ಭಾರತ ಅಧ್ಯಾತ್ಮಿಕತೆಯ ಜಗದ್ಗುರು

ಭಾರತ ಅಧ್ಯಾತ್ಮಿಕತೆಯ ಜಗದ್ಗುರು

ಕಿತ್ತೂರಿನಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಉಜ್ಜಯಿನಿ ಜಗದ್ಗುರು

ದಾವಣಗೆರೆ, ಜ. 23- ಭಾರತ ಮಂದಿರಗಳ ದೇಶ. ಇಲ್ಲಿರುವಷ್ಟು ಗುಡಿ-ಗುಂಡಾರಗಳು, ಮಠ-ಮಂದಿರಗಳನ್ನು ಪ್ರಪಂಚದ ಯಾವ ರಾಷ್ಟ್ರಗಳಲ್ಲೂ ಕಾಣಲು ಸಾಧ್ಯವಿಲ್ಲ. ಧಾರ್ಮಿಕತೆ, ಅಧ್ಯಾತ್ಮಿಕತೆಯ ಜಗದ್ಗುರು ಸ್ಥಾನ ಪಡೆದಿರುವ ಯಾವುದಾದರೂ ದೇಶ ಇದ್ದರೆ ಅದು ಭಾರತ ದೇಶ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.

ದಾವಣಗೆರೆ ತಾಲ್ಲೂಕು ಕಿತ್ತೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ, ಶ್ರೀ ವಿನಾಯಕ, ಶ್ರೀ ಆಂಜನೇಯ ದೇವಸ್ಥಾನಗಳ ಕಳಸಾರೋಹಣ, ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರಪಂಚ ಎಂಬ ಬೃಹತ್ ಮನೆಯಲ್ಲಿ ಅಮೆರಿಕಾ, ರಷ್ಯಾ ಮುಂತಾದ ದೇಶಗಳು ಅಡುಗೆ ಮನೆ, ಮಲಗುವ ಕೋಣೆಗಳೆಂದು ಪರಿಗಣಿಸಿದರೆ, ಭಾರತಕ್ಕೆ ಮಾತ್ರ ದೇವರಕೋಣೆ ಸ್ಥಾನವನ್ನು ನೀಡಲಾಗಿದೆ ಎಂದರು. ದೇಗುಲ ನಿರ್ಮಿಸಿ, ದೇವರನ್ನು ಪ್ರತಿಷ್ಠಾಪಿಸುವುದು ಸುಲಭದ ಕಾರ್ಯ. ಆದರೆ ದೇವರಲ್ಲಿನ ಮೌಲ್ಯಗಳು, ಆದರ್ಶಗಳು, ಚಾರಿತ್ರ್ಯ ಗುಣಗಳನ್ನು ಭಕ್ತರು ತಮ್ಮ ಜೀವನದ ನಿತ್ಯಕರ್ಮದಲ್ಲಿ ಚಾಚೂ ತಪ್ಪದೇ ಪಾಲಿಸಿದಾಗ ದೇವಸ್ಥಾನ ಕಟ್ಟಿದ್ದಕ್ಕೂ ಸಾರ್ಥಕತೆ ಬರುತ್ತದೆ ಎಂದು ಹೇಳಿದರು.

ದೇವಾಲಯಗಳು ಸಾಂಸ್ಕೃತಿಕ ಕೇಂದ್ರಗಳು. ವಿದೇಶಗಳಲ್ಲಿ ದೇಹವನ್ನು ಪ್ರೀತಿಸುತ್ತಾರೆ. ಆದರೆ ದೇವಾಲಯ, ದೇವರನ್ನು ಪ್ರೀತಿಸುವವರು ಭಾರತೀಯರು. ಭಾರತದಲ್ಲಿ ಹೆಜ್ಜೆ ಹೆಜ್ಜೆಗೂ ದೇವಾಲಯಗಳನ್ನು ನೋಡುತ್ತೇವೆ. ದೇಗುಲಗಳನ್ನು ಗುರುತಿಸುವಲ್ಲಿ ಅಸಮರ್ಥರಾಗಿದ್ದು, ದೇವರಲ್ಲಿನ ಸಹನೆ, ತಾಳ್ಮೆ, ಉನ್ನತ ಆದರ್ಶ ಗುಣಗಳು ಮನುಷ್ಯರಲ್ಲಿ ಬೆಳೆದು ಬರುವ ಅಗತ್ಯವಿದೆ ಎಂದರು.

ಧರ್ಮ ಜೋಡಿಸುವ ಸೂಜಿಯ ಕೆಲಸವನ್ನು, ಜಾತಿ ಕತ್ತರಿಯ ಕೆಲಸವನ್ನು ಮಾಡುತ್ತದೆ. ಮನುಷ್ಯ ಸಂಬಂಧಗಳನ್ನು ಬೆಸೆಯುವಂತೆ ಮಾಡಬೇಕು. ದೇವರು, ಧರ್ಮ, ಜಾತಿಯ ಹೆಸರಿನಲ್ಲಿ ಮನುಷ್ಯತ್ವದ ಗೋಡೆಗಳನ್ನು ಒಡೆಯುವ ಕೆಲಸಗಳಾಗಬಾರದು. ಸರ್ವಧರ್ಮ ಸಮನ್ವಯತೆಯ, ಸಾಮರಸ್ಯದ ಬದುಕು ಬದುಕಬೇಕು ಎಂದು ಹಿತ ನುಡಿದರು.

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮೊಬೈಲ್ ದಾಸರಾಗಿದ್ದು, ಮೊಬೈಲ್ ಹಿಡಿದರೆ ನಿನ್ನನ್ನು ತಲೆ ತಗ್ಗಿಸುವಂತೆ ಮಾಡುತ್ತದೆ. ಅದೇ ಒಂದು ಪುಸ್ತಕ ತಲೆ ಎತ್ತುವಂತೆ ಮಾಡುತ್ತದೆ. ಮೊಬೈಲ್ ಬಳಕೆಗೆ ಕಡಿವಾಣ ಹಾಕಿ, ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕೆಂದರು.

ನಾಡಿನಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಿ, ಉತ್ತಮ ಬೆಳೆ ಬಂದು,  ರೈತರಿಗೆ ಸೂಕ್ತ ಮಾರುಕಟ್ಟೆ ದೊರಕುವಂತಾಗಲಿ. ತನ್ಮೂಲಕ ಅನ್ನದಾತನ ಬದುಕು ಹಸನುಗೊಳ್ಳಲಿ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲಿ. ಸಹಬಾಳ್ವೆ, ಸಮನ್ವಯತೆ, ಸೌಹಾರ್ದತೆಯ ಬದುಕು ನಿಮ್ಮದಾಗಲಿ ಎಂದು ಶುಭ ಹಾರೈಸಿದರು.

ಧರ್ಮ, ದೇವರು, ಅಧ್ಯಾತ್ಮ ಮುಂತಾದ ಕೊಡುಗೆಯನ್ನು ಭಾರತಕ್ಕೆ ಅಲ್ಲದೇ ಇಡೀ ವಿಶ್ವಕ್ಕೇ ನೀಡಿದ ಹೆಗ್ಗಳಿಕೆ ಭಾರತ ದೇಶದ್ದು, ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಭಾವೈಕ್ಯತೆಯ ರಾಷ್ಟ್ರ ಎಂದು ಬಣ್ಣಿಸಿದರು.

ಕಿತ್ತೂರು ಉಜ್ಜಯಿನಿಯ ತವರೂರು, ಇಲ್ಲಿನ ಭಕ್ತರಿಗೆ ಉಜ್ಜಯಿನಿ ಪೀಠದ ಬಗ್ಗೆ ಅಪಾರ ಅಭಿಮಾನ. ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿರಲಿ ಯಾವತ್ತೂ ನಮ್ಮ ಸಹಕಾರ ಇದ್ದೇ ಇರುತ್ತದೆ. ನ್ಯಾಯವಾದಿ ಕೆ.ಜಿ.ಕೆ. ಸ್ವಾಮಿ ಅವರ ಧಾರ್ಮಿಕ ಸೇವಾ ಕಾರ್ಯ ಅತ್ಯಂತ ಶ್ಲ್ಯಾಘನೀಯ ಎಂದರು.

ನೇತೃತ್ವ ವಹಿಸಿದ್ದ ರಾಮಘಟ್ಟದ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನಗರದಲ್ಲಿ ನೀರು ಸರಾಗವಾಗಿ ಹರಿದು ಹಳ್ಳಕ್ಕೆ ಬಿಡಲು ರಾಜಕಾಲುವೆ ನಿರ್ಮಿಸುತ್ತಾರೆ. ಆದರೆ ಹಳ್ಳಿಗಳಲ್ಲಿ ಕೆರೆ ಕಟ್ಟೆಗಳು ತುಂಬಿವೆ. ಇಲ್ಲಿಯೂ ಸಹ ರಾಜಕಾಲುವೆ ನಿರ್ಮಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕಾದ ಅಗತ್ಯವಿದೆ. ಇದಕ್ಕೆ ರೈತರು ಚಳವಳಿಗೆ ಮುಂದಾಗಬೇಕು. ತಾವು ಸಹ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು.

ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಳಿವಿನಂಚಿನಲ್ಲಿರುವ ಸನಾತನ ಸಂಸ್ಕೃತಿ, ಧರ್ಮಾಚರಣೆಗಳನ್ನು ಉಳಿಸಿ, ಬೆಳೆಸುವ ಅವಶ್ಯವಿದೆ. ಧಾರ್ಮಿಕ, ಅಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ಹಳ್ಳಿಗಳು ನಿರ್ಮಾಣವಾಗಬೇಕಾಗಿದೆ. ಪೂರ್ವಿಕರ ಸಂಪ್ರದಾಯ, ಸಂಸ್ಕೃತಿಗಳನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿನ ಗತವೈಭವವನ್ನು ಪುನರ್ ಸ್ಥಾಪಿಸಲು ಪ್ರತಿಯೊಬ್ಬರೂ ಕಂಕಣ ಬದ್ಧರಾಗಬೇಕು. ಕೆ.ಜಿ.ಕೆ. ಸ್ವಾಮಿ ಅವರಲ್ಲಿರುವ ಧರ್ಮನಿಷ್ಠೆ, ಸಂಸ್ಕಾರ ಹಾಗೂ ಗ್ರಾಮಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ತುಡಿತವನ್ನು ಮೆಚ್ಚಲೇಬೇಕು ಎಂದು ಹೇಳಿದರು.

ಹೊಟ್ಯಾಪುರದ ಶ್ರೀ ಗಿರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಹ ಅಸ್ಥಿರವಾದುದು. ಧರ್ಮ ಸ್ಥಿರವಾದುದು. ಹುಟ್ಟು ಮತ್ತು ಸಾವಿನ ನಡುವಿನ ಹಚ್ಚಹಸಿರಾದ ಉತ್ತಮ ಕಾರ್ಯಗಳನ್ನು ಮಾಡಿದಾಗ ಜನಮಾನಸದಲ್ಲಿ ಉಳಿಯಲು ಸಾಧ್ಯ ಎಂದು ನುಡಿದರು.

ತಂದೆ-ತಾಯಿಗಳನ್ನು ಸಂತೃಪ್ತಿಗೊಳಿಸುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ಮನುಷ್ಯ ಮೌಲ್ಯಯುತ ಬದುಕು ಸಾಗಿಸುವ ಮೂಲಕ ಸಂಸ್ಕಾರ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.

ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಶಾಸಕ ಪ್ರೊ. ಎನ್. ಲಿಂಗಣ್ಣ, ಜಿ.ಪಂ. ಮಾಜಿ ಸದಸ್ಯ ಕೆ.ಎಸ್. ಬಸವಂತಪ್ಪ, ತಾ.ಪಂ. ಮಾಜಿ ಸದಸ್ಯ ಆಲೂರು ನಿಂಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಚಂದ್ರಣ್ಣ, ಸವಿತಾಬಾಯಿ ಮಲ್ಲೇಶನಾಯ್ಕ ಧರ್ಮ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಈಶ್ವರ, ಬಸವೇಶ್ವರ, ವಿನಾಯಕ ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್. ವೀರಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಯವಾದಿಗಳೂ, ಗ್ರಾಮದ ಮುಖಂಡರಾದ ಕೆ.ಜಿ.ಕೆ. ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

error: Content is protected !!