ಭಾರತ-ಚೀನಾ ಸಮಸ್ಯೆ ಪರಿಹಾರಕ್ಕೆ ನಾಯಕರು ಇಚ್ಛಾಶಕ್ತಿ ತೋರುತ್ತಿಲ್ಲ

ದಾವಣಗೆರೆ, ಸೆ.17- ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದಿಂದ `ಹಿಮಾಲಯ ವೈರತ್ವ : ಚೀನಾ ಮತ್ತು ಭಾರತ ಸಂಬಂಧಗಳು’ ವಿಷಯದ ಮೇಲೆ ಅಂತರರಾಷ್ಟ್ರೀಯ ವೆಬಿನಾರ್‌ ನಡೆಸಲಾಯಿತು. ಈ ವೆಬಿನಾರ್‌ನಲ್ಲಿ ಅಮೆರಿಕದ ನ್ಯೂಯಾರ್ಕ್ ಸ್ಟೇಟ್‌ ವಿಶ್ವವಿದ್ಯಾ ನಿಲಯದ ಸಹ ಪ್ರಾಧ್ಯಾಪಕ ಅಲೆಗ್ಸಾಂಡರ್ ಬಲಾಸ್ ಅವರು ವಿಷಯ ಮಂಡಿಸಿದರು.

ಅಲೆಗ್ಸಾಂಡರ್ ಬಲಾಸ್ ಅವರು ವಿಷಯ ಮಂಡನೆಯಲ್ಲಿ ಇತಿಹಾಸ, ಭೂಗೋಳ, ಆರ್ಥಿಕ ವಿಷಯಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಚರ್ಚೆ ನಡೆಸಿದರು. 1950 ರಿಂದ 2020ರವರೆಗಿನ ಚೀನಾ-ಭಾರತ ಚರಿತ್ರೆ ವಿವರಿಸುತ್ತಾ, ಪಂಚಶೀಲ ತತ್ವದಡಿ ಭಾರತ ಶಾಂತಿಯುತ ಸಹಬಾಳ್ವೆ ಅನುಸರಿಸಿತು. 1981-1987ರ ಅವಧಿಯಲ್ಲಿ 8 ಬಾರಿ ರಾಯಭಾರಿಗಳ ಹಂತದಲ್ಲಿ ಗಡಿ ಚರ್ಚೆಗಳು ನಡೆದವು. 1996 ರಲ್ಲಿ ಗಡಿ ಸಮಸ್ಯೆಯನ್ನು ಆಯುಧ ರಹಿತ ಬಗೆಹರಿಸಲು ಯತ್ನಿಸಿದವು. 2018-19 ರಲ್ಲಿ ವೂಹಾನ್-ಮಹಾಬಲಿಪುರಂ ಭೇಟಿಗಳು ಆಶಾವಾದವನ್ನು ಮೂಡಿಸಿದವು ಎಂದು ಚರಿತ್ರೆ ನೆನಪಿಸಿಕೊಂಡರು.

ಭಾರತ ಮತ್ತು ಚೀನಾ ದೇಶಗಳು ತಮ್ಮ  ಆದಾಯದ ಬಹುಪಾಲನ್ನು ಸೇನೆ, ಗಡಿ ಸಮಸ್ಯೆಗಳಿಗೆ ವ್ಯಯಿಸುತ್ತವೆ. ಭಾರತ 1 ಪಟ್ಟು ವ್ಯಯಿಸಿದರೆ, ಚೀನಾ 3 ಪಟ್ಟು ವೆಚ್ಚ ಮಾಡುತ್ತಿದೆ. ಜಿ.ಡಿ.ಪಿ ಯಲ್ಲಿ ಭಾರತ ಪ್ರಪಂಚದಲ್ಲಿ 5ನೇ ಸ್ಥಾನದಲ್ಲಿದೆ (3.2 ಟ್ರಿಲಿಯನ್), ಚೀನಾ (15.2 ಟ್ರಿಲಿಯನ್) 2ನೇ ಸ್ಥಾನದಲ್ಲಿದೆ. ಹೀಗಿರುವಾಗ ಅನಾವಶ್ಯಕ ಸೇನಾ ವೆಚ್ಚಗಳನ್ನು ತಡೆದು, ದೇಶಗಳ ಅಭಿವೃದ್ಧಿಗೆ ಬಳಸಿಕೊಳ್ಳಬಹುದು.

ಈ ಹಿನ್ನೆಲೆಯಲ್ಲಿ ಭಾರತ-ಚೀನಾ ಗಡಿ ಸಮಸ್ಯೆಯನ್ನು ಬಗೆಹರಿಸಲು ವಿಶ್ವಸಂಸ್ಥೆಯಾಗಲೀ, ನಾಯಕರಾಗಲೀ ಇಚ್ಛಾಶಕ್ತಿ ಹೊಂದಿದಂತೆ ತೋರುತ್ತಿಲ್ಲ. ವಿಶ್ವಸಂಸ್ಥೆ ಗಾಯವಾದಾಗ ಆ ಕ್ಷಣಕ್ಕೆ ಔಷಧಿ ಹಚ್ಚಲು ಪ್ರಯತ್ನಿಸುತ್ತಿದೆ. ಚೀನಾ ಟಿಬೆಟ್‌ಗೆ ಪ್ರಚೋದನೆ ಕೊಟ್ಟು ಅಶಾಂತಿಯ ವಾತಾವರಣ ಮೂಡಿಸುತ್ತಿದೆ. ಆದರೆ ಕೆಲ ಅರಬ್‌ರಾಷ್ಟ್ರಗಳು ಭಾರತದ ಪರ ಒಲವು ತೋರುತ್ತಿದ್ದರೂ ಸಮಸ್ಯೆಯನ್ನು ಜೀವಂತವಾಗಿಡುತ್ತಿವೆ.

ಯುದ್ಧದಿಂದಲೇ ಎರಡೂ ದೇಶಗಳು ಸಮಸ್ಯೆ ಪರಿಹಾರಕ್ಕೆ ನಿಲ್ಲಬಾರದು. ಯುದ್ಧ ಆರ್ಥಿಕತೆಯ ಮೇಲೆ, ಬಡ ಜನತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಪರಸ್ಪರ ಮಾತುಕತೆ, ಅದೂ ಶಾಶ್ವತ ಪರಿಹಾರ ನೀಡುವ ಮಾತುಕತೆಬೇಕು. ಮೂಲಭೂತವಾಗಿ ಎರಡೂ ದೇಶಗಳ ನಡುವೆ ಇರುವ ಗಡಿರೇಖೆಯಲ್ಲೇ ಸ್ಪಷ್ಟತೆ ಇಲ್ಲ. ಗಡಿ ನಿಯಮ ಪಾಲನೆಯಾಗುತ್ತಿಲ್ಲ. ಗಡಿ ರೇಖೆಯ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ. ಊಹಾಪೋಹಗಳೂ ಈ ಗಡಿ ವಿಚಾರವನ್ನು ಉಲ್ಭಣಗೊಳಿಸುತ್ತಿವೆ ಎಂದರು. ಯುದ್ಧ ಬೇಡ, `ಹಿಂದಿ ಚೀನೀ-ಬಾಯಿ ಬಾಯಿ’ಗೆ ಆದ್ಯತೆ ನೀಡುವುದು ಸೂಕ್ತವೆಂದರು.

ಈ ಅಂತರರಾಷ್ಟ್ರೀಯ ವೆಬಿನಾರ್‌ಗೆ 1962 ಜನ ದೇಶದ ವಿವಿಧ ರಾಜ್ಯಗಳಿಂದ ನೋಂದಾಯಿಸಿಕೊಂಡಿದ್ದು ವಿಶೇಷವಾಗಿತ್ತು. ವೆಬಿನಾರ್‌ನಲ್ಲಿ ಭಾಗಿಯಾಗಿದ್ದವರು ಕೆಲ ಸೂಕ್ಷ್ಮ ಪ್ರಶ್ನೆಗಳನ್ನು ಕೇಳಿದರು. ಡಾ. ಅನುರಾಧರವರು ಚೀನಾ ಜೈವಿಕ ಆಯುಧಗಳನ್ನು ತಯಾರಿಸುತ್ತಿದೆ ಎಂಬ ಊಹಾಪೋಹಗಳಿವೆ. ಇದು ನಿಜವಾ ಎಂದರೆ, ಡಾ. ಬಿ.ಪಿ. ಕುಮಾರ್‌ರವರು ಎರಡೂ ದೇಶಗಳ ಗಡಿ ವಿವಾದಕ್ಕೆ ತಮ್ಮ ಸಲಹೆಗಳೇನು? ಎಂದರು. ಆರ್‌. ಚನ್ನಬಸವನಗೌಡರು, ಚೀನಾ ದೇಶವು ಸಮತಾವಾದಕ್ಕೆ ತಿಲಾಂಜಲಿ ಕೊಟ್ಟ ಕೆಲವೇ ಜನರ ಅಧಿಪತ್ಯದ ಅಧಿಕಾರವಲ್ಲವೇ? ಅದು ಯುದ್ಧ ಪಿಪಾಸು ಆಗುತ್ತಿರುವುದರ ಹಿಂದಿರುವವರು ಯಾರು ಎಂದರು. ಇಂತಹ ಹಲವು ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರು. ಉತ್ತರವು ತೃಪ್ತಿಕರವಾಗಿತ್ತು.

ಅಂತರರಾಷ್ಟ್ರೀಯ ವಿಷಯದಲ್ಲಿ ಸದ್ಯ ಕುತೂಹಲಕಾರಿಯಾಗಿರುವ ವೆಬಿನಾರ್‌ನ ವಿಷಯ ಹೆಚ್ಚು ಆಸಕ್ತಿದಾಯಕವಾಗಿತ್ತು. ಈ ವೆಬಿನಾರನ್ನು ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಗಳೂ, ಶಾಸಕರೂ ಆದ ಡಾ. ಶಾಮನೂರು ಶಿವಶಂಕರಪ್ಪ ಅವರು ಮಹಾಪೋಷಕರಾಗಿ, ಡಾ.ಎಂ.ಜಿ. ಈಶ್ವರಪ್ಪ ಅವರು, ಶೈಕ್ಷಣಿಕ ನಿರ್ದೇಶಕರು, ಬಾಪೂಜಿ ವಿದ್ಯಾಸಂಸ್ಥೆ ಹಾಗೂ ಪ್ರಾಚಾರ್ಯ ರಾದ ಪ್ರೊ. ಪಿ.ಎಸ್‌. ಶಿವಪ್ರಕಾಶ್‌ ಸಹಪೋಷಕರಾಗಿ ಯಶಸ್ವಿಗೊಳಿಸಿ, ಆಸಕ್ತರಿಗೆ ಮಾಹಿತಿ ದೊರೆಯುವಂತೆ ಮಾಡಿದರು. 

ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಕುಮಾರ್‌ ವೆಬಿನಾರಿನ ಸಂಚಾಲಕರಾಗಿ ಮಾಹಿತಿ ನೀಡಿದರು. ಡಾ. ಪಿ.ಎಂ. ಅನುರಾಧ ಅವರು ವೆಬಿನಾರ್‌ ರೂಪಿಸಿದರೆ, ಪ್ರಾಂಶುಪಾಲ ಪ್ರೊ. ಪಿ.ಎಸ್‌. ಶಿವಪ್ರಕಾಶ್‌ ಸ್ವಾಗತಿಸಿದರು. ಆರ್‌. ಚನ್ನಬಸವನಗೌಡ ವಂದಿಸಿದರು.

error: Content is protected !!