ಅಂಗನವಾಡಿ ನೇಮಕಕ್ಕೆ ನಿವೃತ್ತ ಶಿಕ್ಷಕಿಯಿಂದ ಲಂಚ

ದಾವಣಗೆರೆ, ಸೆ. 22 – ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಿಸುವುದಾಗಿ ಹೇಳಿ ನಿವೃತ್ತ ಶಿಕ್ಷಕಿಯೊಬ್ಬರು 30 ಜನರಿಂದ ಹಣ ಪಡೆದ ಬಗ್ಗೆ ಮಾಹಿತಿ ನೀಡಿದರೂ ಸಹ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ದೂರಿದ್ದಾರೆ.

ದಾವಣಗೆರೆ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಇಮಾಂ ನಗರದ ಓರ್ವ ಅಂಗನವಾಡಿ ಕಾರ್ಯಕರ್ತೆ ಆಹಾರ ಧಾನ್ಯಗಳನ್ನು ವಿತರಿಸದೇ ಮಾರಿಕೊಳ್ಳುತ್ತಿರುವ ಬಗ್ಗೆ ದೂರಿದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ನೇಮಕಕ್ಕೆ ಮಾನದಂಡವಿದ್ದು, ಅದರಂತೆ ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ನಡುವೆಯೂ, ನಿವೃತ್ತ ಶಿಕ್ಷಕಿ ಯೊಬ್ಬರು ನೇಮಕ ಮಾಡುವುದಾಗಿ ಸುಮಾರು 30 ಜನರಿಂದ ತಲಾ 30 ಸಾವಿರ ರೂ. ಪಡೆದಿದ್ದಾರೆ ಎಂದು ಮಮತಾ ಮಲ್ಲೇಶಪ್ಪ ಹೇಳಿದರು.

ಈ ಬಗ್ಗೆ ಕೆಲ ದಿನಗಳ ಹಿಂದೆ ಸಿಡಿಪಿಒ ಧರಣಿ ಕುಮಾರ್ ಗಮನಕ್ಕೆ ತರಲಾಗಿತ್ತು. ಆದರೂ, ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ತಾ.ಪಂ. ಅಧ್ಯಕ್ಷೆ ಹೇಳಿದರು.

ಬೇತೂರು ನಗರದಲ್ಲಿರುವ ಮಹಿಳೆಯೊಬ್ಬರು, ತಾವು ಇಮಾಂ ನಗರ ದಲ್ಲಿರುವುದಾಗಿ ಹೇಳಿ ನಕಲಿ ದಾಖಲೆ ಗಳ ಮೂಲಕ ಅಂಗನವಾಡಿ ಕಾರ್ಯಕರ್ತೆಯಾಗಿ ದ್ದಾರೆ. ಇವರು ಯಾರೊಬ್ಬರಿಗೂ ಆಹಾರ ಧಾನ್ಯ ವಿತರಿಸದೇ ಗಂಡನ ಆಟೋದಲ್ಲಿ ಬೇರೆಯವರಿಗೆ ಸಾಗಿಸುತ್ತಿದ್ದಾರೆ ಎಂದವರು ತಿಳಿಸಿದರು.

ಈ ಎಲ್ಲದರ ಬಗ್ಗೆ ತಮ್ಮ ಬಳಿ ಸಾಕ್ಷಿಗಳೂ ಇವೆ ಎಂದು ಮಮತಾ ಮಲ್ಲೇಶಪ್ಪ ಹೇಳಿದರು. ಆಗ ಮಾತನಾಡಿದ ಕೆಲ ಸದಸ್ಯರು, ಸಾಕ್ಷಿಗಳು ಇದ್ದ ಸಂದರ್ಭದಲ್ಲಿ ಅಧಿಕಾರಿಗಳ ಕ್ರಮಕ್ಕೆ ಕಾಯದೇ ದೂರು ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾ.ಪಂ. ಸದಸ್ಯ ನಾಗರಾಜ್, ಈ ವರ್ಷ ಶಾಲೆ ನಡೆಯುತ್ತದೋ ಅಥವಾ ರದ್ದಾಗುತ್ತದೋ ಸ್ಪಷ್ಟವಾಗಿ ತಿಳಿಸಬೇಕಿದೆ. ಖಾಸಗಿ ಶಾಲೆಗಳು ಪೋಷಕರಿಗೆ ಶುಲ್ಕಕ್ಕೆ ಒತ್ತಾಯಿಸುತ್ತಿರುವ ಜೊತೆಗೆ, ಪುಸ್ತಕಗಳಿಗೆ ಎಂದು 3 ಸಾವಿರ ರೂ.ಗಳವರೆಗೆ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.

ತಾ.ಪಂ. ಸದಸ್ಯ ಮುರುಗೇಂದ್ರಪ್ಪ ಮಾತನಾಡಿ, ಮಳಲಕೆರೆ, ಹುಚ್ಚವ್ವನಹಳ್ಳಿ ಹಾಗೂ ಆವರಗೆರೆ ಮೂರು ಕೆರೆಗಳಿಗೆ ಒಂದೇ ಮೀನುಗಾರಿಕೆ ಸಹಕಾರ ಸಂಘದ ಮೂಲಕ ಮೀನುಗಾರಿಕೆ ನಡೆಸಲಾಗುತ್ತಿದೆ. ಒಂದೇ ಸಂಘದ ಬದಲು ಬೇರೆಯವರಿಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ತಾ.ಪಂ. ಜೂನ್ ತಿಂಗಳಲ್ಲಿ ನಿರ್ಣಯ ತೆಗೆದುಕೊಂಡಿತ್ತು. ಆದರೂ, ಇದುವರೆಗೂ ನಿರ್ಣಯ ಸರ್ಕಾರಕ್ಕೆ ಕಳಿಸಿಲ್ಲ ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಏಳು ಇಲಾಖೆ ಬಿಟ್ಟು ಉಳಿದ ಇಲಾಖೆಗಳು ಸದಸ್ಯರಿಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ಆಕ್ಷೇಪಿಸಿ ಮೂರು ತಿಂಗಳಾದರೂ ಕ್ರಮ ತೆಗೆದುಕೊಂಡಿಲ್ಲ ಎಂದು ತಾ.ಪಂ. ಸದಸ್ಯ ಹನುಮಂತಪ್ಪ ಆಕ್ಷೇಪಿಸಿದರು.

ತಾಲ್ಲೂಕು ಪಂಚಾಯ್ತಿಯಲ್ಲಿ ಹಣ ದುರುಪಯೋಗವಾಗುತ್ತಿದೆ. ಐದು – ಹತ್ತು ಲಕ್ಷ ರೂ.ಗಳ ಪರಿಕರಗಳ ಖರೀದಿಯಾಗುತ್ತಿದೆ. ಆದರೆ, ಸದಸ್ಯರು ಶೌಚಾಲಯ ನಿರ್ಮಾಣದಂತಹ ಸಣ್ಣ ಕೆಲಸಗಳಿಗೆ ಹೇಳಿದರೂ ಮಾಡಿಕೊಡುತ್ತಿಲ್ಲ ಎಂದು ತಾ.ಪಂ. ಸದಸ್ಯ ಆಲೂರು ನಿಂಗರಾಜ್ ಹೇಳಿದರು.

ಕೊರೊನಾ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳಲು ಸಾಮಾನ್ಯ ಸಭೆಯನ್ನು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆಸಲಾಗಿತ್ತು. ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆ, ಕೋರಂ ಇರದೇ ಸುಮಾರು 20 ನಿಮಿಷಗಳ ಕಾಲ ವಿಳಂಬವಾಯಿತು.

ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ಮೀನಾ ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳ ಅಣಬೇರು ಶಿವಮೂರ್ತಿ, ತಾ.ಪಂ. ಸಿಇಒ ಬಿ.ಎಂ. ದಾರುಕೇಶ್,  ತಾ.ಪಂ. ಸದಸ್ಯರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!