ಹರಿಹರ, ಸೆ.27- ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ, ಗೆಡ್ಡೆರಾಮೇಶ್ವರಕ್ಕೆ 15 ಕೋಟಿ, ತೀರ್ಥರಾಮೇಶ್ವರ ದೇವಸ್ಥಾನಕ್ಕೆ 13 ಕೋಟಿ, ಕೊಂಡಜ್ಜಿ ಕೆರೆ ಅಭಿವೃದ್ಧಿಗೆ 8 ಕೋಟಿ, ಶಾಂತಿಸಾಗರ ಸಂಕೀರ್ಣ ಮಾಡುವ ನಿಟ್ಟಿನಲ್ಲಿ 34.60 ಕೋಟಿ, ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಗರದ ಬಿರ್ಲಾ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಸಮಾ ರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ಹೃದಯ ಭಾಗದಲ್ಲಿರುವ ದಾವಣಗೆರೆ ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳು ಇದ್ದು, ಅವುಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಈಗಾಗಲೇ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಮತ್ತು ಸದ್ಯದಲ್ಲಿ ಕೇಂದ್ರ ಸಚಿವರು ಸಹ ಜಿಲ್ಲೆಗೆ ಭೇಟಿ ನೀಡುವರು. ಅವರು ಬಂದಾಗ ಜಿಲ್ಲೆಯ ಅನೇಕ ಯಾತ್ರಾ ಸ್ಥಳಗಳ ಬಗ್ಗೆ ಅವರ ಗಮನಕ್ಕೆ ತರುವುದರ ಜೊತೆಗೆ ನಮಗೆ ಬೇಕಾದ ಆತ್ಮೀಯ ವ್ಯಕ್ತಿಗಳು ಸಹ ಕೇಂದ್ರ ಪ್ರವಾಸೋದ್ಯಮ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರ ಗಮನಕ್ಕೆ ತಂದು ಇಲ್ಲಿನ ಯಾತ್ರಾ ಸ್ಥಳಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ಕೊಡುವ ನಿಟ್ಟಿನಲ್ಲಿ ದಾಪುಗಾಲು ಹಾಕಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯ 5 ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ಇಲಾಖೆ ಗುರುತಿಸಿದ್ದು, ಅವುಗಳಲ್ಲಿ ಹರಿಹರೇಶ್ವರ ದೇವಾಲಯ, ಕೊಂಡಜ್ಜಿ ಕೆರೆ, ತೀರ್ಥರಾಮೇಶ್ವರ, ಶಾಂತಿಸಾಗರ, ಸಂತೆಬೆನ್ನೂರಿನ ಪುಷ್ಕರಣಿ ಒಳಗೊಂಡಿದೆ. ಸುಮಾರು 20 ಪ್ರಮುಖ ಪ್ರವಾಸಿ ತಾಣಗಳು ಎಂದು ಗುರುತಿಸಲಾಗಿದೆ. ಅದರಲ್ಲಿ ಅಮ್ಮನಗುಡ್ಡ, ಗಾಜಿನಮನೆ, ದುಗ್ಗಮ್ಮ ದೇವಾಲಯ, ಮದಕರಿ ನಾಯಕನ ಸಮಾಧಿ, ಷಹಾಜಿ ಸಮಾಧಿ, ಚನ್ನಗಿರಿ ಕೋಟೆ, ಗಡ್ಡೆರಾಮೇಶ್ವರ, ಉಕ್ಕಡಗಾತ್ರಿ ದೇವಾಲಯ, ನಂದಿಗುಡಿ ದೇವಸ್ಥಾನ ಸೇರಿದಂತೆ ಅನೇಕ ತಾಣಗಳನ್ನು ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಿಸುವಂತೆ ಕೇಂದ್ರ ಕಚೇರಿಗೆ ಮನವಿ ಮಾಡಲಾಗಿದೆ.
– ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿ
ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ಬರುವ ಯಾತ್ರಾ ಸ್ಥಳಗಳಿಂದ ಶೇ. 9 ರಷ್ಟು ಆದಾಯ ಬರುತ್ತದೆ ಮತ್ತು ಶೇ. 8 ರಷ್ಟು ಸಾರ್ವಜನಿಕರಿಗೆ ಉದ್ಯೋಗ ದೊರೆಯುತ್ತದೆ. ಇನ್ನಷ್ಟು ವಿಸ್ತರಿಸಿ, ಪ್ರತಿಭೆಗಳನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡುವುದರಿಂದ ಆದಾಯ ಹೆಚ್ಚು ಆಗುತ್ತದೆ.
– ಕೆ.ಬಿ.ರಾಮಚಂದ್ರಪ್ಪ, ತಹಶೀಲ್ದಾರ್, ಹರಿಹರ.
ಜಿಲ್ಲೆಯ ಎಲ್ಲಾ ತಾಲ್ಲೂಕಿನ ಜನ ಪ್ರತಿನಿಧಿಗಳು ಸಹ ನಮಗೆ ಉತ್ತಮ ರೀತಿಯಲ್ಲಿ ಕೈ ಜೋಡಿಸುತ್ತಿದ್ದಾರೆ. ಅದರ ಫಲವಾಗಿ ಈಗಾಗಲೇ ನಿಲಿ ನಕ್ಷೆ ಸಿದ್ಧತೆ ಮಾಡಲಾಗುತ್ತದೆ. ಅದು ಸಿದ್ಧವಾದ ತಕ್ಷಣವೇ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳು ಅಭಿವೃದ್ಧಿಯನ್ನು ಹೊಂದಲಿವೆ ಎಂದು ಹೇಳಿದರು.
ಸಾರ್ವಜನಿಕರು ಜಿಲ್ಲೆಯ ಪ್ರವಾಸಿ ತಾಣಗಳನ್ನು ವೀಕ್ಷಿಸುವುದರಿಂದ ಅವರಿಗೆ ಆರೋಗ್ಯ ಸುಧಾರಣೆ ಕಾಣುತ್ತದೆ ಮತ್ತು ನೆಮ್ಮದಿ ಜೀವನ ನಡೆಸುವದಕ್ಕೆ ಸಹಕಾರಿ ಆಗಲಿದೆ. ಆದ್ದರಿಂದ ಸಾರ್ವಜನಿಕರು ಜಿಲ್ಲೆಯ ಪ್ರತಿಯೊಂದು ಯಾತ್ರಾ ಸ್ಥಳಗಳಿಗೆ ಭೇಟಿ ಕೊಡುವುದಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಪಾಲಾಕ್ಷ ಮಾತನಾಡಿ, ಜಿಲ್ಲೆಯ ಅನೇಕ ಪ್ರವಾಸಿ ತಾಣಗಳು ಇದ್ದು ಅವುಗಳು ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುವುದರಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾಣದೆ ಹಿಂದೆ ಬಿದ್ದಿವೆ. ಹಾಗಾಗಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಇನ್ನು ಮುಂದೆಯಾದರೂ ಜಿಲ್ಲೆಯ ಅನೇಕ ಯಾತ್ರಾ ಸ್ಥಳಗಳ ಅಭಿವೃದ್ಧಿಗೆ ಹೆಚ್ಚು ಹೊತ್ತು ಕೊಡಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಮಾತನಾಡಿ, ತಾಲ್ಲೂಕಿನ ಹರಿಹರೇಶ್ವರ ದೇವಾಲಯ, ಕೊಂಡಜ್ಜಿ ಕೆರೆ ಮತ್ತಿತರೆ ಯಾತ್ರಾ ಸ್ಥಳಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯ ಗಮನಕ್ಕೆ ತರಲಾಗಿದೆ. ಅವರು ಕೂಡ ಆದ್ಯತೆಯನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಶ್ರೀಮತಿ ಎಸ್.ಲಕ್ಷ್ಮಿ, ನಗರಸಭೆ ಸದಸ್ಯ ಕೆ.ಜಿ. ಸಿದ್ದೇಶ್, ಪುರಾತತ್ವ ಇಲಾಖೆಯ ಅಧಿಕಾರಿ ಸುಧಾಕರ್, ನೌಕರರ ಸಂಘದ ಗೌರವಾಧ್ಯಕ್ಷ ಎಂ.ಉಮ್ಮಣ್ಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಪಿ.ಟಿ. ಪ್ರಕಾಶ್, ನವೀನ್, ಮರುಳಸಿದ್ದಪ್ಪ, ಹರಿಹರೇಶ್ವರ ದೇವಸ್ಥಾನ ಕಾರ್ಯದರ್ಶಿ ವೆಂಕಟೇಶ್ ಹಾಗೂ ಇತರರು ಹಾಜರಿದ್ದರು.