ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ

ದಾವಣಗೆರೆ,ಸೆ.16- ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು,ಸುಮಾರು 5.53 ಲಕ್ಷ ಟನ್ ಮೆಕ್ಕೆಜೋಳ ಉತ್ಪಾದನೆಯಾಗುವ ನಿರೀಕ್ಷೆಯಿದ್ದು, ರೈತರ ಹಿತದೃಷ್ಟಿ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಒತ್ತಡಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಇಂದು ನಡೆದ ಆಹಾರ ಸರಬರಾಜು ಇಲಾಖೆ, ಎ.ಪಿ.ಎಂ.ಸಿ, ಕೃಷಿ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ವರ್ಷ 1.31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಅದಕ್ಕೆ ತಕ್ಕಂತೆ ಮಳೆ ಬಿದ್ದಿದ್ದು  ಮೆಕ್ಕೆಜೋಳ ಎಲ್ಲಾ ತಾಲ್ಲೂಕುಗಳಲ್ಲಿ ಬಹಳ ಚೆನ್ನಾಗಿದೆ. ಹೋದ ಕಡೆಯಲ್ಲಾ ರೈತರು, ರೈತ ಮುಖಂಡರು ಹಾಗೂ ರೈತ ಸಂಘದವರು ಮನವಿಗಳನ್ನು ನೀಡುತ್ತಿದ್ದು, ಖರೀದಿ ಕೇಂದ್ರಕ್ಕೆ ಆಗ್ರಹಿಸುತ್ತಿದ್ದಾರೆ.  ನಾನೂ ಕೂಡ ಮೊನ್ನೆ ನಡೆದ ಮುಖ್ಯಮಂತ್ರಿಗಳ ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಮೆಕ್ಕೆಜೋಳ ಖರೀದಿ ಕೇಂದ್ರಕ್ಕಾಗಿ ಮನವಿ ಮಾಡಿದ್ದೇನೆ ಹಾಗಾಗಿ ಪ್ರಸ್ತಾವನೆ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸೋಣ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ  ಪಿ.ಡಿ.ಎಸ್. ನಲ್ಲಿ ಮೆಕ್ಕೆಜೋಳ ವಿತರಿಸಲು ಬರುವುದಿಲ್ಲ. ಹಾಗಾಗಿ ಸರ್ಕಾರ ಖರೀದಿಸುತ್ತಿಲ್ಲ. ಆದರೆ, ರೈತರು ಬೇಡಿಕೆಯಂತೆ ಜೋಳದ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸಬಹುದೆಂಬ ಅಂಶವನ್ನು ಉಲ್ಲೇಖಿಸಿ ಪತ್ರ ಬರೆಯೋಣ ಎಂದರು.

ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೆಸ್ವಾಮಿ ಮಾಹಿತಿ ನೀಡಿ ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ರೂ.1850 ಬೆಂಬಲ ಬೆಲೆ ಘೋಷಿಸಿದೆ. ಆದರೆ ಮಾರ್ಕೆಟ್‍ನಲ್ಲಿ ಅದಕ್ಕಿಂತ ಕಡಿಮೆ ರೂ.1400 ಕ್ಕೆ ಮಾರಾಟ ಆಗುತ್ತಿದೆ. ಇನ್ನು ಹೊಸ ಬೆಳೆ ಬಂದರೆ ದರ ಮತ್ತಷ್ಟು ಕಡಿಮೆಯಾಗುವ ಸಂಭವವಿದ್ದು, ಸರ್ಕಾರ ಖರೀದಿ ಕೇಂದ್ರ ಆರಂಭಿಸಿದರೆ ಅನುಕೂಲವಾಗಲಿದೆ ಎಂದರು. 

ಸಭೆಯಲ್ಲಿ ಉಪವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್, ಕೃಷಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಚಿಂತಾಲ್ ಹಾಗೂ ಎಪಿಎಂಸಿ ಕಾರ್ಯದರ್ಶಿ ದೊರೆಸ್ವಾಮಿ ಇತರರಿದ್ದರು.

error: Content is protected !!