ಕನ್ನಡ ಪರ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಮೇಯರ್ ಬಿ.ಜಿ. ಅಜಯ್ಕುಮಾರ್
ದಾವಣಗೆರೆ, ಸೆ.27- ಈ ವರ್ಷದ ನವೆಂಬರ್ನಲ್ಲಿ ನಗರ ಪಾಲಿಕೆಯಿಂದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ಇದರ ಯಶಸ್ಸಿಗೆ ಎಲ್ಲಾ ಕನ್ನಡಪರ ಸಂಘಟನೆಗಳ ಸಹಕಾರ ಅಗತ್ಯ ಎಂದು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಜಿ. ಅಜಯ್ಕುಮಾರ್ ತಿಳಿಸಿದರು.
ನಾಳೆ ಸೋಮವಾರ ಕರೆದಿರುವ ಕರ್ನಾಟಕ ಬಂದ್ ಸಂಬಂಧ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ರೋಟರಿ ಬಾಲಭವನದಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವರ್ಷ ಪಾಲಿಕೆಯಲ್ಲಿ ಅಧಿಕಾರಿಗಳಿಲ್ಲದ ಪರಿಣಾಮ ರಾಜ್ಯೋತ್ಸವವನ್ನು ಆಚರಿಸಲಾಗಲಿಲ್ಲವೆಂದರು.
ಗ್ರೀನ್ ಸಿಟಿಗೆ ಸಿದ್ದತೆ; ನಗರವನ್ನು ಸಂಪೂರ್ಣವಾಗಿ ಹಸಿರುಮಯವಾಗಿಸಲು ಗ್ರೀನ್ ಸಿಟಿ ಯೋಜನೆಗೆ ಸಿದ್ಧತೆ ನಡೆಸಲಾಗಿದ್ದು, ಒಂದು ಲಕ್ಷ ಸಸಿ ನೆಡುವ ಉದ್ದೇಶವಿದೆ. ಹಾಗಾಗಿ ಎಲ್ಲಾ ಸಿದ್ಧತೆ ಮಾಡಲಾಗಿದ್ದು, ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಚಾಲನೆ ನೀಡಲಿದ್ದಾರೆ. ಈ ಹಿಂದೆ ಪಂಪಾಪತಿಯವರು ನೆಟ್ಟಿದ್ದ ಸಾವಿರಾರು ಗಿಡಗಳ ನೆರಳಿನಲ್ಲಿ ನಮ್ಮ ಬದುಕು ಇದೆ. ಪರಿಶುದ್ಧ ಗಾಳಿ ಸಿಗುವಂತಾಗಿದೆ. ಇದೀಗ ನಾವು ನೆಡುವ ಸಸಿಗಳು ನಮ್ಮ ಮಕ್ಕಳು, ಮೊಮ್ಮಕ್ಕಳ ಕಾಲಕ್ಕೆ ನೆರಳು, ಶುದ್ಧ ಗಾಳಿ ನೀಡಲಿವೆ. ಈ ನಿಟ್ಟಿನಲ್ಲಿ ‘ಗ್ರೀನ್ ಸಿಟಿ’ ಯೋಜನೆ ಪೂರಕವಾಗಲಿದೆ ಎಂದು ಹೇಳಿದರು.
ಜನರ ಬಳಿ ಬಂದು ಅಳಲು ಆಲಿಸುವೆ: ಪಾಲಿಕೆ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಶೀಘ್ರವೇ `ಮನೆ ಬಾಗಿಲಿಗೆ ನಗರ ಪಾಲಿಕೆ’ ಎಂಬ ಯೋಜನೆ ಜಾರಿಗೊಳ್ಳಲಿದೆ. ಎಲ್ಲಾ 45 ವಾರ್ಡ್ಗಳಲ್ಲೂ ಒಂದು ದಿನ ಪಾಲಿಕೆ ಅಧಿಕಾರಿ ವರ್ಗ ಮತ್ತು ವಾರ್ಡಿನ ಸದಸ್ಯರ ಜೊತೆ ಭೇಟಿ ನೀಡಿ ಅಲ್ಲಿನ ಜನರ ಮನೆ ಬಳಿ ತೆರಳಿ ಸಮಸ್ಯೆ ಆಲಿಸುವ ಕೆಲಸ ಮಾಡುವುದಾಗಿ ಮೇಯರ್ ತಿಳಿಸಿದರು.
`ಜಲಸಿರಿ’ ಯೋಜನೆಯಡಿ ನಗರಕ್ಕೆ ನೀರೊದಗಿಸುವ 3 ದೊಡ್ಡ ಮೋಟರ್ಗಳು ಸುಟ್ಟು ಹೋಗಿವೆ. ಇವುಗಳ ಬದಲಿಗೆ 3 ಹೊಸ ಮೋಟರ್ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ಹೊಸದಾಗಿ 2,500 ಬೀದಿ ದೀಪ ಅಳವಡಿಸುವ ಯೋಜನೆ ಇದೆ. ಈ ಎಲ್ಲ ಕಾರ್ಯಗಳಿಗೆ ದೊಡ್ಡ ಮೊತ್ತದ ಅನುದಾನ ತರಲು ಬೆಂಗಳೂರಿಗೆ ಹೋಗಿ ಎರಡು ದಿನ ಇದ್ದು, ಮಂತ್ರಿಗಳ ಭೇಟಿ ಮಾಡಿರುವೆ. ಆ ಮೂಲಕ ಜನರ ಋಣ ತೀರಿಸುವ ಕೆಲಸ ಮಾಡುವೆನು ಎಂದು ಅಜಯ್ಕುಮಾರ್ ಹೇಳಿದರು.
ತೋರಿಸಿದ ಸ್ಥಳದಲ್ಲಿ ಭುವನೇಶ್ವರಿ ದೇವಸ್ಥಾನ; ನಗರದಲ್ಲಿ ಭುವನೇಶ್ವರಿ ದೇವಸ್ಥಾನ ನಿರ್ಮಾಣಕ್ಕೆ ಸಂಘಟನೆಗಳು ಸ್ಥಳ ತೋರಿಸಿದರೆ ಅಲ್ಲಿ ನಿರ್ಮಾಣ ಮಾಡಲಾಗುವುದು ಅಥವಾ ಪಾಲಿಕೆಯಿಂದ ಸ್ಥಳ ನೀಡುವ ಜೊತೆಗೆ ಸಂಘಟನೆಗಳು ವಹಿಸುವ ಯಾವುದೇ ಜವಾಬ್ದಾರಿ ನಿಭಾಯಿಸಲು ಸಿದ್ದನಿದ್ದೇನೆ. ಇಷ್ಟೇ ಅಲ್ಲದೇ ಜಯದೇವ ವೃತ್ತದಲ್ಲಿ ಕುವೆಂಪು, ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ನಾಗ್ ಅವರ ಪುತ್ಥಳಿ ನಿರ್ಮಾಣಕ್ಕೂ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಕನ್ನಡಪರ ಸಂಘಟನೆಗಳು ಒಂದೇ ಕಡೆ ಸೇರಿರುವುದೇ ಉತ್ತಮ ಬೆಳವಣಿಗೆ. ಈ ಮೂಲಕ ನಾಡು-ನುಡಿ ವಿಚಾರದಲ್ಲಿ ಎಲ್ಲಾ ಸಂಘಟನೆಗಳು ಒಟ್ಟಾಗಿ ಹೋರಾಟಕ್ಕಿಳಿದಿರುವುದು ಶ್ಲಾಘನೀಯ. ದಾವಣಗೆರೆ, ಅನೇಕ ರೀತಿಯ ಜನಪರ, ನಾಡು-ನುಡಿ ಪರವಾದ ಹೋರಾಟಗಳಿಗೆ ಕಿಚ್ಚು ಹಚ್ಚಿದ ನೆಲ. ಇಲ್ಲಿಂದ ಆರಂಭಗೊಂಡ ಎಲ್ಲಾ ಹೋರಾಟಗಳು ಯಶಸ್ಸು ಕಂಡಿವೆ. ಆದರೆ ಈ ಹೋರಾಟದ ಕಿಚ್ಚು ನಿರಂತರವಾಗಿರಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಕನ್ನಡ ಪರ ಸಂಘಟನೆಗಳ ಮುಖಂಡರುಗಳಾದ ಕೆ.ಜಿ. ಶಿವಕುಮಾರ್, ಎಂ.ಎಸ್. ರಾಮೇಗೌಡ, ರಂಗ ಕಲಾವಿದ ಎ. ಭದ್ರಪ್ಪ, ರೈತ ಮುಖಂಡ ಹೊನ್ನೂರು ಮುನಿಯಪ್ಪ, ಸೋಮಶೇಖರ್, ನಾಗರಾಜ್ ಗೌಡ, ಸಂತೋಷ್, ದಾಕ್ಷಾಯಣಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.