ದಾವಣಗೆರೆ, ಸೆ.27- ಬರುವ ಅಕ್ಟೋಬರ್ 10ರ ಶನಿವಾರ ಜಾಗತಿಕವಾಗಿ ಕ್ಯಾನ್ಸರ್ ಜಾಗೃತಿ ಅಭಿಯಾನ ನಡೆಯುತ್ತಿದ್ದು, ಹೈದರಾಬಾದ್‌ನ ಗ್ರೇಸ್ ಫೌಂಡೇಷನ್ ಜೊತೆ ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ಕೈ ಜೋಡಿಸಲಿದೆ. ಎಲ್ಲೆಡೆ ಕೋವಿಡ್ ಹಿನ್ನೆಲೆಯನ್ನು ಪರಿಗಣಿಸಿ, ಈ ಬಾರಿ ಜಾಗೃತಿ ಅಭಿಯಾನವನ್ನು ಪರೋಕ್ಷವಾಗಿ ನಡೆಸಲಾಗುತ್ತಿದ್ದು, ಕ್ಯಾನ್ಸರ್ ಜೊತೆಗೆ ಕೋವಿಡ್ ಅನ್ನೂ ಹಿಮ್ಮೆಟ್ಟಿಸಬಹುದು ಎಂಬ ಜಾಗೃತಿಯನ್ನು ಮೂಡಿಸಲಾಗುವುದು ಎಂದು ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ನಿನ ಡಾ.ಶ್ರೀಶೈಲ್ ಬ್ಯಾಡಗಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹಿರಿಯ ವೈದ್ಯ ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ನಿರ್ದೇಶಕ ಡಾ.ಎ.ಎಂ.ಶಿವಕುಮಾರ್ ಮಾರ್ಗದರ್ಶನದಲ್ಲಿ ಜಾಗೃತಿ ಗೀತೆಯೊಂದನ್ನು ಸಿದ್ಧಪಡಿಸಲಾಗಿದ್ದು, ಅದರ ಬಹುತೇಕ ಚಿತ್ರೀಕರಣವನ್ನು ಮಾಡಲಾಗಿದೆ ಎಂದು ಕಲಾವಿದ ಆರ್.ಟಿ.ಅರುಣ್ ಕುಮಾರ್ ತಿಳಿಸಿದ್ದಾರೆ.
ಇಷ್ಟರಲ್ಲಿಯೇ ಅದರ ಸಂಕಲನ ಕಾರ್ಯ ಮುಗಿಯಲಿದ್ದು, ಎಲ್ಲಾ ಸೋಷಿಯಲ್ ಮೀಡಿಯಾಗಳ ಮತ್ತು ಸ್ಥಳೀಯ ಕೇಬಲ್ ವಾಹಿನಿಗಳ ಮೂಲಕ ಈ ಕೋವಿಡ್-ಕ್ಯಾನ್ಸರ್ ಜಾಗೃತಿ ಗೀತೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಆರ್.ಟಿ. ಹೇಳಿದ್ದಾರೆ.
ಈ ಬಾರಿಯ ಪರೋಕ್ಷ ಅಭಿಯಾನವನ್ನು ಕೆಲವು ಸಂಸ್ಥೆಗಳು ತಮ್ಮ ತಮ್ಮ ಸ್ಥಳಗಳಲ್ಲಿಯೇ ನಡೆಸುತ್ತಿದ್ದು, ಈ ಕಾರ್ಯಕ್ಕೆ ನಗರದ ಐ.ಎಂ.ಎ, ಇಂಡಿಯನ್ ರೆಡ್ ಕ್ರಾಸ್ ಅಸೋಸಿಯೇಷನ್, ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ, ಲೈಫ್ ಲೈನ್, ರೋಟರಿ ಸಂಸ್ಥೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ವರದಿಗಾರರ ಕೂಟ ಕೈ ಜೋಡಿಸಲಿವೆ.
ಕ್ಯಾನ್ಸರ್ ಮುಕ್ತ ಆರ್.ಟಿ.ಅರುಣ್ ಈಗ ಕೋವಿಡ್ ಮುಕ್ತರಾಗಿ ಸುದ್ದಿಯಲ್ಲಿದ್ದಾರೆ. ಕಳೆದ ಮೂರು ವಾರಗಳಿಂದ ಕೋವಿಡ್ ಸೋಂಕಿಗೆ ಒಳಗಾಗಿದ್ದ ಆರ್.ಟಿ.ಅರುಣ್ ಉಸಿರಾಟದ ತೊಂದರೆಯಿಂದಾಗಿ ಎರಡು ವಾರಗಳ ಹಿಂದೆ ಸುಕ್ಷೇಮ ಆಸ್ಪತ್ರೆಗೆ ದಾಖಲಾಗಿದ್ದರು.
ಡಾ.ಸುನಿಲ್ ಬ್ಯಾಡಗಿ ನೇತೃತ್ವದಲ್ಲಿ ಶ್ವಾಸಕೋಶ ತಜ್ಞ ಡಾ. ಸಿ.ನಂದೀಶ್, ಫಿಜಿಷಿಯನ್ ಡಾ. ಬಿ.ಜಿ.ರೇಣುಕಾ ಮತ್ತು ಡಾ.ನಾಗರಾಜ್ ಅವರ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಆರ್.ಟಿ., ಈಗ ಕೋವಿಡ್ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೂ ಇನ್ನೂ ಎರಡು ವಾರಗಳ ಕಾಲ ಅವರು ಕ್ವಾರಂಟೈನ್‌ನಲ್ಲಿ ಇರಬೇಕಿದ್ದು, ಅವರ ಆರೋಗ್ಯ ಕುರಿತು ಗಮನ ವಹಿಸಲಾಗುವುದು ಎಂದು ಡಾ.ಸುನಿಲ್ ಬ್ಯಾಡಗಿ ತಿಳಿಸಿದ್ದಾರೆ.
ಕೋವಿಡ್ ಚಿಕಿತ್ಸೆಯ ಅನುಭವ ಸ್ವಲ್ಪ ಬೆಚ್ಚಿ ಬೀಳಿಸುವಂತಹದ್ದು. ಆದರೆ, ಭಯಪಡಬೇಕಾಗಿಲ್ಲ. ಸಾಮಾನ್ಯವಾಗಿ ಈ ಸೋಂಕು ಬಹುತೇಕರಿಗೆ ತಗಲುವ ಸಾಧ್ಯತೆಯಿದ್ದು, ಎಲ್ಲರೂ ಇದನ್ನು ಎದುರಿಸುವ ಧೈರ್ಯ ತೋರಿಸಲೇಬೇಕಾಗಿದೆ. ಯಾರೂ ಅನಾವಶ್ಯಕ ಹೆದರಬೇಕಿಲ್ಲ, ಅಲಕ್ಷ್ಯವನ್ನು ತೋರುವಂತಿಲ್ಲ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ.