ದಾವಣಗೆರೆ, ಸೆ. 23 – ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಕೋವಿಡ್ ಕೆಲಸಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಜಿಲ್ಲಾಡಳಿತ, ಬುಧವಾರದಂದು `ಕಲ್ಯಾಣ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಮಹಿಳಾ ನಿಲಯ ಮೂವರು ಮಹಿಳೆಯರು ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಲು ನೆರವಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯ ನಿರ್ವಹಿಸುವ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಮೂವರು ಮಹಿಳೆಯರ ಮದುವೆಯನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಸಾರಥ್ಯದಲ್ಲಿ ನೆರವೇರಿಸಲಾಗಿದೆ.
24 ವರ್ಷದ ಮಂಜುಳಾ ಅವರು ಶಿವಮೊಗ್ಗದ ಹೆದ್ಲಿ ನಿವಾಸಿ ಹೆಚ್.ಜಿ. ಉಮೇಶ್, 19 ವರ್ಷದ ರೇಷ್ಮ ಅವರು ಉತ್ತರ ಕನ್ನಡದ ಮುಂಡಗನ ಮನೆಯ ನಾಗರಾಜ ಸುಬ್ರಾಯ ಹೆಗಡೆ ಹಾಗೂ 21 ವರ್ಷದ ಕುಪ್ಪಮ್ಮ ಅವರನ್ನು ಉತ್ತರ ಕನ್ನಡದ ಶಿವಳ್ಳಿಯ ಆರ್. ದಯಾನಂದ ಭಟ್ಟ ಅವರು ಮದುವೆಯಾಗಿದ್ದಾರೆ.
ಮಹಿಳಾ ನಿಲಯದ ಯುವತಿಯರನ್ನು ಮದುವೆಯಾಗುವವರಲ್ಲಿ ಕರಾವಳಿ ಹಾಗೂ ಮಲೆನಾಡಿನವರು ಹೆಚ್ಚಾಗಿದ್ದಾರೆ. ಈ ವರ್ಷವೂ ಅದೇ ಪದ್ಧತಿ ಮುಂದುವರೆದಂತಾಗಿದೆ.
ಶ್ರೀರಾಮನಗರದಲ್ಲಿರುವ ಮಹಿಳಾ ನಿಲಯದಲ್ಲಿ ಮದುವೆ ಕಾರ್ಯ ನೆರವೇರಿತು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ್ ನಾಯ್ಕ, ಎಸ್ಪಿ ಹನುಮಂತರಾಯ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ.ಹೆಚ್. ವಿಜಯ್ ಕುಮಾರ್ ಮತ್ತಿತರರು ಮದುವೆಯನ್ನು ನೆರವೇರಿಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮಹಿಳಾ ನಿಲಯದಲ್ಲಿ ಈ ಹಿಂದೆ 36 ಮದುವೆಗಳು ನೆರವೇರಿದ್ದವು. ಈಗಿನ ಮೂರು ಸೇರಿ ಒಟ್ಟು 39 ಮದುವೆಗಳು ನೆರವೇರಿದಂತಾಗಿವೆ ಎಂದರು.
ಪುರೋಹಿತರ ಮದುವೆಗೇ ಪೌರೋಹಿತ್ಯ ಮಾಡುವವರಿಲ್ಲ !
ಶ್ರೀರಾಮನಗರದಲ್ಲಿರುವ ಮಹಿಳಾ ನಿಲಯದಲ್ಲಿ ಬುಧವಾರ ಮದುವೆಯಾದ ಮೂವರೂ ವರಗಳು ಪೌರೋಹಿತ್ಯ ವೃತ್ತಿಯವರು. ಆದರೆ, ಇವರ ಮದುವೆ ಮಾಡಲಿಕ್ಕೇ ಪುರೋಹಿತರು ಇರಲಿಲ್ಲ!
ಪುರೋಹಿತರ ವ್ಯವಸ್ಥೆ ಎಂದಿನಂತೆ ಮಾಡಲಾಗಿತ್ತು. ಆದರೆ, ಕೋವಿಡ್ ಸಮಸ್ಯೆಯಿಂದಾಗಿ ಪುರೋಹಿತರು ಆಗಮಿಸಿರಲಿಲ್ಲ. ಜಿಲ್ಲಾಡಳಿತದ ಉನ್ನತ ಅಧಿಕಾರಿಗಳೇ ಪೌರೋಹಿತ್ಯ ವಹಿಸಿದ್ದರು.
ಮದುವೆಯಾದವರು ಹೇಗೂ ಪುರೋಹಿತರೇ ಆಗಿರುವುದರಿಂದ ಇದೊಂದು ರೀತಿಯ
`ಆತ್ಮನಿರ್ಭರ್’ ವ್ಯವಸ್ಥೆಯಾಯಿತು ಎಂದು ಸ್ಥಳದಲ್ಲಿದ್ದವರು ಉದ್ಘರಿಸಿದರು !
ಈ ಸತ್ಕಾರ್ಯ ನಡೆಸುವ ಅವಕಾಶ ಸಿಕ್ಕಿರುವುದು ನಮಗೆ ಗೌರವ, ಹೆಮ್ಮೆ ಹಾಗೂ ಸೌಭಾಗ್ಯವಾಗಿದೆ ಎಂದು ಹೇಳಿದರು. ಕೋವಿಡ್ ಕಾರಣದಿಂದಾಗಿ ಮದುವೆ ಸ್ವಲ್ಪ ವಿಳಂಬವಾಯಿತು. ದಂಪತಿ ಗಳು ಸುಖದಿಂದ ಬಾಳಲಿ ಎಂದು ಹಾರೈಸುವುದಾಗಿ ತಿಳಿಸಿದರು.
ಜಗಳೂರು ತಾಲ್ಲೂಕಿನ ಅಣಬೂರು ಗೊಲ್ಲರಹಟ್ಟಿಯಲ್ಲಿ ಅತ್ಯಾಚಾರಕ್ಕೆ ಸಿಲುಕಿದ್ದ ಮೂಕ ಯುವತಿಗೆ ಜನಿಸಿ, ಬಹಿಷ್ಕಾರಕ್ಕೆ ಒಳಗಾಗಿದ್ದ ಮಗು ಶ್ರೀಕೃಷ್ಣನಿಗೆ ಈಗ ಜವಳದ ಕಾರ್ಯ ನೆರವೇರಿಸಲಾಗುವುದು. ನಂತರ ಮಗುವನ್ನು ಗ್ರಾಮದೊಳಗೆ ಕಳಿಸುವ ಪುರ ಪ್ರವೇಶ ಕಾರ್ಯಕ್ರಮಕ್ಕೆ ಪ್ರಯತ್ನಿಸಲಾ ಗುವುದು ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಬೀಳಗಿ ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ನವ ವಿವಾಹಿತ ಹೆಚ್.ಜಿ. ಉಮೇಶ್, ಪುರೋಹಿತ ಹಾಗೂ ಕೃಷಿಯಲ್ಲಿರುವ ತಮಗೆ ಸ್ವಜಾತಿಯಲ್ಲಿ ಹೆಣ್ಣು ಸಿಗುವುದು ಕಷ್ಟವಾಗಿತ್ತು. ಹೀಗಾಗಿ ಅಂತರ್ಜಾತಿ ವಿವಾಹಕ್ಕೆ ಮುಂದಾಗಿದ್ದಾಗಿ ಹೇಳಿದರು.
ಉಮೇಶ್ ಅವರ ಪತ್ನಿ ಮಂಜುಳ ಮಾತ ನಾಡಿ, ಈಗ ಹೊಸ ಬದುಕಿಗೆ ಕಾಲಿರಿಸಿ ರುವುದು ಹೊಸತನದ ಸಂತೋಷವನ್ನು ಸಹಜವಾಗಿಯೇ ತಂದಿದೆ ಎಂದು ಹೇಳಿದರು.
ತಮ್ಮ ತವರು ಗ್ರಾಮಗಳಿಗೆ ತೆರಳಿದ ನಂತರ ಸಾಂಪ್ರದಾಯಿಕ ಮದುವೆ ಕಾರ್ಯಕ್ರಮಗಳನ್ನು ನೆರವೇರಿಸುವುದಾಗಿ ಮೂವರೂ ದಂಪತಿಗಳು ತಿಳಿಸಿದ್ದಾರೆ.