ಗಾನ ಮುಗಿಸಿ ಮೌನವಾದ ಎಸ್‌ಪಿಬಿ

ಕೊರೊನಾ ಸೋಂಕಿನಿಂದಾಗಿ ಅನಾರೋಗ್ಯದಿಂದ ತೀವ್ರವಾಗಿ ಬಳಲಿದ್ದ ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನರಾಗಿದ್ದಾರೆ. 

ಕಳೆದ ಐದು ದಶಕಗಳಲ್ಲಿ ಹತ್ತಾರು ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ 74 ವರ್ಷದ ಎಸ್‌ಪಿಬಿ ಅಗಲಿಕೆಯು ಅಭಿಮಾನಿಗಳು ಹಾಗೂ ಸಂಗೀತ ಪ್ರೇಮಿಗಳನ್ನು ಶೋಕಕ್ಕೆ ದೂಡಿದೆ. ಕೊರೊನಾ ಸೋಂಕಿಗೆ ಗುರಿಯಾಗಿದ್ದ ಎಸ್‌ಪಿಬಿ, 52 ದಿನಗಳ ಕಾಲ ತೀವ್ರ ಚಿಕಿತ್ಸೆಗೆ ಒಳಗಾಗಿದ್ದರು. ಸೆಪ್ಟೆಂಬರ್ 4ರಂದು ಅವರು ಕೊರೊನಾದಿಂದ ಹೊರ ಬಂದಿದ್ದಾರೆಂಬ ನೆಗೆಟಿವ್ ವರದಿಯೂ ಬಂದಿತ್ತು.

ಆದರೆ, ಗುರುವಾರ ಮಧ್ಯಾಹ್ನ ಅವರಲ್ಲಿ ಹೃದಯ – ಉಸಿರಾಟ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡವು. ಚೆನ್ನೈನ ಎಂ.ಜಿ.ಎಂ. ಹೆಲ್ತ್‌ಕೇರ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕೊರೊನಾ ಸೋಂಕು ಕಂಡು ಬಂದಾಗ ಅವರಲ್ಲಿ ಲಘು ಲಕ್ಷಣ ಗಳಿದ್ದವು. ಎರಡೇ ದಿನಗಳಲ್ಲಿ ವಾಪಸ್ಸಾ ಗುವ ವಿಶ್ವಾಸವೂ ಅವರಲ್ಲಿತ್ತು. ಆದರೆ, ನಂತರದಲ್ಲಿ ರೋಗ ಲಕ್ಷಣಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದವು.

ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಚಿತ್ರ ರಂಗದ ಹತ್ತು ಹಲವರು ಎಸ್‌ಪಿಬಿ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದರು.

16 ಭಾಷೆಗಳಲ್ಲಿ 40 ಸಹಸ್ರ ಹಾಡುಗಳ ಮೂಲಕ ಗಾನ ಸುಧೆ ಹರಿಸಿದ್ದ ಎಸ್‌ಪಿಬಿ, ತಮ್ಮ ಮಾತೃಭಾಷೆಯಾದ ತೆಲುಗು ಅಷ್ಟೇ ಅಲ್ಲದೇ, ಕನ್ನಡ ಮತ್ತು ತಮಿಳು ಚಿತ್ರರಂಗದ ಅತಿ ಹೆಚ್ಚಿನ ಬೇಡಿಕೆ ಪಡೆದ ಹಾಡುಗಾರರಾಗಿದ್ದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಆರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ಅವರು, 2001ರಲ್ಲಿ ಪದ್ಮಶ್ರೀ ಹಾಗೂ 2011ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದರು.

ಹಿಂದಿಯ ಮೊಹಮ್ಮದ್ ರಫಿ ಅವರಿಂದ ಪ್ರಭಾವಿತರಾಗಿದ್ದ ಎಸ್‌ಪಿಬಿ, ಹತ್ತು ಹಲವು ಸಂಗೀತ ನಿರ್ದೇಶಕರ ಮೆಚ್ಚಿನ ಹಾಡುಗಾರರಾಗಿದ್ದರು. ಅವರ ಕನಿಷ್ಠ ಒಂದು ಹಾಡಿಲ್ಲದ ಚಿತ್ರಕ್ಕೆ ಒಪ್ಪುವುದಿಲ್ಲ ಎಂದು ಹೇಳುವ ಸಂಗೀತ ನಿರ್ದೇಶಕರೂ ಇದ್ದರು ಎಂಬುದು ಎಸ್ಪಿಬಿ ಹೆಗ್ಗಳಿಕೆ.

ಆಂಧ್ರ ಪ್ರದೇಶದ ಕರಾವಳಿ ನಗರವಾದ ನೆಲ್ಲೂರಿನಲ್ಲಿ ಜೂನ್ 4, 1946ರಲ್ಲಿ ಜನಿಸಿದ್ದ ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ, ಇಂಜಿನಿಯರ್ ಆಗಲು ಬಯಸಿದ್ದರು. ಚಿತ್ರರಂಗಕ್ಕೆ ಕಾಲಿಡುವುದು ಅವರ ಮನಸ್ಸಿಗೆ ಬಂದಿರಲಿಲ್ಲ.

ಆದರೆ, 1966ರಲ್ಲಿ ಅವರು ತೆಲುಗು ಹಾಗೂ ಕನ್ನಡ ಹಾಡುಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಎಸ್.ಪಿ. ಕೋದಂಡಪಾಣಿ ಅವರ ಸಂಗೀತ ನಿರ್ದೇಶನದಲ್ಲಿ ಮೊದಲು ಹಾಡಿದ್ದ ಎಸ್‌ಪಿಬಿ, ಕೋದಂಡಪಾಣಿ ಅವರನ್ನು ತಮ್ಮ ಗುರು ಎಂದೇ ಗೌರವಿಸುತ್ತಿದ್ದರು.

1969ರಲ್ಲಿ ಅವರು ಎಂ.ಜಿ.ರಾಮಚಂದ್ರನ್ ಅವರಿಗೆ `ಅದಿಮೈಪೆನ್’ ಹಾಡಿದ ತಮಿಳು ಹಾಡು ಎಸ್‌ಪಿಬಿ ಅವರನ್ನು ಗುರುತಿಸುವಂತೆ ಮಾಡಿತು. ನಂತರದಲ್ಲಿ ಎಸ್‌ಪಿಬಿ ತಿರುಗಿ ನೋಡುವ ಪ್ರಸಂಗವೇ ಬರಲಿಲ್ಲ.

ಸಂಗೀತ ನಿರ್ದೇಶಕರ ಪೀಳಿಗೆಯಿಂದ ಪೀಳಿಗೆಗೆ ಬದಲಾದರೂ, ಎಸ್‌ಪಿಬಿ ಗಾನ ಸುಧೆ ನಿರಂತರವಾಗಿ ಹರಿದಿತ್ತು. ಅಷ್ಟೇ ಅಲ್ಲದೇ, ಪ್ರತಿ ನಾಯಕನ ಧ್ವನಿಗೆ ಅನುಗುಣವಾಗಿ ತಮ್ಮ ಲಹರಿ ಹೊಂದಿಸಿಕೊಳ್ಳುವ ಕಲೆ ಎಸ್‌ಪಿಬಿ ಅವರಿಗೆ ಅನುಪಮವಾಗಿ ದೊರೆತಿತ್ತು.

ಆತ್ಮೀಯ ಒಡನಾಡಿಗಳ ನಡುವೆ ಬಾಲು ಎಂದೇ ಕರೆಯಲ್ಪಡುತ್ತಿದ್ದ ಬಾಲಸುಬ್ರಹ್ಮಣ್ಯಂ, ಸಂಗೀತವನ್ನು ವ್ಯವಸ್ಥಿತವಾಗಿ ಕಲಿತಿರಲಿಲ್ಲ. ಹರಿಕಥೆ ಹೇಳುತ್ತಿದ್ದ ತಂದೆ ಎಸ್.ಪಿ. ಸಾಂಬಮೂರ್ತಿಯವರೇ ಅವರಿಗೆ ಪ್ರೇರಣೆ. 

ಹಾಡು, ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಪ್ರಸಿದ್ಧ ಗಾಯಕರಾದ ನಂತರವೇ ಶಾಸ್ತ್ರೀಯ ಸಂಗೀತ ಕಲಿತು ಅನೇಕರಿಗೆ ಮಾದರಿಯೂ ಆದರು.

ಚಿತ್ರರಂಗದಲ್ಲಿ ಕೀರ್ತಿ, ಬೇಡಿಕೆಗಳು ಉತ್ತುಂಗಕ್ಕೆ ತಲುಪಿದರೂ ಅವರು ಸದಾ ವಿನೀತರಾಗಿದ್ದರು. ಈ ವರ್ಷದ ಆರಂಭದಲ್ಲಿ ನೆಲ್ಲೂರಿನಲ್ಲಿದ್ದ ತಮ್ಮ ಮನೆಯನ್ನು ಕಂಚಿ ಶಂಕರ ಮಠಕ್ಕೆ ವೇದ ಪಾಠಶಾಲೆಗಾಗಿ ದಾನ ಮಾಡಿದ್ದರು.

ಮರಣದ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಆಸ್ಪತ್ರೆಗೆ ಹಾಗೂ ನಂತರದಲ್ಲಿ ನುಂಗಮ್‌ಬಾಕ್ಕಮ್‌ನಲ್ಲಿರುವ ನಿವಾಸದ ಎದುರು ನೆರೆದಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಸಾಕಷ್ಟು ಕಷ್ಟಪಡಬೇಕಾಯಿತು.

error: Content is protected !!