ಸಿರಿಗೆರೆ ಸೆ.18- ಪ್ರತಿವರ್ಷ ಸೆಪ್ಟೆಂಬರ್ 24ರಂದು ಸಿರಿಗೆರೆಯಲ್ಲಿ ಆಚರಿಸುತ್ತಾ ಬಂದಿರುವ ಲಿಂಗೈಕ್ಯ ಹಿರಿಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಕೊರೊನಾ ಕಾರಣದಿಂದ ರದ್ದು ಮಾಡಿರು ವುದಾಗಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ.
ಇದುವರೆಗೆ ಬರೀ ನಗರ ಪ್ರದೇಶ ಗಳಲ್ಲಿ ವ್ಯಾಪಿಸಿದ್ದ ಕೊರೊನಾ ಈಗ ಹಳ್ಳಿಗಳಿಗೂ ಹಬ್ಬುತ್ತಿದೆ. ಇತ್ತೀಚೆಗೆ ಸಿರಿಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಷ್ಯ ಪ್ರಮುಖರೊಂದಿಗೆ ಸಮಾಲೋಚಿಸಿ ಇದೇ 24ರಂದು ನಡೆಯಬೇಕಾಗಿದ್ದ ಲಿಂಗೈಕ್ಯ ಗುರುಗಳವರ ಶ್ರದ್ಧಾಂಜಲಿ ಕಾರ್ಯವನ್ನು ಸ್ಥಗಿತಗೊಳಿಸಿರುವುದಾಗಿ ಶ್ರೀಗಳು ತಿಳಿಸಿದ್ದಾರೆ.
ನಾಡಿನ ನಾನಾ ಭಾಗಗಳಿಂದ ಸಹಸ್ರಾರು ಭಕ್ತರು ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಭಕ್ತಿ-ಗೌರವಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ. ಆದರೆ, ಅನೂಚಾನವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯಗಳ ಆಚರಣೆಯಿಂದ ವ್ಯಕ್ತಿಗತ ಮತ್ತು ಸಾಮಾಜಿಕ ಸಂಕಷ್ಟಗಳು ಎದುರಾಗುವಂತಿದ್ದರೆ ಅದನ್ನು ನಿಲ್ಲಿಸುವುದು ವಿಹಿತ. ಜನಜಂಗುಳಿ ಸೇರದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಹಳೆಯ ಸಂಪ್ರದಾಯಗಳನ್ನು ಬದಿಗೊತ್ತಿ, ಹೊಸ ಸಂಪ್ರದಾಯ ಜಾರಿಗೆ ತರುವಲ್ಲಿ ವ್ಯಕ್ತಿಯ ಹಿತ ಮತ್ತು ಸಮಾಜದ ಹಿತವೂ ಅಡಗಿದೆ.
ಲಿಂಗೈಕ್ಯ ಗುರುವರ್ಯರ ಮೇಲೆ ಅಪಾರ ಶ್ರದ್ಧಾ-ಭಕ್ತಿಯುಳ್ಳ ಶಿಷ್ಯರು ಯಾರೂ ಆ ದಿನ ಸಿರಿಗೆರೆಗೆ ಬಾರದೇ ತಮ್ಮ-ತಮ್ಮ ಮನೆಗಳಲ್ಲಿಯೇ ಪೂಜ್ಯರ ಭಾವಚಿತ್ರವನ್ನು ಇಟ್ಟು ತಮ್ಮ ಭಕ್ತಿ – ಗೌರವಗಳನ್ನು ಸಲ್ಲಿಸುವಂತೆ ಶ್ರೀ ಸಿರಿಗೆರೆ ಜಗದ್ಗುರುಗಳು ತಿಳಿಸಿದ್ದಾರೆ.