ಜಗಳೂರು ತಾಲ್ಲೂಕಿನಲ್ಲಿ ಅತೀ ಮಳೆ : ಈರುಳ್ಳಿ ಫಸಲಿಗೆ ಹಾನಿ

ಜಗಳೂರು, ಸೆ.24- ತಾಲ್ಲೂಕಿನಾದ್ಯಂತ ಅಧಿಕ ಮಳೆ ಹಾಗೂ ರೋಗ ಬಾಧೆ ಹಾಗೂ ಸರಿಯಾದ ಬೆಲೆಯೂ ಸಿಗದ ಕಾರಣ ಅಪಾರ ಪ್ರಮಾಣದ  ಈರುಳ್ಳಿ ಗೆಡ್ಡೆ ಹೊಲದಲ್ಲಿಯೇ ಕೊಳೆತು ಹೋಗಿದ್ದರಿಂದ ರೈತರು ತಮ್ಮ ಜಮೀನಿನಲ್ಲಿ ಯಂತ್ರಗಳ ಸಹಾಯದಿಂದ ನಾಶಪಡಿಸಿ ಮತ್ತು ದನ – ಕರುಗಳನ್ನು ಬಿಟ್ಟು ಮೇಯಿಸುವ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಮರೇನಹಳ್ಳಿ, ಭರಮಸಮುದ್ರ, ನಿಂಗಾನಹಳ್ಳಿ, ಜಮ್ಮಾಪುರ ಸೇರಿದಂತೆ, ಹಲವಾರು ಗ್ರಾಮಗಳಲ್ಲಿ ಜಮೀನಿನಲ್ಲಿಯೇ ಕೊಳೆತು ಹೋದ ಈರುಳ್ಳಿಯನ್ನು ರೈತರೇ ನಾಶಪಡಿಸುತ್ತಿದ್ದಾರೆ. ದನಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ. ರೈತರು ಸಂಕಷ್ಟವನ್ನು ಅನುಭವಿಸುತ್ತಿದ್ದು ರೈತರನ್ನು ಸಾಲದ ದವಡೆಗೆ ನೂಕಿದೆ.

ಜಗಳೂರು ತಾಲ್ಲೂಕಿನ ಮರೇನಹಳ್ಳಿ ಗ್ರಾಮದ ರೈತ ಹಾಗೂ ದೊಣ್ಣೆಹಳ್ಳಿ ತಾಲ್ಲೂಕು ಪಂಚಾಯಿತಿ ಸದಸ್ಯ ಟಿ.ಬಸವರಾಜ್‌ ಅವರ ಹೊಲದಲ್ಲಿ ಈರುಳ್ಳಿ ಕೊಳೆಯುತ್ತಿರುವುದು ನೋಡಿ ಮನನೊಂದು ಟ್ರ್ಯಾಕ್ಟರ್ ಸಹಾಯದಿಂದ ಹೊಲದಲ್ಲಿ ಈರುಳ್ಳಿಯ ಗೆಡ್ಡೆಯನ್ನು ನಾಶ ಪಡಿಸುತ್ತಿದ್ದಾರೆ.

ಬಸವರಾಜ್ ಅವರು ಸುಮಾರು 2 ಎಕರೆ 20 ಗುಂಟೆ ಜಮೀನಿನಲ್ಲಿ ಈರುಳ್ಳಿಯನ್ನು ಬಿತ್ತನೆ ಮಾಡಿದ್ದರು. ಈ ಬೆಳೆಯನ್ನು ಬಿತ್ತಲು ಸುಮಾರು 40 ರಿಂದ 60 ಸಾವಿರ ರೂಗಳು ಇಲ್ಲಿವರೆಗೆ ಖರ್ಚಾಗಿವೆ. ಆದರೆ, ತಾವು ಬೆಳೆದ `ಈರುಳ್ಳಿ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬಂತೆ ಈ ವರ್ಷ ಬೆಳೆದ ಈರುಳ್ಳಿ ಬೆಳೆಗಳಿಗೆ ಸುಳಿ ರೋಗ ಮತ್ತು ಕೋತಿ ರೋಗ. ಬುಡುಸು ರೋಗ ಈ ವರ್ಷ ಅಂಟಿಕೊಂಡಿವೆ. ಆದರೆ ನಾವು ಸಾಕಷ್ಟು ಬಾರಿ ಔಷಧಿ ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬಂದಿಲ್ಲ.

ಸಾಲಸೂಲ ಮಾಡಿ ದುಬಾರಿ ದರದಲ್ಲಿ ಈರುಳ್ಳಿ ಬೀಜವನ್ನು ತಂದು ಬಿತ್ತನೆ  ಮಾಡಿದ್ದೇವೆ. ಹಿಂದಿನ ವರ್ಷ ಸಹ ಈರುಳ್ಳಿ ಬೆಳೆಗೆ ನಮಗೆ ಸರಿಯಾದ ರೀತಿ ಬೆಲೆ ಸಿಗಲಿಲ್ಲ. ಸುಮಾರು 300ರಿಂದ 400 ಪಾಕೆಟ್‌ಗಳಲ್ಲಿನ  ಈರುಳ್ಳಿ ಕೊಳೆತು ಹೋಗುತ್ತಿರುವುದರಿಂದ ಹಾಗೂ  ಸರಿಯಾದ ರೀತಿ ದರ ಸಿಗದ ಕಾರಣ ಈರುಳ್ಳಿಯನ್ನು ಜಮೀನಿನಲ್ಲಿಯೇ ಬಿಟ್ಟು ಟ್ರ್ಯಾಕ್ಟರ್ ಸಹಾಯದಿಂದ ನಾಶ ಪಡಿಸಿದ್ದೇನೆ ಎನ್ನುತ್ತಾರೆ ಬಸವರಾಜ್.

ತಾಲ್ಲೂಕಿನಾದ್ಯಂತ ಮಳೆ ಹೆಚ್ಚಾಗಿ ಹೊಲದಲ್ಲಿ ನೀರು ತುಂಬಿ ಈರುಳ್ಳಿ ಗೆಡ್ಡೆ ಕೊಳೆತು  ಹೋಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿಲ್ಲ ಎಂದು ಅವರು ಆರೋಪಿಸಿದರು.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಪಾರ ಪ್ರಮಾಣದ ಈರುಳ್ಳಿ ಬೆಳೆ ನಾಶವಾಗಿರುವ ರೈತರ ಜಮೀನಿಗೆ ಭೇಟಿ ನೀಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ,  ಸಂಬಂಧಪಟ್ಟ ಇಲಾಖೆಯ  ಅಧಿಕಾರಿಗಳು ಸರ್ಕಾರದಿಂದ ಬೆಳೆ ನಷ್ಟ ಪರಿಹಾರವನ್ನು ಶೀಘ್ರವೇ ಕೊಡಿಸಬೇಕು ಎಂದು ತಾಲ್ಲೂಕಿನ ರೈತರು ಆಗ್ರಹಿಸಿದ್ದಾರೆ.

error: Content is protected !!