ಹರಿಹರ, ಸೆ.11- ತಾಲ್ಲೂಕಿನಲ್ಲಿ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಮಳೆಯು ತಾಲೂಕಿ ನಾದ್ಯಂತ ಮಲೇಬೆನ್ನೂರು 48.8, ಕೊಕ್ಕನೂರು 35.2, ಸಿರಿಗೆರೆ 50.02, ಒಟ್ಟು 148.2 ಸೆಂಟಿಮೀಟರ್ ಮಳೆಯಾಗಿದ್ದು, ಕಳೆದ ವಾರದ ಸರಾಸರಿ 37.05 ಮಳೆಯಾಗಿದೆ. ಇದರ ಪರಿಣಾಮ ವಾಗಿ ತಾಲ್ಲೂಕಿನಾದ್ಯಂತ ಹಲವಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಿಂದ ರೈತರ ಬದುಕು ದುಸ್ತರವಾಗಿದೆ.
ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಬೆಳ್ಳೂಡಿ, ರಾಮತೀರ್ಥ, ಭಾನುವಳ್ಳಿ, ಬ್ಯಾಲದಹಳ್ಳಿ ಸೇರಿದಂತೆ ಇತರೆ ಗ್ರಾಮಗಳ ಸಮೀಪ ಕೆಲವು ರಸ್ತೆಗಳ ಸಂಪರ್ಕ ಕಡಿತವಾಗಿದ್ದು, ಹೊಸದಾಗಿ ಕಟ್ಟಿದ ಬೆಳ್ಳೂಡಿ ಸೇತು ವೆಯು ಕುಸಿದಿದೆ. ಜೊತೆಗೆ ನೂರಾರು ಎಕರೆ ವಿಳ್ಯೆದೆಲೆ ಮತ್ತು ಅಡಿಕೆ ತೋಟ, ಭತ್ತ, ಮೆಕ್ಕೆ ಜೋಳ ಮತ್ತು ಇತರೆ ಜಮೀನುಗಳಲ್ಲಿ ನೀರು ನುಗ್ಗಿ ಬೆಳೆ ಹಾನಿಯಾಗಿದೆ.
ದೇವರಬೆಳಕೆರೆ ಗ್ರಾಮದ ಡ್ಯಾಂ ಹಿನ್ನೀರು ಭತ್ತದ ನಾಟಿಗೆ ನುಗ್ಗಿರುವುದರಿಂದ ಗುಳದಹಳ್ಳಿ ಮತ್ತು ಸಂಕ್ಲೀಪುರ ಗ್ರಾಮದ ಸುಮಾರು 60 ಎಕರೆ ಪ್ರದೇಶದಲ್ಲಿ ಭತ್ತದ ಹಾನಿ ಸಂಭವಿಸಿದೆ
– ವಿ.ಪಿ. ಗೋವರ್ಧನ್, ಕೃಷಿ ಅಧಿಕಾರಿ
ಈಗ ಇರುವ ಬೆಳ್ಳೂಡಿ ಮತ್ತು ರಾಮತೀರ್ಥ ಗ್ರಾಮದ ಮಧ್ಯದಲ್ಲಿ ಇರುವ ಸೇತುವೆಯು ಪ್ರತಿ ಬಾರಿ ಮುಳುಗುವುದಕ್ಕೆ ಸೇತುವೆಯನ್ನು ಕಟ್ಟುವಾಗ ಬಹಳ ಹತ್ತಿರದಲ್ಲಿ ಪಿಲ್ಲರ್ ಹಾಕಿ ಕಟ್ಟಿರುವುದರಿಂದ ಕಸ ಕಡ್ಡಿಗಳು ಕಟ್ಟಿಕೊಂಡು ನೀರು ಸರಾಗವಾಗಿ ಹರಿಯದೆ ಸೇತುವೆ ಕುಸಿತ ಕಂಡಿದೆ. ಇಲ್ಲಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಬಳಿ ಮಾತನಾಡಿದ್ದು, ಅವರು ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಹೊಸದಾಗಿ ಎತ್ತರದ ಸೇತುವೆ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದಾರೆ. ಶೀಘ್ರವಾಗಿ ಸೇತುವೆ ನಿರ್ಮಾಣದ ಕಾರ್ಯವನ್ನು ಮಾಡಲಾಗುತ್ತದೆ. ಸದ್ಯದಲ್ಲಿ ಸಾರ್ವಜನಿಕರಿಗೆ ಓಡಾಡುವವುದಕ್ಕೆ ತಾತ್ಕಾಲಿಕವಾಗಿ ಅನುಕೂಲ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ತಿಳಿಸಿದರು.
ತಾಲ್ಲೂಕಿನಲ್ಲಿ ಸುರಿದ ಮಳೆಗೆ ಶಾಂತಿಸಾಗರ, ಸೂಳೆಕೆರೆ, ಶ್ಯಾಗಲೆ ಹಳ್ಳ ಎಂದು ಕರೆಯಲ್ಪಡುವ ಬ್ಯಾಲದಹಳ್ಳಿ ಹಳ್ಳವು ಸಂಪೂರ್ಣವಾಗಿ ತುಂಬಿ ಹರಿಯುತ್ತಿರುವ ಪರಿಣಾಮ ಗ್ರಾಮದ ಸಮೀಪದ ಸೇತುವೆ ಮೇಲೆ ನೀರು ಹರಿದು, ರಸ್ತೆ ಸಂಪರ್ಕ ಕಡಿತವಾಗಿದೆ, ರೈತರ ಜಮೀನುಗಳಿಗೆ ನೀರು ನುಗ್ಗಿ ಕೃಷಿ ಚಟುವಟಿಕೆ ನಡೆಸಲು ಕಷ್ಟವಾಗಿದೆ. ತಾಲ್ಲೂಕಿನಾದ್ಯಂತ ಬೆಳ್ಳೂಡಿಯಲ್ಲಿ 55 ಎಕರೆ, ಬ್ಯಾಲಹಳ್ಳಿ 35 ಎಕರೆ, ರಾಮತೀರ್ಥ 10 ಎಕರೆ, ವೀಳ್ಯೆದೆಲೆ ಬಳ್ಳಿ ನಾಶವಾಗಿದೆ. ಬೆಳ್ಳೂಡಿಯ 35 ಎಕರೆ, ಬ್ಯಾಲದಹಳ್ಳಿಯ 15 ಎಕರೆ ಅಡಿಕೆ ತೋಟಕ್ಕೆ ಹಾನಿಯಾಗಿದೆ. ಅಲ್ಲದೆ ಬೆಳ್ಳೂಡಿಯ 42 ಎಕರೆ, ಬ್ಯಾಲದಹಳ್ಳಿಯ 35, ದೇವರಬೆಳಕೆರೆಯ 20, ರಾಮ ತೀರ್ಥದ 6, ಸಲಗನಹಳ್ಳಿಯ 40, ಕಡ್ಲೆ ಗೊಂದಿಯ 10 ಎಕರೆ ಪ್ರದೇಶದ ಭತ್ತದ ಬೆಳೆ ನಾಶವಾಗಿದೆ. ತಾಲೂಕಿನ ಒಟ್ಟು 338 ಎಕರೆ ಪ್ರದೇಶ ಜಲಸಮಾಧಿ ಆಗಿದೆ ಎಂಬ ವರದಿಯಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಕೃಷಿ ಅಧಿಕಾರಿ ಗೋವರ್ಧನ್, ತಾ.ಪಂ. ಇಓ ಗಂಗಾಧರನ್, ಪೊಲೀಸ್ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು, ಸಿಬ್ಬಂದಿ ಗಳು ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ. ಬಹುತೇಕ ರೈತರ ಜಮೀನುಗಳು ಜಲಾವೃತವಾಗಿದೆ. ಬೆಳ್ಳೂಡಿ-ರಾಮತೀರ್ಥ ಮಾರ್ಗದಲ್ಲಿರುವ ಸೇತುವೆ ಸಂಪೂರ್ಣ ಕುಸಿತಗೊಂಡಿದೆ. ಕೃಷಿ ಚಟುವಟಿಕೆ ಹಾಗೂ ಕೂಲಿ ಕೆಲಸಗಳಿಗೆ ಹೋಗಲು ಗ್ರಾಮದ ಜನತೆ ಇದೇ ರಸ್ತೆಯನ್ನು ಅವಲಂಬಿಸಿ ದ್ದಾರೆ. ಈ ಸೇತುವೆ ಮುಳುಗಿರುವುದರಿಂದ ರೈತರು ತಮ್ಮ ಕೃಷಿ ಚಟು ವಟಿಕೆ ನಡೆಸಲು ಸುಮಾರು 10 ಕಿ.ಮೀ. ಸುತ್ತು ವರೆದು ಜಮೀನುಗಳಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಈ ಸ್ಥಳದಲ್ಲಿ ಎತ್ತರ ಮಟ್ಟದ ನೂತನ ಸೇತುವೆ ನಿರ್ಮಿಸುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ತೆರಳಲು ಶಾಶ್ವತ ಪರಿಹಾರ ನೀಡಬೇಕೆಂದು ಈ ಭಾಗದ ರೈತರ ಒತ್ತಾಯವಾಗಿದೆ. ಕಳೆದ ಬಾರಿ ಅಧಿಕಾರಿಗಳು ಜಲಾವೃತ ಪ್ರದೇಶದ ಸಮಿಕ್ಷೆ ಮಾಡಿ ಹೋಗಿದ್ದು ಇಲ್ಲಿಯವರೆಗೂ ಪರಿಹಾರ ಧನ ಸಿಕ್ಕಿರುವುದಿಲ್ಲ. ಕೇಳಿದರೆ ಸರ್ಕಾರಕ್ಕೆ ಕಳುಹಿಸಿದ್ದೇವೆ ಇನ್ನು ಬಂದಿಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಈ ವರ್ಷ ಬೆಳೆದ ಬೆಳೆಯು ಸಹ ಸಂಪೂರ್ಣವಾಗಿ ನಾಶವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ ಎಂದು ಗ್ರಾಮದ ರೈತರು ತಿಳಿಸಿದರು.