ದಾವಣಗೆರೆ, ಸೆ.17- ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಪ್ರಯುಕ್ತ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ‘ರಾಷ್ಟ್ರೀಯ ನಿರುದ್ಯೋಗ ದಿನ’ ಆಚರಣೆ ಹಾಗೂ ಜಾಥಾ ನಡೆಸಿ, ನಿರುದ್ಯೋಗ ಸಮಸ್ಯೆ ವಿರುದ್ಧ ನಗರದಲ್ಲಿ ಇಂದು ಅಸಮಾಧಾನ ವ್ಯಕ್ತಪಡಿಸಲಾಯಿತು.
ಉದ್ಯೋಗ ನೀಡಿ ಆತ್ಮಹತ್ಯೆ ನಿಲ್ಲಿಸಿ 7998799854 ನಂಬರ್ಗೆ ಮಿಸ್ಡ್ಕಾಲ್ ನೀಡುವ ಮೂಲಕ ಅಭಿಯಾನಕ್ಕೆ ಅಂಬೇಡ್ಕರ್ ವೃತ್ತದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಚಾಲನೆ ನೀಡಲಾಯಿತು.
ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಶ್ರೀ ಜಯದೇವ ಮುರುಘ ರಾಜೇಂದ್ರ ವೃತ್ತದ ವರೆಗೂ ಪ್ರತಿಭಟನಾ ಜಾಥಾ ನಡೆಸಲಾಯಿತು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಖಾಲಿದ್ ಅಹ್ಮದ್ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿಯವರು ಉದ್ಯೋಗ ನೀಡುವಲ್ಲಿ ವಿಫಲರಾಗಿದ್ದಾರೆ. ವರ್ಷಕ್ಕೆ ಸುಮಾರು 2 ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ನೇತೃತ್ವದ ಸರ್ಕಾರ ಈವರೆಗೂ 12 ಕೋಟಿ ಜನರಿಗೆ ಉದ್ಯೋಗವನ್ನು ಸೃಷ್ಠಿಸಬೇಕಾಗಿತ್ತು. ಆದರೆ, ಈಗ ಇರುವ ಉದ್ಯೋಗವನ್ನೇ ಕಳೆದು ಕೊಳ್ಳುವ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ತಂದಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್.ಐ.ಸಿ, ರೈಲ್ವೆ, ವಿಮಾನಯಾನ, ಬಿ.ಪಿ.ಸಿ.ಎಲ್. ಸೇರಿದಂತೆ ಮತ್ತಿತರೆ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುವ ಮೂಲಕ ಜನರ ಮೇಲೆ ಬರೆ ಎಳೆಯುತ್ತಿದ್ದಾರೆ. ರಾಜ್ಯ ಸರ್ಕಾರ ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸೇರಿದಂತೆ ಮತ್ತಿತರೆ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಆತಂಕವನ್ನು ತಂದೊಡ್ಡುತ್ತಿವೆ ಎಂದು ಆಕ್ಷೇಪಿಸಿದರು.
ರೈತರು ದೇಶದ ಬೆನ್ನೆಲಬು ಎಂದು ಹೇಳುವ ಸರ್ಕಾರ ಅವರು ಆತ್ಮಹತ್ಯೆಗೆ ಶರಣಾಗುತ್ತಿರುವು ದನ್ನು ನೋಡುತ್ತಾ ಕುಳಿತಿದೆ. ಉದ್ಯೋಗ ಇಲ್ಲದೇ ಯುವಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರಾಜ್ಯ ಸರ್ಕಾರ ನಡೆಸುವ ಕೆ.ಪಿ.ಎಸ್.ಸಿ. ಪರೀಕ್ಷಾ ಶುಲ್ಕವು ಹೈದ್ರಾಬಾದ್-ಕರ್ನಾಟಕ ವ್ಯಾಪ್ತಿಯ ಬಿ.ಇಡಿ. ವ್ಯಾಸಂಗ ಮಾಡಿದ ಒ.ಬಿ.ಸಿ. ಅಭ್ಯರ್ಥಿಗಳಿಗೆ 300 ರೂ.ಗಳಿದ್ದರೆ ಅದಕ್ಕೆ ಜಿ.ಎಸ್.ಟಿ. ಶೇ.18 ರಷ್ಟು ಎಂದು ಹೇಳಿ ವಿದ್ಯಾರ್ಥಿ ಗಳಿಂದ ಹೆಚ್ಚುವರಿಯಾಗಿ 354 ರೂ.ಗಳನ್ನು ವಸೂಲಿ ಮಾಡುತ್ತಿರುವುದನ್ನು ಖಂಡಿಸಿದರು.
ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಿ, ಆತ್ಮಹತ್ಯೆಗಳನ್ನು ನಿಲ್ಲಿಸುವಂತಹ ಕೆಲಸ ಪ್ರಧಾನ ಮಂತ್ರಿಗಳು ಮಾಡಬೇಕು. ಆದರೆ, ಇವರು ಇದನ್ನೆಲ್ಲಾ ನಿರ್ಲಕ್ಷಿಸಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿ ರುವುದು ದೇಶಕ್ಕೆ ಮಾರಕವೆಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಹೆಚ್.ಜೆ. ಮೈನುದ್ದೀನ್, ಕಾಂಗ್ರೆಸ್ ಮುಖಂಡರಾದ ಹೆಚ್. ಸುಭಾನ್ಸಾಬ್, ಸೈಯದ್ ಕಬೀರ್, ಪ್ರವೀಣ್ ಹುಲ್ಲುಮನೆ, ಸಂದೀಪ್ಕುಮಾರ್, ಜಮೀರಾ ನವೀದ್, ಎನ್.ಎಸ್.ಯು.ಐ.ನ ಮುಜಾಹಿದ್, ಖಾಲಿದ್ ಪೈಲ್ವಾನ್, ಸದ್ದಾಂ, ಚಂದ್ರು, ಅಜ್ಮತ್ವುಲ್ಲಾ, ಸಂತೋಷ್ಕುಮಾರ್, ಸೈಯದ್ ಮುಸ್ತಫಾ, ಫಹೀಂ, ಸಾಧಿಕ್ಖಾನ್, ಬಾಷಾ, ಮುಸ್ತಾಕ್ ಅಹಮ್ಮದ್ ಸೇರಿದಂತೆ ಇತರರು ಭಾಗವಹಿಸಿದ್ದರು.