ಮುಕ್ತಾಯದ ಲಕ್ಷಣವಿಲ್ಲದ ‘ಸ್ಮಾರ್ಟ್‍’ ಅಭಿವೃದ್ಧಿ

7.57 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಎಸ್ಸೆಸ್

ದಾವಣಗೆರೆ, ಸೆ.15- ಸ್ಮಾರ್ಟ್‍ ಸಿಟಿ ಯೋಜನೆಗೆ ಆಯ್ಕೆಯಾಗಿರುವ ದಾವಣಗೆರೆ ಯಲ್ಲಿ ಈ ಯೋಜನೆಯಡಿ ಅಭಿವೃದ್ಧಿ ಕಾಮ ಗಾರಿಗಳು ಈಗಾಗಲೇ ಮುಕ್ತಾಯವಾಗಬೇಕಿತ್ತು. ಆದರೆ ನಿಧಾನಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿರುವುದು ಗಮನಿಸಿದರೆ ಇನ್ನೂ ಐದು ವರ್ಷಗಳಾದರೂ ಕಾಮಗಾರಿ ಮುಕ್ತಾಯಗೊಳ್ಳುವ ಲಕ್ಷಣಗಳಿಲ್ಲ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಸಂಬಂಧಪಟ್ಟ ಅಧಿಕಾರಿಗಳಿಗೆ ಚಾಟಿ ಬೀಸಿದರು.

ಅವರು, ಇಂದು ನಗರದ ಮಾಗಾನಹಳ್ಳಿ ರಸ್ತೆಯ ಆಜಾದ್ ನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ದಾವಣಗೆರೆ ಸ್ಮಾರ್ಟ್‍ಸಿಟಿ ಯೋಜನೆಯಡಿ ಎಬಿಡಿ ಏರಿಯಾದ ಎಸ್ಎಸ್‍ಎಂ ನಗರ, ಬೀಡಿ ಲೇಔಟ್ ಹಾಗೂ ಪಾರ್ವತಮ್ಮ ನಗರಗಳಲ್ಲಿ 7.57 ಕೋಟಿ ರೂ. ವೆಚ್ಚದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕಾಮಗಾರಿಗಳು ತ್ವರಿತವಾಗಿ ಮತ್ತು ಗುಣಮಟ್ಟದಿಂದ ನಡೆಯಬೇಕೆಂದು ಅನೇಕ ಬಾರಿ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಆದರೂ ಸಹ ನಿಧಾನಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಅಧಿಕಾರಿಗಳು ಗುತ್ತಿಗೆದಾರರಿಂದ ಈ ಕಾಮಗಾರಿಗಳನ್ನು ಶೀಘ್ರ ಮುಕ್ತಾಯವಾಗುವಂತೆ ಕೆಲಸ ನಿರ್ವಹಿಸಿ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಜಿ. ಅಜಯಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ. ವೀರೇಶ್, ಮುಖಂಡ ಅಮಾನುಲ್ಲಾ ಖಾನ್ ಮಾತನಾಡಿದರು. 

ಉಪ ಮೇಯರ್ ಶ್ರೀಮತಿ ಸೌಮ್ಯ ನರೇಂದ್ರ ಕುಮಾರ್, ನಗರ ಪಾಲಿಕೆ ಸದಸ್ಯರಾದ ಎ.ಬಿ. ರಹೀಂ, ಚಮನ್‍ಸಾಬ್, ಜಾಕೀರ್, ಸೈಯದ್ ಚಾರ್ಲಿ, ನೂರ್‍ಜಾನ್‍ಬಿ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಮುಖಂಡರಾದ ಎ.ಬಿ. ಹಬೀಬ್ ಸಾಬ್, ಶಫೀಕ್ ಪಂಡಿತ್, ದಾದಾಪೀರ್, ಟಿ. ಅಸ್ಗರ್ ಸೇರಿದಂತೆ, ಇತರರು ಇದ್ದರು.

error: Content is protected !!