ವಿದ್ಯಾರ್ಥಿಗಳಿಗೆ ಸುತ್ತಲಿನ ಸಾಧಕರ ಬಗ್ಗೆ ಅಧ್ಯಯನದ ಶಿಕ್ಷಣ ಅಗತ್ಯ

ಆಂಧ್ರದ ಬುಡಕಟ್ಟು ಕೇಂದ್ರೀಯ ವಿವಿ ಕುಲಪತಿ ಪ್ರೊ. ಕಟ್ಟಿಮನಿ ಅನಿಸಿಕೆ

ದಾವಣಗೆರೆ, ಸೆ.18- ಜಾಗತಿಕ ಮಟ್ಟದ ಪೈಪೋಟಿಯ ನೆಲೆಯಲ್ಲಿ ಯೋಚನೆ ಮಾಡಿ, ಸ್ಥಳೀಯ ಮಟ್ಟದಲ್ಲಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಾಗ ಮಾತ್ರ ಯಶಸ್ಸು, ಉನ್ನತಿ, ಅಭಿವೃದ್ಧಿ ಸಾಧ್ಯ ಎಂಬುದನ್ನು ಮಕ್ಕಳಿಗೆ ತಿಳಿಸುವುದು ಮುಖ್ಯ. ಇದರ ನೆಲೆಯಲ್ಲಿಯೇ ನೂತನ ಶಿಕ್ಷಣ ನೀತಿಯನ್ನು ಶಾಲಾ ಮಟ್ಟದಲ್ಲಿ ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ನೂತನ ಶಿಕ್ಷಣ ನೀತಿ ಮಂಡಳಿ ಸದಸ್ಯರೂ ಆದ ಆಂಧ್ರಪ್ರದೇಶದ ಆದಿವಾಸಿ ಬುಡಕಟ್ಟು ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಟಿ.ವಿ. ಕಟ್ಟಿಮನಿ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಐಕ್ಯೂಎಸಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ವಿಶೇಷ ಉಪನ್ಯಾಸ ನೀಡಿದರು. 

‘ನಮ್ಮ ವಿದ್ಯಾರ್ಥಿಗಳಿಗೆ ಅಮೆರಿಕಾ, ಇಂಗ್ಲೆಂಡ್, ಚೀನಾದ ಸಾಧಕರಿಗಿಂತ ನಮ್ಮ ಸುತ್ತಲಿರುವ ಶಾಮನೂರು ಶಿವಶಂಕರಪ್ಪ, ಜಿ.ಎಂ.ಸಿದ್ದೇಶ್ವರ, ರಾಜನಹಳ್ಳಿ ಹನುಮಂತಪ್ಪ ಅವರಂತಹ ಸಾಧಕರ ಬಗ್ಗೆ ಅಧ್ಯಯನ ಮಾಡುವ ಶಿಕ್ಷಣ ಅಗತ್ಯ. ನಮ್ಮವರ ಬಗ್ಗೆ ನಮ್ಮ ಮಕ್ಕಳಿಗೆ ನಾವೇ ತಿಳಿಸದಿದ್ದರೆ ಅವರೆಲ್ಲ ಕಾಲಗತಿಯಲ್ಲಿ ಮರೆತು ಹೋಗುವ ಆತಂಕವಿದೆ’ ಎಂದು ಹೇಳಿದರು.

ಮಕ್ಕಳಿಗೆ ಶಿಕ್ಷಣ ನೀಡುವುದಷ್ಟೇ ಮುಖ್ಯವಲ್ಲ. ಯಾವ ರೀತಿಯ ಶಿಕ್ಷಣ ನೀಡುತ್ತೇವೆ. ಅದರ ಮಹತ್ವ, ಅದು ಮಕ್ಕಳ ಬದುಕನ್ನು ರೂಪಿಸುತ್ತದೆಯೇ ಎಂಬುದನ್ನು ತಿಳಿಯುವುದೂ ಮುಖ್ಯ. ಕೌಶಲ್ಯಯುಕ್ತ, ಬೌದ್ಧಿಕ, ಶಾರೀರಿಕ ವಿಕಾಸವನ್ನು ಒಳಗೊಂಡ ಶಿಕ್ಷಣಕ್ಕೆ ಆದ್ಯತೆ ನೀಡುವುದು ಅಗತ್ಯ. ನಮ್ಮ ಸುತ್ತಲಿನ ಪರಿಸರದಲ್ಲಿರುವ ಗಿಡ, ಮರ, ಬಳ್ಳಿ, ಜನರು, ಸಮಸ್ಯೆಗಳು, ಕೈಗಾರಿಕೆಗಳು, ಸಾಧಕರ ಬಗ್ಗೆಯೂ ತಿಳಿವಳಿಕೆ ನೀಡಿ, ಅವರನ್ನು ಪ್ರೇರೇಪಿಸುವ ಶಿಕ್ಷಣ ಅನಿವಾರ್ಯವಾಗಿದೆ ಎಂದು ಹೇಳಿದರು.

ಮಕ್ಕಳಿಗೆ ನೀಡುವ ನೆಲಮೂಲ ಶಿಕ್ಷಣ ಹೆಚ್ಚು ಪರಿಣಾಮಕಾರಿಯಾಗಿ ಬದುಕಿನಲ್ಲಿ ನೆಲೆಗೊಳ್ಳುತ್ತದೆ. ಅದೇ ಅವರ ಶಿಕ್ಷಣ, ಆರೋಗ್ಯ, ಬದುಕು, ಭವಿಷ್ಯವನ್ನೂ ರೂಪಿಸುತ್ತದೆ. ಸ್ಥಳೀಯವಾಗಿ ಲಭ್ಯವಿರುವ ಜನಪದೀಯ ಶಿಕ್ಷಣದ ಅರಿವು ಇಲ್ಲದಿದ್ದರೆ, ಮಕ್ಕಳಿಗೆ ಯಾವುದೇ ಉನ್ನತ ಶಿಕ್ಷಣ ನೀಡಿದರೂ ಪ್ರಯೋಜನವಾಗದು. ಮಾನವೀಯ ಮೌಲ್ಯಗಳನ್ನು ಒಳಗೊಂಡು ಸಮುದಾಯ ಆಧಾರಿತ ಜೀವನ ಶಿಕ್ಷಣ ನೀಡುವುದು ಅತ್ಯವಶ್ಯ ಎಂದು ನುಡಿದರು.

ಇಂಗ್ಲಿಷರು ನೀಡುತ್ತಿದ್ದ ಶಿಕ್ಷಣದಲ್ಲಿ ಪಠ್ಯವನ್ನು ಕಲಿಯುವುದಕ್ಕೆ ಮಾತ್ರ ಸೀಮಿತವಾಗಿದೆ. ಅದು ದೋಚುವ ಶಿಕ್ಷಣ. ಆದರೆ, ಭಾರತೀಯ ಪಾರಂಪರಿಕ ಶಿಕ್ಷಣದಲ್ಲಿ ಸ್ವೀಕಾರ ಪದ್ಧತಿಯಿದೆ. ಎಲ್ಲರನ್ನೂ ಒಳಗೊಳ್ಳುವ, ಒಪ್ಪಿಕೊಳ್ಳುವ, ಎಲ್ಲದಕ್ಕೂ ಗೌರವಿಸುವ ಸಂಸ್ಕೃತಿಯನ್ನು ನೀಡುತ್ತದೆ. ಅಂತಹ ಶಿಕ್ಷಣ ಮತ್ತೊಮ್ಮೆ ಅನುಷ್ಠಾನಕ್ಕೆ ಬರಲಿದೆ ಎಂದರು.

ದಾವಣಗೆರೆ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ. ಬಸವರಾಜ್‌ ಬಣಕಾರ, ಹಣಕಾಸು ಅಧಿಕಾರಿ ಪ್ರೊ. ಗೋಪಾಲ ಎಂ. ಅಡವಿರಾವ್, ಸಿಂಡಿಕೇಟ್ ಸದಸ್ಯರಾದ ವಿಜಯಲಕ್ಷ್ಮಿ ಹಿರೇಮಠ, ಡಾ. ಗಾಯತ್ರಿ ದೇವರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

error: Content is protected !!