ದಾವಣಗೆರೆ, ಸೆ.24- ಕೊರೊನಾ ಮಹಾಮಾರಿ ಯಿಂದ ದೂರವಿರಲು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಅನಾವಶ್ಯಕ ಓಡಾಟ, ಸ್ವಚ್ಚತೆ ಹೀಗೆ ಮುಂ ಜಾಗ್ರತೆಯಾಗಿ ಸುರಕ್ಷತಾ ಕ್ರಮಗಳ ಮುಖೇನ ತಮ್ಮ ಜೀವನ ಮತ್ತು ಜೀವ ರಕ್ಷಿಸಿಕೊಳ್ಳುವಂತೆ ಎಷ್ಟೇ ಜಾಗೃತಿ ಮೂಡಿಸಿದರೂ ಹಾಗೂ ದಂಡಂ ದಶಗುಣಂ ಎಂಬಂತೆ ದಂಡ ವಿಧಿಸಿ ಎಚ್ಚರಿಸಿದರೂ ಸಹ ನಿರ್ಲಕ್ಷ್ಯ ಮನೋ ಭಾವವಿರುವ ಸಾ ರ್ವಜನಿಕರು ಜಾಗ್ರತೆ ವಹಿಸುತ್ತಿಲ್ಲ.
ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದರೂ ಜಾಗ್ರತೆ ವಹಿಸುವ ಬದಲು, ಕೆಲವರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದರಿಂದ ದೂರ ಉಳಿದು ಅಪಾಯದ ಹೆಜ್ಜೆ ಇಡುವಂತಾಗಿದೆ.
ಸುರಕ್ಷತಾ ಕ್ರಮಗಳ ಬಗ್ಗೆ ನಗರದಲ್ಲಿ ಜಿಲ್ಲಾ ಪೊಲೀಸರು ಜನಜಾಗೃತಿ ಜೊತೆಗೆ ಕೊನೆಗೆ ದಂಡ ವಿಧಿಸುವ ಮುಖೇನ ಜನರು ಮಾಸ್ಕ್ ಧರಿಸುವಂತೆ ಮಾಡುವ ಪ್ರಯತ್ನವನ್ನೂ ನಡೆಸುತ್ತಿದ್ದಾರೆ. ಅಲ್ಲದೇ ನಗರ ಪಾಲಿಕೆಯ ಆರೋಗ್ಯ ಹಾಗೂ ಪರಿಸರ ಅಧಿಕಾರಿಗಳು ಸಹ ಮಾಸ್ಕ್ ಧರಿಸದ ಜನರಿಗೆ ಜಾಗೃತಿ ಜೊತೆಗೆ ದಂಡ ವಿಧಿಸಿ ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್ ಧರಿಸುವಂತೆ ನೀತಿ ಪಾಠ ಹೇಳಲು ಮುಂದಾಗಿದ್ದಾರೆ.
ಇಂದೂ ಸಹ ನಗರ ಪಾಲಿಕೆಯ ಆರೋಗ್ಯ ಹಾಗೂ ಪರಿಸರ ಅಧಿಕಾರಿ ಗಳು ಅಕ್ಕಮಹಾದೇವಿ ರಸ್ತೆ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ,
ಹಳೇ ಬಸ್ ನಿಲ್ದಾಣ ಬಳಿ, ಕೆಟಿಜೆ ನಗರ ಪೊಲೀಸ್ ಕ್ವಾಟ್ರಸ್ ಬಳಿ, ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ ಸೇರಿದಂತೆ ನಗರದ ವಿವಿಧೆಡೆ ಇಂದು ಮಾಸ್ಕ್ ಧರಿಸದೇ ರಸ್ತೆಗಿಳಿದ ದ್ವಿಚಕ್ರ ವಾಹನ ಸವಾರರು, ಸಾರ್ವಜನಿಕರಿಗೆ ದಂಡ ವಿಧಿಸಿ ಆರೋಗ್ಯದ ಕಾಳಜಿ ತೋರುವಂತೆ ಕಳಕಳಿಯಿಂದ ಮನವಿ ಮಾಡಿದ್ದಾರೆ.
ಈ ಸಂಬಂಧ `ಜನತಾವಾಣಿ’ಗೆ ಮಾಹಿತಿ ನೀಡಿರುವ ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಸುಧೀಂದ್ರ, ನಗರದಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿ, ಆರೋಗ್ಯ ನಿರೀಕ್ಷಕರ ಜೊತೆ ಪೊಲೀಸ್ ಸಿಬ್ಬಂದಿ ಸೇರಿ ಕಾರ್ಯಾಚರಣೆ ನಡೆಸುತ್ತಿದ್ದು, ಒಟ್ಟು 4 ತಂಡಗಳು ಕಾರ್ಯಾಚರಣೆಗಿಳಿದಿವೆ. ಇಂದು ಮಾಸ್ಕ್ ಧರಿಸದೇ ಸುಮಾರು 80ಕ್ಕೂ ಹೆಚ್ಚು ಮಂದಿ ಬಂದಿದ್ದರು. ಸುಮಾರು 14ರಿಂದ 15 ಸಾವಿರ ದಂಡ ವಸೂಲಾಗಿದೆ. ಒಬ್ಬರಿಗೆ 200 ರೂ. ದಂಡ ವಿಧಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಾಸ್ಕ್ ಧರಿಸದೇ ಬಂದಿದ್ದ ಕೆಲವರು ದಂಡ ಕಟ್ಟಲು ಹಣವಿಲ್ಲವೆಂದರೂ ಮಾಸ್ಕ್ ಧರಿಸುವುದನ್ನು ಮರೆಯದಿರಲೆಂಬ ಕಾರಣಕ್ಕೆ 100 ರೂ. ದಂಡ ವಿಧಿಸಲಾಗಿದೆ. ಕೊರೊನಾ ಬಂದ ಸಂದರ್ಭದಲ್ಲಿ ಮೊದಲಿಗೆ ನಗರ ಪಾಲಿಕೆಯ ಆರೋಗ್ಯ ಇಲಾಖೆಯಿಂದ ಜನಜಾಗೃತಿ ಹಾಗೂ ದಂಡ ವಿಧಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಆಗ ಮಾಸ್ಕ್ ಧರಿಸದ ಕೆಲವರು ದಂಡ ಕಟ್ಟಲು ಹಿಂದೇಟು ಹಾಕಿದ್ದಲ್ಲದೇ, ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳ ಮೇಲೆ ದೌರ್ಜನ್ಯ, ಹಲ್ಲೆಗೂ ಮುಂದಾದರು. ಇದರಿಂದ ಹಿಂದೆ ಸರಿದಿದ್ದೆವು. ಪೊಲೀಸ್ ಇಲಾಖೆ ಜೊತೆಗೆ ನಗರ ಪಾಲಿಕೆ ಆರೋಗ್ಯ ಇಲಾಖೆಯು ಮಾಸ್ಕ್ ಧರಿಸದವರಿಗೆ ದಂಡ ವಿಧಿಸಬೇಕೆಂಬ ರಾಜ್ಯ ಸರ್ಕಾರದ ನಿರ್ದೇಶನದಂತೆ ಪುನಃ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಆರೋಗ್ಯ ನಿರೀಕ್ಷಕ ಅಲ್ತಮಷ್ ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಪರಿಸರ ಅಭಿಯಂತರರಾದ ಜಗದೀಶ್, ಬಸವಣ್ಣ, ಪ್ರಕಾಶ್, ಸಂತೋಷ್, ಹರೀಶ್, ರಾಘವೇಂದ್ರ, ಅಂಜಿನಪ್ಪ, ಉಷಾ, ಲಕ್ಷ್ಮಿ, ಮಲ್ಲಿಕಾ, ಮದನ್ ಕುಮಾರ್, ನೀಲಪ್ಪ, ಶಶಿಧರ್ ಸೇರಿದಂತೆ ಇತರರು ಇದ್ದರು.