ರೈತ ಪರ ಕೆಲಸಗಳೇ ಋಣ ತೀರಿಸಲು ಅವಕಾಶ

ಆನಗೋಡಿನ ಹುತಾತ್ಮ ರೈತರ ದಿನಾಚರಣೆಯಲ್ಲಿ ಎಸಿ ಮಮತಾ ಹೊಸಗೌಡರ್ ಅಭಿಮತ

ದಾವಣಗೆರೆ, ಸೆ.13- ಮಣ್ಣಿನ ಋಣ ತೀರಿಸುವ ಅವಕಾಶ ಪ್ರತಿಯೊಬ್ಬರಿಗೂ ಇದ್ದು, ರೈತರ ಪರವಾದ ಕೆಲಸಗಳನ್ನು ಮಾಡಿದಾಗ ಈ ಋುಣ ತೀರಿಸಿದಂತಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಮಮತಾ ಹೊಸ ಗೌಡರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಆನಗೋಡು ಬಳಿಯ ಉಳುಪಿನ ಕಟ್ಟೆಯ ಕ್ರಾಸ್ ನಲ್ಲಿ ಹುತಾತ್ಮ ರೈತರ ದಿನಾಚರಣೆ ಮತ್ತು ಸಮಾಧಿ ಸ್ಥಳಾಂತರ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ರೈತರ ಆತ್ಮಹತ್ಯೆ ತಡೆಗಟ್ಟುವ ಸಲುವಾಗಿ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸುವ ಕಾಯಕವನ್ನು ಅಧಿಕಾರಿ ವರ್ಗ ಮಾಡಬೇಕು. ಈ ನಿಟ್ಟಿನಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ಬಲಪಡಿಸಬೇಕೆಂದರು.

ಮೆಕ್ಕೆಜೋಳ ಖರೀದಿ ಕೇಂದ್ರದ ಆರಂಭಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತಿ ಸದಸ್ಯ ಕೆ.ಎಸ್. ಬಸವಂತಪ್ಪ ಮಾತನಾಡಿ, ಒಡೆದು ಹೋಗಿರುವ ರೈತ ಸಂಘಗಳು ಒಂದುಗೂಡುವ ಅಗತ್ಯವಿದೆ. ಅಲ್ಲದೇ ಪ್ರಬಲ ಹೋರಾಟದ ಮುಖಾಂತರ ನ್ಯಾಯಯುತ ಹಕ್ಕೊತ್ತಾಯಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ತಂದು ಗಮನ ಸೆಳೆಯಬೇಕು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು. ಶಾಮನೂರು ಎಚ್.ಆರ್. ಲಿಂಗರಾಜ್ ಮಾತನಾಡಿ, ಈ ಬಾರಿ ಉತ್ತಮ ಮಳೆ ಬೆಳೆಯಾಗಿದ್ದರೂ ಬೆಳೆಗಳಿಗೆ ನಿಗದಿತ ಬೆಲೆ ಇಲ್ಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಖರೀದಿ ಕೇಂದ್ರ ಪ್ರಾರಂಭಕ್ಕೆ ಸರ್ಕಾರಗಳ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿದರು.

1992ರಲ್ಲಿ ಯೂರಿಯಾ ಗೊಬ್ಬರಕ್ಕೆ ನಡೆದ ಹೋರಾಟದಲ್ಲಿ ಮರಣವನ್ನಪ್ಪಿದ ರೈತರ ನೆನಪಿನಲ್ಲಿ ಪ್ರತಿ ವರ್ಷ ಸ್ಮರಣೋತ್ಸವ ನಡೆಸಲಾಗುತ್ತಿದೆ. ಎನ್.ಜಿ. ಪುಟ್ಟಸ್ವಾಮಿ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತಮ್ಮ ಮನೆಯ ಕಾರ್ಯಕ್ರಮದಂತೆ ಸ್ಮರಣೋ ತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ ಎಂದರು.

ಲೆಕ್ಕ ಪರಿಶೋಧಕ ಅಥಣಿ ವೀರಣ್ಣ ಮಾತನಾಡಿ, ಕಷ್ಟಗಳು ರೈತರಿಗೆ ಮಾತ್ರ ಮೀಸಲಾಗಿವೆ. ಈ ಬಾರಿ ಮೆಕ್ಕೆಜೋಳ ಬೆಳೆ ಉತ್ತಮವಾಗಿದೆ. ಬೆಲೆ ಸಿಗದಿದ್ದರೆ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದು ಪುನರಾವರ್ತನೆಯಾಗಬಾರದು. ಈ ಹಿಂದೆ ದೇಶದ ಶೇ.80ಕ್ಕೂ ಹೆಚ್ಚು ಜನರು ಕೃಷಿ ಅವಲಂಬಿಸಿದ್ದರು. ಆದರೆ ಪ್ರಸ್ತುತ ಜನರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋದ ಪರಿಣಾಮ ಕೃಷಿ ಕ್ಷೇತ್ರ ನಿರ್ಲಕ್ಷಕ್ಕೆ ಒಳಗಾಗಿದೆ. ಇದನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಕೃಷಿಗೆ ಮತ್ತು ಕೃಷಿಕರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ಗೌರವ ಅಧ್ಯಕ್ಷ ಆನಗೋಡು ನಂಜುಂಡಪ್ಪ ಮಾತನಾಡಿ, ಕಲ್ಲಿಂಗಪ್ಪ ಮತ್ತು ನಾಗರಾಜ ಚಾರ್ ಜೀವನ ಸಾರ್ಥಕವಾಗಿದೆ. ಇದೀಗ ಶಾಲೆಗೆ ದಾನ ಮಾಡಿದ ಜಮೀನಿನಲ್ಲಿ ಸಮಾಧಿ ಸ್ಥಳಾಂತರವಾಗಿದ್ದು, ಇಲ್ಲಿ ಸ್ಮಾರಕ ನಿರ್ಮಾಣವಾಗಬೇಕೆಂದು ಆಶಿಸಿದರು. 

ತಹಶೀಲ್ದಾರ್ ಗಿರೀಶ್ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸ್ಮಾರಕ ನಿರ್ಮಾಣಕ್ಕೆ 37 ಗುಂಟೆ ಜಮೀ ನನ್ನು ಮಂಜೂರು ಮಾಡಲಾಗಿದೆ. ಈ ಸ್ಥಳದಲ್ಲಿ ಸ್ಮರಣೀಯ ಕಾರ್ಯಕ್ರಮಗಳು ನಡೆಯುವಂತಾಗಬೇಕು. ರೈತರ ಆತ್ಮಹತ್ಯೆ ಗಳು ನಿಲ್ಲಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸಗಳಾಗಬೇಕೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ, ಸಂಸದರು ಮತ್ತು ಶಾಸಕರು ಹಾಗೂ ಅಧಿಕಾರಿಗಳ ಇಚ್ಛಾ ಶಕ್ತಿಯಿಂದಾಗಿ 37 ಗುಂಟೆ ಜಮೀನು ಸ್ಮಾರಕ ನಿರ್ಮಾಣಕ್ಕೆ ದೊರೆತಿದೆ. ಈ ಜಾಗವನ್ನು ಅಭಿವೃದ್ಧಿಪಡಿಸಿ ಜನಾಕ ರ್ಷಣೆಯ ಕೇಂದ್ರ ಬಿಂದುವಾಗಿಸುವ ಜೊತೆಗೆ ರೈತರ ಸಮಸ್ಯೆಗಳ ಕುರಿತು ಇಲ್ಲಿ ಚರ್ಚೆಗಳಾಗಬೇಕು.  ಈ ಜಾಗ ರೈತರ ಹೋರಾಟಕ್ಕೆ ಸ್ಫೂರ್ತಿಯಾಗಲೀ ಎಂದರು.

ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವ ಡಾ. ಎಂ.ಎಸ್. ಸ್ವಾಮಿನಾಥನ್ ಅವರ ರಾಷ್ಟ್ರೀಯ ಕೃಷಿ ಆಯೋಗದ ವರದಿಯನ್ನು ಶೀಘ್ರ ಜಾರಿಗೆ ತರಬೇಕೆನ್ನುವುದೂ ಸೇರಿದಂತೆ 5 ಪ್ರಮುಖ ನಿರ್ಣಯಗಳನ್ನು ಸಮಿತಿ ಕೈಗೊಂಡು ಬೇಡಿಕೆಗಳನ್ನು ಈಡೇರಿಸಲು ಇದೇ ವೇಳೆ ಸಮಿತಿಯಿಂದ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ತಾಮ್ರಧ್ವಜ, ರೈತ ಮುಖಂಡರಾದ ಹೊನ್ನೂರು ಮುನಿಯಪ್ಪ, ಅರುಣ ಕುಮಾರ್ ಕುರುಡಿ, ನಾಗೇಶ್ವರ ರಾವ್, ರಾಮಗೊಂಡನಹಳ್ಳಿ ನಾಗರಾಜ್, ಮಂಜುನಾಥ್, ಗೌಡ್ರ ಮಹೇಶ್ವರಪ್ಪ, ಬುಳ್ಳಾಪುರದ ಹನುಮಂತಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!