ಹೊಟ್ಯಾಪುರದ ಮಠದ ಶ್ರೀ ಗಿರಿಸಿದ್ದೇಶ್ವರ ಸ್ವಾಮೀಜಿ ಬಣ್ಣನೆ
ನ್ಯಾಮತಿ, ಸೆ.20- 75 ವರ್ಷಗಳಲ್ಲಿ ಮಾಡಬಹುದಾದ ಕೆಲಸವನ್ನು ಕೇವಲ 25 ವರ್ಷಗಳಲ್ಲಿಯೇ ಪೂರೈಸಿದ್ದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಯವರನ್ನು ನಾವು ಅವರ ಸಾಧನೆಗಳಿಂದಲೇ ಗುರುತಿಸುವಂತಾಗಿದೆ ಎಂದು ಹೊಟ್ಯಾಪುರದ ಉಜ್ಜಯಿನಿ ಶಾಖಾ ಹಿರೇಮಠದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.
ಹೊನ್ನಾಳಿ ತಾಲ್ಲೂಕು ರಾಂಪುರ ಕ್ಷೇತ್ರದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಶ್ರೀ ಹಾಲಸ್ವಾಮೀಜಿ ಸಮುದಾಯ ಭವನದಲ್ಲಿ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯ ಕರ್ತೃಗದ್ದುಗೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂದು ಏರ್ಪಾಡಾಗಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿ ಕೇವಲ ಒಂದು ತಾಲ್ಲೂಕಿಗೆ ಮಾತ್ರ ಸೀಮಿತವಾಗದೇ, ಈ ನಾಡಿನ ಲಕ್ಷಾಂತರ ಭಕ್ತರನ್ನು ಹೊಂದಿದ್ದರು. ಮಾತೃ ಹೃದಯವನ್ನು ಹೊಂದಿ ಭಕ್ತರ ಕಷ್ಟಗಳಿಗೆ ಸ್ಪಂದಿಸಿ ಈ ಭಾಗದ ನಡೆದಾಡುವ ದೇವರು ಎಂದು ಹೆಸರಾಗಿದ್ದರು ಎಂದು ಹೇಳಿದರು.
ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆ ಯರ್ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಕ್ತರೇ ನಮ್ಮ ಶಕ್ತಿ ಎಂದು ನಂಬಿ ತಮ್ಮ ಜೀವಿತಾವಧಿಯನ್ನು ಭಕ್ತರಿಗೇ ಮೀಸಲಿಟ್ಟ ಮಹಾನ್ ಚೇತನ ಲಿಂ. ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ. ಜಾತ್ಯತೀತವಾಗಿ ಭಕ್ತರನ್ನು ಗಳಿಸಿದ್ದಾರೆ. ಹಾಲಸ್ವಾಮೀಜಿ ತಮ್ಮ ಭಕ್ತರಿಗೆ ಮದುವೆಗಳನ್ನು ಮಾಡಿಸಿದ್ದಾರೆ. ಆಯುರ್ವೇದ ಚಿಕಿತ್ಸೆಯ ಮೂಲಕ ಆರೋಗ್ಯ ಹಾಗೂ ಸಂತಾನಕ್ಕೆ ಔಷಧಿಗಳನ್ನು ನೀಡಿದ್ದಾರೆ. ಅವರ ಸೇವೆಯು ಅವಿಸ್ಮರಣೀಯ. ಅವರ ಕರ್ತೃಗದ್ದುಗೆಯು ಭಕ್ತರು ಮನಸ್ಸು ಮಾಡಿದರೆ ತುಂಬಾ ಅದ್ಭುತವಾಗಿಯೇ ನಡೆಯುತ್ತದೆ ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯ ದರ್ಶಿ ಶಾಸಕ ಎಂ.ಪಿ ರೇಣುಕಾಚಾರ್ಯ ಮಾತನಾಡಿ, ಶ್ರೀಗಳ ಕನಸು ರಾಂಪುರದಿಂದ ಗೋವಿನಕೋವಿಗೆ ಸೇತುವೆ ನಿರ್ಮಾಣ, ಅವರ ಒತ್ತಾಯದ ಮೇರೆಗೆ 169 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿಸ ಲಾಗಿತ್ತು. ಸರ್ಕಾರ ಬದಲಾದ ಕಾರಣ ಆ ಕಾರ್ಯ ಅರ್ಧಕ್ಕೆ ನಿಂತಿದೆ. ಮುಖ್ಯಮಂತ್ರಿ ಗಳಿಂದ ಮತ್ತೆ ಈ ಯೋಜನೆಯ ಅನು ಮೋದನೆ ಪಡೆಯುತ್ತೇನೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ, ಶ್ರೀಗಳ ಕರ್ತೃಗದ್ದುಗೆ ನಿರ್ಮಾಣಕ್ಕೆ 3 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡುವ ಯೋಜನೆಯನ್ನು ಸಿದ್ದಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಗಿರೀಶ್ ಪಾಟೀಲ್, ಬೆನಕನಹಳ್ಳಿ ಮಲ್ಲೇಶಪ್ಪ, ಗದ್ದಿಗೇಶ್, ಕೊರಚಗೊಂಡನಹಳ್ಳಿ ಸಿದ್ದಪ್ಪ, ಆನಂದಪ್ಪ ಹೊನ್ನಾಳಿ ಎಂ.ಎಸ್.ಶಾಸ್ತ್ರೀ ಹೊಳೆಮಠ, ಶಿವಾನಂದಯ್ಯ ಮತ್ತಿತರರು ಇದ್ದರು.