ಕೇಸರಿ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟಿಸಿದ ಹಸಿರು ಶಾಲು, ಕೆಂಬಾವುಟ
ದಾವಣಗೆರೆ, ಸೆ. 28 – ಕೃಷಿ ಹಾಗೂ ಕಾರ್ಮಿಕ ವಲಯದ ಕಾನೂನುಗಳಿಗೆ ತಿದ್ದುಪಡಿ ವಿರೋಧಿಸಿ, ರೈತ ಹಾಗೂ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಸೋಮವಾರದ ಬಂದ್ಗೆ ನಗರದಲ್ಲಿ ಉತ್ತಮ ಸ್ಪಂದನೆ ದೊರೆತಿದೆ.
ನಗರದ ಪ್ರಮುಖ ಪ್ರದೇಶಗಳು, ಮಾರುಕಟ್ಟೆಯಲ್ಲಿ ವಹಿವಾಟು ಸ್ತಬ್ಧವಾಗಿತ್ತು. ನಗರ ಬಸ್ ಸಂಚಾರ ಸ್ಥಗಿತವಾಗಿದ್ದರೆ, ಆಟೋಗಳು ಕೆಲವೇ ಸಂಖ್ಯೆಯಲ್ಲಿ ಬೀದಿಗಿಳಿದಿದ್ದವು. ಖಾಸಗಿ ಬಸ್ಗಳೂ ಬೀದಿಗೆ ಬರಲಿಲ್ಲ. ಸೋಮವಾರ ಬಂದ್ಗೆ ಕರೆ ನೀಡಿದ್ದರಿಂದ, ಸಾಕಷ್ಟು ಜನರಿಗೆ ವಾರಾಂತ್ಯದ ಬಿಡುವು ಮುಂದುವರೆದಂತಾಗಿತ್ತು.
ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಿದರೂ ಸಹ, ಬ್ಯಾಂಕಿಂಗ್ ಕಾರ್ಯ ನಿರ್ವಹಣೆಗೆ ಅಡ್ಡಿಯಾಗಿತ್ತು. ಹಲವಾರು ರಾಷ್ಟ್ರೀಯ, ಸಹಕಾರಿ ಬ್ಯಾಂಕುಗಳು ಕಾರ್ಯ ನಿರ್ವಹಿಸಲು ಸಾಧ್ಯವಾಗಲಿಲ್ಲ. ಆದರೆ, ಮುಖ್ಯ ರಸ್ತೆಗಳಿಂದ ದೂರವಿದ್ದ ಕೆಲ ಬ್ಯಾಂಕ್ ಶಾಖೆಗಳು ಕಾರ್ಯ ನಿರ್ವಹಣೆ ಮಾಡಲು ಸಾಧ್ಯವಾಯಿತು.
ಕೆ.ಆರ್. ಮಾರುಕಟ್ಟೆ, ಬಿನ್ನಿ ಕಂಪನಿ ರಸ್ತೆ, ಮಂಡಿಪೇಟೆ, ಅಶೋಕ ರಸ್ತೆ ಮುಂತಾದ ಪ್ರದೇಶಗಳಲ್ಲಿನ ಅಂಗಡಿಗಳು ಬಹುತೇಕ ಬಂದ್ ಆಗಿದ್ದು, ಒಂದೆರಡು ಅಂಗಡಿಗಳು ಮಾತ್ರ ತೆರೆದಿದ್ದು ಕಂಡು ಬಂತು.
ಹೋಟೆಲ್ ಸಂಘಟನೆಗಳು ಬಂದ್ಗೆ ನೈತಿಕ ಬೆಂಬಲ ಮಾತ್ರ ನೀಡುವುದಾಗಿ ಹೇಳಿದ್ದವು. ಆದರೂ, ಮುಖ್ಯ ರಸ್ತೆಗಳ ಬಹುತೇಕ ಹೋಟೆಲ್ಗಳು ಬಂದ್ ಆಗಿದ್ದು, ಸಣ್ಣ ಪುಟ್ಟ ಹೋಟೆಲ್ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು.
ಬೈಕ್ನಲ್ಲಿ ತೆರಳುತ್ತಿದ್ದ ಬಂದ್ ಪರ ಸಂಘಟನೆಗಳ ಕಾರ್ಯಕರ್ತರು, ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿಕೊಳ್ಳುತ್ತಿದ್ದುದು ಕಂಡುಬಂತು.
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹಾಗೂ ರಾಜ್ಯದ ಬಿ.ಎಸ್. ಯಡಿಯೂರಪ್ಪ ಸರ್ಕಾರಗಳು ಜಾರಿಗೆ ತಂದಿರುವ ಕಾನೂನುಗಳು ರೈತರು ಹಾಗೂ ಕಾರ್ಮಿಕರಿಗೆ ವಿರುದ್ಧವಾಗಿವೆ ಎಂದು ಹಲವೆಡೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ ಧರಣಿ ನಡೆಸಿದರು.
ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಜಯದೇವ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಬಳಿ ಹಲವಾರು ಸಂಘಟನೆಗಳ ಮುಖಂಡರು ಧರಣಿ ನಡೆಸಿ, ಸರ್ಕಾರದ ನೀತಿಗಳು ರೈತರಿಗೆ ಮಾರಕವಾಗುವಂತಿವೆ. ಇದರಿಂದಾಗಿ ಕಂಪನಿಗಳು ಬಲವಾಗಲಿದ್ದರೆ, ಕೃಷಿಕರು ಬಡವಾಗುತ್ತಾರೆ ಎಂದು ಆರೋಪಿಸಿದರು.
ಸರ್ಕಾರಿ ಸಾರಿಗೆ ನಂಬಿ ಅತಂತ್ರರಾದ ಪ್ರಯಾಣಿಕರು
ಸರ್ಕಾರಿ ಸಾರಿಗೆ ಬಸ್ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ರಾಜ್ಯ ಸರ್ಕಾರ ತಿಳಿಸಿತ್ತು. ಇದನ್ನು ನಂಬಿಕೊಂಡು ಬಸ್ ನಿಲ್ದಾಣಕ್ಕೆ ಬಂದವರು ಅತಂತ್ರರಾಗಿದ್ದರು. ಬೆಳಿಗ್ಗೆ ಒಂದೆರಡು ಗಂಟೆ ಸಂಚರಿಸಿದ ಬಸ್ಗಳು, 10 ಗಂಟೆ ಸುಮಾರಿಗೆ ಪ್ರತಿಭಟನೆಯ ಬಿಸಿಗೆ ಸಿಲುಕಿ ಸ್ತಬ್ಧಗೊಂಡಿದ್ದವು.
ಮುಂದೆ ದಾರಿ ಕಾಣದೇ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಕುಳಿತಿದ್ದ ಜನರು, ಮುಂದಿನ ಊರಿಗೆ ಹೋಗಲು ಬೈಪಾಸ್ ಬಳಿ ತೆರಳಬಹುದು. ಅಲ್ಲಿ ಬಸ್ ಸಂಚಾರವಿದೆ ಎಂಬ ಸಲಹೆಗಳನ್ನು ನೀಡುತ್ತಿದ್ದುದು ಕಂಡು ಬಂದಿತು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಹುಬ್ಬಳ್ಳಿಯ ರೊನಾಲ್ಡ್ ಡಿ. ಹಳ್ಳಿ, ನಾನು ಬೆಂಗಳೂರಿಗೆ ತೆರಳಲು ಬೆಳಿಗ್ಗೆ 7 ಗಂಟೆಯ ಬಸ್ ಹತ್ತಿದ್ದೆ. ಬೆಂಗಳೂರಿನ ಬದಲು ಮುಂದಿನ ಊರಿನ ಟಿಕೆಟ್ ಮಾತ್ರ ಕೊಡುತ್ತಿದ್ದರು. ದಾವಣಗೆರೆಯ ಇಳಿಸಿ ಬಸ್ ನಿಲ್ಲಿಸಿದ್ದಾರೆ ಎಂದು ತಿಳಿಸಿದರು. ಬಸ್ ಸಂಚಾರಕ್ಕೆ ನಾವೆಲ್ಲರೂ ಸಿದ್ಧವಾಗಿದ್ದೇವೆ. ಆದರೆ, ಪ್ರತಿಭಟನೆಯಿಂದಾಗಿ ಬಸ್ ನಿಲ್ಲಿಸಲಾಗಿದೆ. ಪ್ರತಿಭಟನೆ ತಿಳಿಯಾದ ಮೇಲೆ ಬಸ್ ಹೊರಡಲಿದೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ಪ್ರಯಾಣಿಕರಿಗೆ ತಿಳಿಸುತ್ತಿದ್ದುದು ಕಂಡು ಬಂತು.
ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಚಿತ್ರ ಹಾಗೂ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಮುಖ್ಯ ರಸ್ತೆಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಅಂಗಡಿ – ವ್ಯವಹಾರಗಳು ಬಹುತೇಕ ಎಂದಿನಂತೆ ನಡೆದವು. ಇದರಿಂದಾಗಿ ಮುಷ್ಕರ ನಡೆಯದ ಪ್ರದೇಶಗಳಲ್ಲಿ ಜನ ಸಂಚಾರವೂ ಸಾಮಾನ್ಯದ ಹಂತದಲ್ಲೇ ಇತ್ತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕ್ರಮಗಳನ್ನು ತೆಗೆದುಕೊಂಡಿದ್ದರು.
ಹೆದ್ದಾರಿಯಲ್ಲಿ ಬೆಳಗಿನ ಜಾವ ಬಂದ್ಗೆ ಮುುಂದಾಗಿದ್ದ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಶಿವಗಂಗಾ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ರೈತ ಸಂಘಟನೆಗಳ ಬಂದ್ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ಪ್ರಾಂತ ರೈತ ಸಂಘ, ಎ.ಐ.ವೈ.ಎಫ್., ಕನ್ನಡ ರಕ್ಷಣಾ ವೇದಿಕೆ ಮತ್ತಿತರೆ ಸಂಘಟನೆಗಳು ಭಾಗವಹಿಸಿದ್ದವು. ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಾರ್ಟಿಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದವು.
ಬಂದ್ ಅಂಗವಾಗಿ ಜಯದೇವ ವೃತ್ತದಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎ. ನಾಗರಾಜ್, ದೇವರಮನಿ ಶಿವಕುಮಾರ್, ಡಿ. ಬಸವರಾಜ್, ಕೆ.ಎಸ್. ಬಸವಂತಪ್ಪ, ಗಡಿಗುಡಾಳ್ ಮಂಜುನಾಥ್, ಅನಿತಾ ಬಾಯಿ ಮಾಲತೇಶ್, ವಿನಾಯಕ ಪೈಲ್ವಾನ್, ಉಮೇಶ್, ಮುದೇಗೌಡ್ರ ಗಿರೀಶ್, ಚಮನ್ ಸಾಬ್, ಇಟ್ಟಿಗುಡಿ ಮಂಜುನಾಥ್, ಆಶಾ ಮುರಳಿ, ಸವಿತಾ ಚಂದ್ರಶೇಖರ್, ಸುಷ್ಮಾ ಪಾಟೀಲ್, ಶುಭಮಂಗಳ ಭಾಗವಹಿಸಿದ್ದರು.
ಕಮ್ಯುನಿಸ್ಟ್ ಮುಖಂಡ ಹೆಚ್.ಕೆ. ರಾಮಚಂದ್ರಪ್ಪ, ರಾಜ್ಯ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಅಖಿಲ ಭಾರತ ಕಿಸಾನ್ ಸಭಾದ ಹೆಚ್.ಜಿ. ಉಮೇಶ್, ಕರ್ನಾಟಕ ಪ್ರಾಂತ ರೈತ ಸಂಘದ ಶ್ರೀನಿವಾಸ್, ರೈತ ಮುಖಂಡರಾದ ತೇಜಸ್ವಿ ಪಟೇಲ್, ಮುನಿಯಪ್ಪ, ಚನ್ನಬಸಪ್ಪ, ಎಪಿಎಂಸಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಕಾರ್ಮಿಕ ಸಂಘಟನೆಗಳ ಮುಖಂಡರಾದ ಮಂಜುನಾಥ ಕೈದಾಳೆ, ಮಂಜುನಾಥ ಕುಕ್ಕುವಾಡ, ತಿಪ್ಪೇಸ್ವಾಮಿ, ಮಧು ತೊಗಲೇರಿ, ಲೋಕೇಶ್ ನೀರ್ಥಡಿ, ಭಾರತಿ, ಸೌಮ್ಯ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.