ದಾವಣಗೆರೆ, ಸೆ. 16 – ನನ್ನ ಮಗ ಖರೀದಿಸಿದ ಆಸ್ತಿಯ ಖಾತೆ ಬದಲಾವಣೆ ಕೆಲಸ ಬ್ರೋಕರ್‌ಗೆ ಕೊಟ್ಟಿದ್ದರೆ 15 ದಿನಗಳಲ್ಲಿ ಆಗುತ್ತಿತ್ತು. ಆದರೆ, ಲಂಚ ಕೊಡದೇ ನಾನೇ ನೇರವಾಗಿ ಕೆಲಸ ಮಾಡಿಸಿಕೊಳ್ಳಲು ಹೋಗಿದ್ದಕ್ಕೆ ಆರು ತಿಂಗಳಾದರೂ ಕೆಲಸ ಆಗಿಲ್ಲ. ಪಾಲಿಕೆಯ ಕಂದಾಯ ಇಲಾಖೆಯಲ್ಲಿ ಲಂಚ `ಮಾಮೂಲಿ’ ಆಗಿದೆ ಎಂದು ಪಾಲಿಕೆ ಸದಸ್ಯ ಚಮನ್ ಸಾಬ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಸುದೀರ್ಘ ಕಾಲದ ವಿಳಂಬದ ನಂತರ ಬುಧವಾರ ನಡೆದ ನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಲಂಚಾವತಾರದ ಸಮಸ್ಯೆಗಳನ್ನು ಚಮನ್ ಸಾಬ್ ದೀರ್ಘವಾಗಿ ವಿವರಿಸಿದರು.
`ಛಲ ಬೇಕು ಶರಣಂಗೆ, ಪರಧನವನೊಲ್ಲೆನೆಂಬ’ ಎಂಬ ಬಸವಣ್ಣನವರ ವಚನದೊಂದಿಗೆ ಮಾತು ಆರಂಭಿಸಿದ ಅವರು ಶರಣರ, ದಾರ್ಶನಿಕರ ಇಂತಹ ವಿಚಾರಗಳನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ. ಲಂಚವನ್ನು ಮಾಮೂಲಿ ಎಂಬಂತೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಕಂದಾಯ ವಿಭಾಗದಲ್ಲಿ ಆಂತರಿಕ ಬದಲಾವಣೆ ಮಾಡುವುದಾಗಿ ಮೇಯರ್ ಅಜಯ್ ಕುಮಾರ್ ಹೇಳಿದ್ದರು. ಆದರೆ, ತಿಂಗಳಾಗುತ್ತಾ ಬಂದರೂ ಎಷ್ಟು ಬದಲಾಗಿದೆ? ನಿಮ್ಮ ಕೈಯಲ್ಲಿ ಕೆಲಸ ಆಗುವುದಿಲ್ಲ ಎಂದರೆ ಶಾಸಕರಿಗೆ ಹೇಳಿ ಸರ್ಕಾರದಿಂದ ಮಾಡಿಸಿಕೊಳ್ಳಿ ಎಂದು ಹೇಳಿದರು.
ಕಾರ್ಪೊರೇಟರ್ ಮಗನ ಖಾತೆಯೇ ಬದಲಾಗುವುದಿಲ್ಲ ಎಂದರೆ ಹೇಗೆ? ಈ ವಿಷಯದಿಂದ ನನಗೆ ಬೇಸರವಾಗಿದೆ. ಕಂದಾಯ ವಿಭಾಗದಲ್ಲಿ 10ರಿಂದ 50 ಸಾವಿರ ರೂ.ಗಳವರೆಗೆ ಲಂಚ ಕೇಳುತ್ತಿದ್ದಾರೆ. ಕಾರ್ಪೊರೇಟರ್‌ಗಳೂ ಲಂಚದಲ್ಲಿ ಪಾಲು ಪಡೆಯುತ್ತಿದ್ದಾರೆ ಎಂದು ನಮಗೆಲ್ಲಾ ಕೆಟ್ಟ ಹೆಸರು ಬಂದಿದೆ ಎಂದು ಹೇಳಿದರು.
ಅಲ್ಪ ಸ್ವಲ್ಪ ಓದಿದವರಿಗೆ ಕಂದಾಯ ಇಲಾಖೆಯ ಕೆಲಸ ವಹಿಸಿದ್ದಾರೆ. ಇವರು ಕಡತದಲ್ಲಿ ತಪ್ಪು ಮಾಡಿದರೆ ತಿದ್ದಿಕೊಳ್ಳಲು ಜನ ಅಲೆದಾಡಬೇಕಿದೆ ಎಂದು ಹೇಳಿದರು.
ನಮ್ಮ ಮನೆ ಮುಂದೇ ನೋಡಂಗಿಲ್ಲ ಎಂದ ಮೇಯರ್!
ನಗರದಲ್ಲಿ ಪೌರ ಕಾರ್ಮಿಕರ ಗ್ಯಾಂಗ್ವರ್ಕ್ ನಡೆಯದೇ ನಗರದಲ್ಲಿ ಸ್ವಚ್ಛತೆಯ ಕೊರತೆಯಾಗಿದೆ. ನನ್ನ ಮನೆ ಮುಂದೇ ನೋಡಂಗಿಲ್ಲ ಎಂಬ ಪರಿಸ್ಥಿತಿ ಇದೆ ಎಂದು ಮೇಯರ್ ಅಜಯ್ ಕುಮಾರ್ ಹೇಳಿದ್ದಾರೆ.
ಈ ಹಿಂದೆ ಶಿವನಳ್ಳಿ ರಮೇಶ್ ಅವರು ಸದಸ್ಯರಾಗಿದ್ದಾಗ ಗ್ಯಾಂಗ್ವರ್ಕ್ ಮೂಲಕ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಇತ್ತೀಚೆಗೆ ಗ್ಯಾಂಗ್ವರ್ಕ್ ನಡೆಯದೇ ಸಮಸ್ಯೆಯಾಗಿದೆ. ಹೀಗಾಗಿ ಎಲ್ಲ ಪೌರ ಕಾರ್ಮಿಕರನ್ನು ಮಧ್ಯಾಹ್ನ ಗ್ಯಾಂಗ್ವರ್ಕ್ನಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಪಾಲಿಕೆಯ ಮಳಿಗೆಗಳನ್ನು ಹರಾಜಿನಲ್ಲಿ ಪಡೆದು ಮಾರಾಟ
ದಾವಣಗೆರೆ, ಸೆ. 16 – ಪಾಲಿಕೆಯ ಮಳಿಗೆಗಳನ್ನು ಹರಾಜಿನಲ್ಲಿ ಪಡೆದವರು ಬಾಡಿಗೆ ಕೊಡುವುದು ಒತ್ತಟ್ಟಿಗಿರಲಿ, ಆ ಆಸ್ತಿ ತಮ್ಮದೆಂದು ಮಾರಿದ್ದಾರೆ!
340 ಮಳಿಗೆಗಳನ್ನು ಹನ್ನೆರಡು ವರ್ಷಗಳ ಗುತ್ತಿಗೆ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವುಗಳನ್ನು ಮರು ಹರಾಜು ಮಾಡುವ ಪ್ರಸ್ತಾವನೆಯನ್ನು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, 2018-19ನೇ ಸಾಲಿನಲ್ಲಿ ಕೇವಲ ಶೇ.20ರಷ್ಟು ಬಾಡಿಗೆ ಸಂಗ್ರಹವಾಗಿದೆ. ಹತ್ತು ವರ್ಷಗಳಿಂದಲೂ ಇದೇ ಪರಿಸ್ಥಿತಿ ಇದೆ ಎಂದು ತಿಳಿಸಿದರು.
ಕೆಲವರು ಮಳಿಗೆಯನ್ನು ಬೇರೆಯವರಿಗೆ ಬಾಡಿಗೆಗೆ ನೀಡಿದ್ದಾರೆ. ಒಬ್ಬರು ಹರಾಜು ಮಾಡಿದ ಮಳಿಗೆ ಮಾರಾಟ ಮಾಡಿದ್ದಾರೆ. ಪಾಲಿಕೆಯಲ್ಲಿ ಹರಾಜು ಪಡೆದ ಮಳಿಗೆ ಜೀವನವಿಡೀ ನಮ್ಮದೇ, ನಮ್ಮ ನಂತರ ಮಕ್ಕಳದ್ದು ಎಂದು ಭಾವಿಸಿರುವಂತಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷದ ನಾಯಕ ನಾಗರಾಜ್, ಕೆಲವರು 25-30 ವರ್ಷಗಳಿಂದ ಮಳಿಗೆ ಹೊಂದಿದ್ದಾರೆ. ಇದನ್ನು ನಂಬಿ ಜೀವನ ಕಟ್ಟಿಕೊಂಡಿದ್ದಾರೆ. ಬಾಡಿಗೆ ಹೆಚ್ಚು ಮಾಡಿ ಅವರನ್ನೇ ಮುಂದುವರೆಸಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸದಸ್ಯ ದೇವರಮನಿ ಶಿವಕುಮಾರ್ ಮಾತನಾಡಿ, ಕಂದಾಯ ಅಧಿಕಾರಿಗಳು ಬಾಡಿಗೆ ವಸೂಲಿ ಮಾಡುತ್ತಿಲ್ಲ. ಒಂದೇ ಕಟ್ಟಡದ ಹತ್ತು ಲಕ್ಷ ರೂ. ಬಾಡಿಗೆ ಬಾಕಿ ಉಳಿದಿದ್ದು, ಅದನ್ನು ವಸೂಲಿ ಮಾಡಬೇಕಿದೆ. ಆದರೂ, ಕೊರೊನಾ ಸಮಯವಾದ ಕಾರಣ ಮಳಿಗೆದಾರರಿಗೆ ವಿನಾಯಿತಿ ಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಬಿ.ಜಿ. ಅಜಯ್ ಕುಮಾರ್, ಬಾಡಿಗೆ ಸರಿಯಾಗಿ ಪಾವತಿಸಿರುವವರು ಹಾಗೂ ತಾವೇ ಮಳಿಗೆ ಹೊಂದಿರುವವರನ್ನು ಮುಂದುವರೆಸೋಣ. ಬಾಡಿಗೆ ಪಾವತಿಸದೇ ಇರುವವರು ಹಾಗೂ ಬೇರೆಯವರಿಗೆ ಬಾಡಿಗೆಗೆ ನೀಡಿರುವ ಮಳಿಗೆಗಳನ್ನು ಮರು ಹರಾಜಿಗೆ ಹಾಕೋಣ ಎಂದು ನಿರ್ಧರಿಸಿದರು.
ಹಂದಿ ಹಿಡಿದವರ ಸಂಬಳ ಕಟ್ !
ನಗರದಲ್ಲಿ ನಾಯಿ ಹಾಗೂ ಹಂದಿಗಳ ಹಾವಳಿ ಹೆಚ್ಚಾಗಿದೆ ಎಂದು ಪಾಲಿಕೆ ಸದಸ್ಯರು ಆಕ್ಷೇಪಿಸಿದ್ದಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಈ ವಿಷಯ ಸುಪ್ರೀಂ ಕೋರ್ಟ್ ಎದುರಿದೆ. ಹಂದಿ ಹಿಡಿಯುವುದಕ್ಕೆ ತಡೆಯಾಜ್ಞೆ ತೆರವಾದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಹಂದಿ ಹಿಡಿಯುವುದರಿಂದ ನಮ್ಮ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ಹಂದಿ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು. ಹಂದಿ ಹಿಡಿದ ಕಾರಣಕ್ಕಾಗಿ, ಅಧಿಕಾರಿಗಳ ವೇತನ ಕಟ್ ಮಾಡುವಂತೆ ಹೈಕೋರ್ಟ್ ತಿಳಿಸಿತ್ತು. ಈ ಆದೇಶಕ್ಕೆ ಸುಪ್ರೀಂ ಕೋರ್ಟ್ನಲ್ಲಿ ತಡೆಯಾಜ್ಞೆ ಪಡೆದಿದ್ದೇವೆ ಎಂದು ಮುದಜ್ಜಿ ಹೇಳಿದರು.
ವೆಂಟಿಲೇಟರ್ ಇಲ್ಲದೇ ಪಾಲಿಕೆ ಉದ್ಯೋಗಿ ಸಾವು
ಪಾಲಿಕೆಯ ಉದ್ಯೋಗಿ ಬಿ.ಎಸ್. ವೆಂಕಟೇಶ್ ಎಂಬುವವರು ಕೊರೊನಾ ಸೋಂಕಿನಿಂದ ಬುಧವಾರ ಸಾವನ್ನಪ್ಪಿದರು. ಸಾಮಾನ್ಯ ಸಭೆ ನಡೆಯುವ ವೇಳೆಗೆ ಈ ವಿಷಯ ತಿಳಿದ ನಂತರ, ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಎ. ನಾಗರಾಜ್, ಸಿ.ಜಿ. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಲಭ್ಯವಾಗದೇ ವೆಂಕಟೇಶ್ ಸಾವನ್ನಪ್ಪಿದ್ದಾರೆ. 25 ವೆಂಟಿಲೇಟರ್ಗಳಿದ್ದರೂ ಕೋಣೆಯಲ್ಲಿ ಕೊಳೆ ಹಾಕಲಾಗಿದೆ ಎಂದರು.
ಸಭೆಯಲ್ಲಿದ್ದ ಶಾಸಕ ಎಸ್.ಎ. ರವೀಂದ್ರನಾಥ್ ಈ ಬಗ್ಗೆ ಮಾತನಾಡಿ, ವೈದ್ಯರು ಹಾಗೂ ನರ್ಸ್ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.
ಈ ಬಗ್ಗೆ ಮಾತನಾಡಿದ ವಿಪಕ್ಷದ ನಾಯಕ ಎ. ನಾಗರಾಜ್, 50 ವರ್ಷದ ಹಳೆ ಖಾತೆಯೊಂದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೇ ತಪ್ಪು ಮಾಡಿದ್ದಾರೆ. ಈ ತಪ್ಪು ಸರಿ ಮಾಡಿಸಲು ಖಾತೆದಾರರನ್ನು ಎಂಟು ತಿಂಗಳಿನಿಂದ ಅಲೆದಾಡಿಸುತ್ತಿದ್ದಾರೆ. ಇಂಥವರಿಂದ ಪಾಲಿಕೆ, ಮೇಯರ್ ಹಾಗೂ ಶಾಸಕರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದರು.
ಈ ಬಗ್ಗೆ ಉತ್ತರಿಸಿದ ಮೇಯರ್ ಬಿ.ಜಿ. ಅಜಯ್ ಕುಮಾರ್, ಇ – ಆಸ್ತಿ ಯೋಜನೆ ಜಾರಿಗೆ ತರಲಾಗುತ್ತಿದೆ. ಎರಡು ವಲಯಗಳ ಆಸ್ತಿಗಳ ವಿವರ ಕಂಪ್ಯೂಟರೀಕರಣಗೊಂಡಿದೆ. ಇನ್ನೊಂದು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನಂತರ ಸಮಸ್ಯೆ ನೀಗಲಿದೆ ಎಂದರು.
ಆಂತರಿಕ ಬದಲಾವಣೆಗೆ ಕಳೆದ ತಿಂಗಳೇ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಮೂವರು ಅಧಿಕಾರಿಗಳು ಮಾತ್ರ ಸೂಚಿಸಿದ ಜಾಗಕ್ಕೆ ಹೋಗಿಲ್ಲ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ವಿದ್ಯುತ್ ಚಿತಾಗಾರ : ಶಾಮನೂರು ರುದ್ರಭೂಮಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಒಂದು ವಿದ್ಯುತ್ ಚಿತಾಗಾರ ನಿರ್ಮಾಣವಾಗಲಿದೆ. ಗಾಂಧಿನಗರ ಹಾಗೂ ಎಸ್‌ಒಜಿ ಕಾಲೋನಿಗಳಲ್ಲೂ ಸಹ ವಿದ್ಯುತ್ ಚಿತಾಗಾರವನ್ನು ಪಾಲಿಕೆಯಿಂದ ರೂಪಿಸುವ ಪ್ರಸ್ತಾವನೆ ಇದೆ ಎಂದು ಮೇಯರ್ ಅಜಯ್ ಕುಮಾರ್ ಸಭೆಗೆ ತಿಳಿಸಿದರು.
ನೀರಿನ ಸಮಸ್ಯೆ : ನೀರು ಶುದ್ಧೀಕರಣಕ್ಕೆ ಬಳಸಲಾಗುತ್ತಿರುವ ಆಲಂ ಹಾಗೂ ಬ್ಲೀಚಿಂಗ್ ಪೌಡರ್ ಗುಣಮಟ್ಟದ್ದಿಲ್ಲ. ಈ ವರ್ಷ ಆಲಂಗೆ 38 ಲಕ್ಷ ರೂ. ಟೆಂಡರ್ ಕರೆಯಲಾಗುತ್ತಿದೆ. ಆದರೆ, ಶುದ್ಧೀಕರಣ ಕಳಪೆಯಾಗಿದೆ ಎಂದು ಕಾಂಗ್ರೆಸ್ ಸದಸ್ಯ ದೇವರಮನಿ ಶಿವಕುಮಾರ್ ಕಿಡಿ ಕಾರಿದರು.
ಅಧಿಕಾರಿಗಳು ಪಾಲಿಕೆ ಸದಸ್ಯರಿಗೆ ಸ್ಪಂದಿಸುತ್ತಿಲ್ಲ. ಸಭೆಗೂ ಸಮರ್ಪಕ ಮಾಹಿತಿಯೊಂದಿಗೆ ಬರುತ್ತಿಲ್ಲ. ಇದು ಆಡಳಿತದಲ್ಲಿನ ಲೋಪವನ್ನು ತೋರಿಸುತ್ತಿದೆ ಎಂದವರು ಹೇಳಿದರು.
ಸಭೆಯಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಉಪ ಮೇಯರ್ ಸೌಮ್ಯ ನರೇಂದ್ರ, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.