ಜಗಳೂರು, ಸೆ.22- ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಎಐಟಿಯುಸಿ ನೇತೃತ್ವದಲ್ಲಿ ನಿನ್ನೆ ಇಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರ, ಮಹಾತ್ಮಾಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದಿಂದ ತಾಲ್ಲೂಕು ಕಚೇರಿಗೆ ತೆರಳಿದ ಪ್ರತಿಭಟನಾ ಮೆರವಣಿಗೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಂತರ ತಹಶೀಲ್ದಾರ್ರವರಿಗೆ ಮನವಿ ಸಲ್ಲಿಸಿತು.
ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ಭಾಷಾ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಎಲ್ಕೆಜಿ ಮತ್ತು ಯುಕೆಜಿ ಶಿಕ್ಷಣದ ಬಗ್ಗೆ ತರಬೇತಿ ನೀಡಬೇಕು. ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿಯೇ ಸರ್ಕಾರದಿಂದ ಎಲ್ಕೆಜಿ/ಯುಕೆಜಿ ತರಗತಿಗಳನ್ನು ಪ್ರಾರಂಭಿಸಬೇಕು. ಐಸಿಡಿಎಸ್ ಯೋಜನೆಯನ್ನು ಉಳಿಸಬೇಕು ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣ ಪೂರೈಸಿದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ವರ್ಗಾವಣೆ ಪ್ರಮಾಣ ಪತ್ರ ನೀಡಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷರಾದ ಸುಶೀಲಮ್ಮ, ಅಧ್ಯಕ್ಷರಾದ ಹಾಲಮ್ಮ, ಉಪಾಧ್ಯಕ್ಷೆ ಶಾಂತವೀರಮ್ಮ, ನಾಗರತ್ನಮ್ಮ, ಜಿಲ್ಲಾ ಸಂಚಾಲಕ ಮಾದಿಹಳ್ಳಿ ಮಂಜುನಾಥ್, ಪದಾಧಿಕಾರಿಗಳಾದ ಪುಷ್ಪಾಂಜಲಿ, ಭರಮಕ್ಕ, ಪಾರಿಜಾತ, ಸರೋಜಮ್ಮ, ವಿನೋದ, ಶೈಲಜ, ಬಸವಣ್ಣೆಮ್ಮ, ಲೀಲಾವತಿ, ಸುಗುಣ, ಅರ್ಚನಾ ಸೇರಿದಂತೆ ನೂರಾರು ಕಾರ್ಯಕರ್ತೆಯರು ಭಾಗವಹಿಸಿದ್ದರು.