ಸಮಾನತೆ ಎಂಬುದು ಏನಾದರೂ ಇದ್ದರೆ ಅದು ಕೊರೊನಾದಿಂದ ಸತ್ತವರನ್ನು ಮಣ್ಣು ಮಾಡುವಲ್ಲಿ ಮಾತ್ರ ಇದೆ, ಬೇರೆಲ್ಲಿಯೂ ಇಲ್ಲ

ಪ.ಜಾತಿ ಮತ್ತು ಪ.ಪಂಗಡದ ಕುಂದು ಕೊರತೆ ಸಭೆಯಲ್ಲಿ ಕಿಡಿ ಕಾರಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ

ದಾವಣಗೆರೆ, ಸೆ.18- ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಇಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧ್ಯಕ್ಷತೆಯಲ್ಲಿ ಜರುಗಿತು.

ಪ್ರಮುಖವಾಗಿ ದಲಿತರಿಗೆ ಸ್ಮಶಾನಕ್ಕೆ ಭೂಮಿ, ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ವಿರುದ್ಧ ಕ್ರಮ, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾದ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ, ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡದವರ ಮೇಲೆ ದೌರ್ಜನ್ಯದ ಪ್ರಕರಣ ಗಳು ಹೆಚ್ಚುತ್ತಿವೆ. ತನಗೆ ನಗರದ ಪ್ರಮುಖ ವೃತ್ತದಲ್ಲಿ ಚಪ್ಪಲಿ ಹಾರ ಹಾಕುತ್ತಾರೆ, ದೂರು ನೀಡಿ ಸಂಬಂಧಿಸಿದವರನ್ನು ಬಂಧಿಸಲು ಕೋರಿ ದರೆ, ಪೊಲೀಸರು ಆರೋಪಿಗಳು ಕಣ್ಮರೆಯಾಗಿ ದ್ದಾರೆ ಎಂದು ಸಬೂಬು ಹೇಳುತ್ತಾರೆ. ಆದರೆ ಪ್ರಕರಣದ ಪ್ರಮುಖ ಆರೋಪಿ ಮುಖ್ಯ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ಹೇಗೆ ಸಾಧ್ಯ? ಇದು ಇಲಾಖೆಯ ವೈಫಲ್ಯವಲ್ಲವೇ ? ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ 500 ರಿಂದ 600 ಕ್ರಷರ್ ಮಾಲೀಕರಿದ್ದಾರೆ. ಇದರಲ್ಲಿ ಎಸ್‍ಸಿ/ಎಸ್‍ಟಿ ಜನಾಂಗದವರು ಎಷ್ಟು ಜನರಿದ್ದಾರೆ? ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಜನಾಂಗದವರು ಇರುವ ಪ್ರದೇಶಗಳಲ್ಲಿ ಎಷ್ಟು ಕಾಮಗಾರಿಗಳಾಗಿವೆ? ಈ ಜಿಲ್ಲೆಯಲ್ಲಿ ಸಮಾನತೆ ಎಂಬುದು ಏನಾದರೂ ಇದ್ದರೆ ಅದು ಕೊರೊನಾದಿಂದ ಸತ್ತವರನ್ನು ಮಣ್ಣು ಮಾಡುವಲ್ಲಿ ಮಾತ್ರ ಇದೆ. ಬೇರೆಲ್ಲಿಯೂ ಇಲ್ಲ ಎಂದು ರಾಮಪ್ಪ ಕಿಡಿ ಕಾರಿದರು. 

ಜಿಲ್ಲಾ ದಲಿತ ಸಮಿತಿ ಅಧ್ಯಕ್ಷ ದುಗ್ಗಪ್ಪ  ಮಾತನಾಡಿ, ಅಂಬೇಡ್ಕರ್ ಭವನಕ್ಕೆ ಹಣ ಮಂಜೂರಾತಿಯಾಗಿ 15 ವರ್ಷ ಆಯಿತು. ಬಂದವರೆಲ್ಲ ಈಗ ಮುಗಿಯುತ್ತದೆ ಎನ್ನುತ್ತಾರೆ. ಕನಿಷ್ಟ ಪಕ್ಷ ಎಲ್ಲಿ ಭವನ ನಿರ್ಮಿಸುತ್ತೀರಿ ತಿಳಿಸಿ ಎಂದರು ಹಾಗೂ ಪ್ರತಿ ವರ್ಷ ಮಳೆಯಿಂದ ತೊಂದರೆ ಗೊಳಗಾಗುವ ಹೊಸ ಚಿಕ್ಕನಹಳ್ಳಿ ಗ್ರಾಮ ಸ್ಥಳಾಂತರಿಸಲು ಅಂದಿನ ಜಿಲ್ಲಾಧಿಕಾರಿ ಅಂಜನ್‌ಕುಮಾರ್‍ ಅವರು 4 ಎಕರೆ ಭೂಮಿ ಮಂಜೂರು ಮಾಡಿದ್ದರು. ಆದರೆ ಇಂದಿಗೂ ಅಲ್ಲಿಗೆ ಸ್ಥಳಾಂತರ ಆಗಿಲ್ಲ ಎಂದು ದೂರಿದರು.

ಜಿ.ಪಂ ಸದಸ್ಯ ಓಬಳಪ್ಪ ಮಾತನಾಡಿ, ದುರುಗ್‍ಮುರ್ಗಿ ಜನಾಂಗದವರು ಕಲ್ಕೆರೆಗುಡ್ಡದಲ್ಲಿ ಗುಡಿಸಲು ಹಾಕಿಕೊಂಡು ಬಹಳ ವರ್ಷಗಳಿಂದ ವಾಸಿಸುತ್ತಿದ್ದು, ಅವರಿಗೆ ಹಕ್ಕುಪತ್ರ ನೀಡಿಲ್ಲ ಎಂದರು. 

ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಪದ್ಮಾ ಬಸವಂತಪ್ಪ, ಸಾಮಿತ್ವ ಯೋಜನೆಯಡಿ ಮಾರ್ಕಿಂಗ್ ನಡೆಯುತ್ತಿದ್ದು, ಅವರಿಗೆ ಅವರ ನಿವೇಶನಗಳ ಮಾಲೀಕತ್ವ ನೀಡಲಾಗುವುದು. ಆದರೆ ಅವರು ಮೂರ್ನಾಲ್ಕು ಸೈಟ್‍ಗ ಳಿಗಾಗುವಷ್ಟು ಜಾಗ ಅತಿಕ್ರಮಿಸಿರುವುದರಿಂದ ಸರ್ವೇ ಮಾಡಿಸಿ ನಿಯಮದಂತೆ ನೀಡಲಾಗುವುದು ಎಂದರು.

ಕಾರ್ಮಿಕ ಮುಖಂಡ ಉಮೇಶ್ ಮಾತನಾಡಿ, ನಗರಗಳಲ್ಲಿ ಸಮುದಾಯ ಭವನಗಳು ಸದ್ಭಳಕೆಯಾಗುತ್ತಿಲ್ಲ. ಇವುಗಳನ್ನು ಸ್ಥಳೀಯ ಪ್ರತಿನಿಧಿಗಳು ಸಮಿತಿ ರಚಿಸಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ನೀಡಿದರೆ ನಿರ್ವಹಣೆ ಸಾಧ್ಯ ಎಂದರು ಮತ್ತು ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಸರಿಯಾಗಿ ಸಿಗುತ್ತಿಲ್ಲ ಹಾಗೂ ಅಕ್ರಮ ಗಣಿಗಾರಿಕೆ ಮಿತಿ ಮೀರಿದೆ ಎಂದರು.

 ಮುಖಂಡ ಹೆಚ್. ಮಲ್ಲೇಶ್ ಮಾತನಾಡಿ, ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪ್ರೊ. ಬಿ.ಕೃಷ್ಣಪ್ಪ ಅಧ್ಯಯನ ಪೀಠ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಹೆಚ್.ಸಿ.ಗುಂಡಪ್ಪ ಮಾತನಾಡಿ, ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ  ಸುಳ್ಳು ಜಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರ್‍ಗಳು ನೀಡುತ್ತಿದ್ದು, ಅದು  ನಮ್ಮ ಹಕ್ಕಾಗಿದ್ದು, ಬೇರೆಯವರಿಂದ ನಮಗೆ ವಂಚನೆಯಾಗುತ್ತಿದೆ ಎಂದು ದೂರಿದರು.

ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿ. ಪ್ರೊ. ಕೃಷ್ಣಪ್ಪ ಭವನ, ಅಂಬೇಡ್ಕರ್ ಭವನ, ಮಹರ್ಷಿ ವಾಲ್ಮೀಕಿ ಭವನಗಳು ಹಾಳಾಗಿವೆ ಹಾಗೂ ಕೆಲವು  ಅಧಿಕಾರಿಗಳ ತಪ್ಪಿನಿಂದ ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನವು ಸರ್ಕಾರಕ್ಕೆ ವಾಪಸ್ ಹೋಗುತ್ತಿದೆ.

ಮಹರ್ಷಿ ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷರು, ತಾ.ಪಂ ಸದಸ್ಯ ಆಲೂರು ನಿಂಗರಾಜು, ಮುಖಂಡರುಗಳಾದ ಆವರಗೆರೆ ವಾಸು,  ಬಾಲಾಜಿ, ರಂಗನಾಥ, ಸಾಗರ್, ಐಗೂರು ಹನುಮಂತಪ್ಪ, ರವಿಕುಮಾರ್ ಯಲೋದಹಳ್ಳಿ ಮಾತನಾಡಿದರು. 

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ,  ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ರಾಜೀವ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ನಜ್ಮಾ, ಡಿಹೆಚ್‍ಓ ಡಾ.ರಾಘವೇಂದ್ರ ಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕ ವಿಜಯಕುಮಾರ್, ಸಮಾಜ ಕಲ್ಯಾಣ ಇಲಾಖೆ  ಉಪನಿರ್ದೇಶಕ ಶಿವಾನಂದ ಕುಂಬಾರ್, ನಗರ ಡಿವೈಎಸ್‍ಪಿ ನಾಗೇಶ್ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!