬದ್ಧ ಎಂದು ಭರವಸೆ ನೀಡಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಮಲ್ಲಮ್ಮ ನಾಗರಾಜ್, ವನಿತಾ ಮಹಿಳಾ ವೇದಿಕೆ ಶುರುವಾಗಿ 22 ವರ್ಷವಾಯಿತು. ಟಿ. ಗಿರಿಜಮ್ಮ ಈ ವೇದಿಕೆಯನ್ನು ಹುಟ್ಟಿಹಾಕಿದರು. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ವನಿತಾ ಸಮಾಜದಂತಹ ವೇದಿಕೆಯನ್ನು ಕಟ್ಟಿದವರು ಮಾಜಿ ಶಿಕ್ಷಣ ಸಚಿವೆ ನಾಗಮ್ಮ ಕೇಶವಮೂರ್ತಿ ಎಂದು ಹೇಳಿದರು.
ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿರುವ ಪ್ರತಿಭಾನ್ವಿತ ಮಹಿಳೆಯರನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ `ಜನತಾವಾಣಿ’ ಸಂಸ್ಥಾಪಕರಾಗಿದ್ದ ಹೆಚ್.ಎನ್. ಷಡಾಕ್ಷರಪ್ಪ ಅವರು ತಮ್ಮ ತಾಯಿ – ತಂದೆ ಹೊನ್ನೇನಹಳ್ಳಿ ಲಿಂ. ಹನುಮಕ್ಕ ಮತ್ತು ಲಿಂ. ನಂಜಪ್ಪ ಮೆಳ್ಳೇಕಟ್ಟೆ ದಂಪತಿ ಸ್ಮರಣಾರ್ಥ ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯ ಶ್ರೀ’ ಪ್ರಶಸ್ತಿಯನ್ನು ಸ್ಥಾಪಿಸಿದ್ದು, `ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್ ಅವರು ನಿರಂತರವಾಗಿ ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯು ಕಳೆದ 28 ವರ್ಷಗಳಿಂದ ಪ್ರತಿ ವರ್ಷವೂ ಈ ಪ್ರಶಸ್ತಿಯನ್ನು ಕೊಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ, ಶಿಕ್ಷಕಿ ಡಿ.ಸಿ. ಚಂಪಾ ಅವರಿಗೆ ‘ಹೊನ್ನೇನಹಳ್ಳಿ ಹನುಮಕ್ಕ ನಂಜಪ್ಪ ಮೆಳ್ಳೆಕಟ್ಟೆ ಸ್ಮರಣಾರ್ಥ ‘ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯಶ್ರೀ’ ಪ್ರಶಸ್ತಿಯನ್ನು ಪ್ರಶಸ್ತಿ ಸ್ಥಾಪಕರಾದ ಹೆಚ್.ಎನ್. ಷಡಾಕ್ಷರಪ್ಪ ಅವರ ಧರ್ಮಪತ್ನಿ ಜಯಶೀಲಾ ಷಡಾಕ್ಷರಪ್ಪ ಅವರು ಪ್ರದಾನ ಮಾಡಿ, ಗೌರವಿಸಿದರು. ಇದೇ ವೇಳೆ ಲೇಖಕ ಕೆ.ಆರ್. ಸುಮತೀಂದ್ರ ಅವರ ಕಥಾ ಸಂಕಲನ `ತ್ಯಾಗಮಯಿ’ ಕೃತಿ ಲೋಕಾರ್ಪಣೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಲೇಖಕ ಸುಮತೀಂದ್ರ, ಬಿ.ಕೆ. ಬಸವರಾಜಪ್ಪ, ನೀಲಗುಂದ ಜಯಮ್ಮ ಸಿದ್ದಲಿಂಗಪ್ಪ, ಶೈಲಜಾ ಪಾಟೀಲ್ ಸೇರಿದಂತೆ ಇತರರು ಇದ್ದರು. ವೀಣಾ ಕೃಷ್ಣಮೂರ್ತಿ ಸ್ವಾಗತಿದರು.