ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಆನಾವರಣಗೊಂಡ ಕೋವಿಡ್ ಚಿಕಿತ್ಸಾ ಸಮಸ್ಯೆ
ದಾವಣಗೆರೆ, ಸೆ. 11 – ಜಿಲ್ಲಾ ಕೋವಿಡ್ ಆಸ್ಪತ್ರೆಯಾದ ಸಿ.ಜಿ. ಆಸ್ಪತ್ರೆಯಲ್ಲಿ ಮೀಸಲಾಗಿ 21 ವೆಂಟಿಲೇಟರ್‌ಗಳು ಇವೆಯಾದರೂ ನಿರ್ವಹಿಸಲು ಸಿಬ್ಬಂದಿಯೇ ಇಲ್ಲ. 260 ವೈದ್ಯಕೀಯ ಸಿಬ್ಬಂದಿಯ ಅಗತ್ಯವಿದ್ದು, ಈ ಬಗ್ಗೆ ಇನ್ನೂ ಕ್ರಮ ತೆಗೆದುಕೊಳ್ಳ ಲಾಗುತ್ತಿದೆ.
ಜಿಲ್ಲಾ ಪಂಚಾಯ್ತಿಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ. ರಾಘವೇಂದ್ರ ಸ್ವಾಮಿ ಹಾಗೂ ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್ ಅವರು ಈ ಮಾಹಿತಿ ನೀಡಿದರು.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ದೀಪಾ ಜಗದೀಶ್, ಕೊರೊನಾ ಹೋಗುವುದರ ಒಳಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಿ. ಆಸ್ಪತ್ರೆಯಲ್ಲಿ ಐಸಿಯು, ವೆಂಟಿಲೇಟರ್ ಇಲ್ಲ ಎಂದು ಜನರು ಆಸ್ಪತ್ರೆಗೆ ಬರಲು ಭಯ ಪಡುವಂತಾಗಿದೆ ಎಂದರು.
ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಿಗದೇ ಇದ್ದರೆ, ಜನರು ಖಾಸಗಿ ಆಸ್ಪತ್ರೆಯಲ್ಲಿ ದಿನಕ್ಕೆ 25 ಸಾವಿರ ರೂ. ವೆಚ್ಚ ಮಾಡಬೇಕಿದೆ. ಬಡವರು ಹಾಗೂ ಜನ ಸಾಮಾನ್ಯರಿಗೆ ನೆರವಾಗಲು ತ್ವರಿತವಾಗಿ ಸಿಬ್ಬಂದಿ ನೇಮಿಸಿಕೊಳ್ಳಿ. ಅಗತ್ಯವಾದರೆ, ಖಾಸಗಿ ವೈದ್ಯರನ್ನು ನೇಮಿಸಿಕೊಳ್ಳಿ ಎಂದು ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವೀರಶೇಖರಪ್ಪ ತಿಳಿಸಿದರು.
ಚಿಗಟೇರಿ ಆಸ್ಪತ್ರೆಯಲ್ಲಿ ಹತ್ತು ವೆಂಟಿಲೇ ಟರ್‌ಗಳು ಈಗ ಕೆಲಸ ಮಾಡುತ್ತಿವೆ. 21 ವೆಂಟಿ ಲೇಟರ್‌ಗಳು ಮೀಸಲಾಗಿವೆ. ಇದಕ್ಕೆ ವೈದ್ಯಕೀಯ ಸಿಬ್ಬಂದಿಯ ಅಗತ್ಯವಿದೆ ಎಂದ ಜಿಲ್ಲಾ ಸರ್ಜನ್ ಜಯಪ್ರಕಾಶ್, ಲಿಕ್ವಿಡ್ ಆಕ್ಸಿಜನ್ ಘಟಕ ಆಸ್ಪತ್ರೆಯಲ್ಲಿ, ಹತ್ತು ದಿನಗಳಲ್ಲಿ ನಿರ್ಮಾಣವಾ ಗಲಿದೆ. ಸದ್ಯಕ್ಕೆ ಹರಿಹರದಿಂದ ಆಕ್ಸಿಜನ್ ಸಿಲಿಂಡರ್ ತರಿಸಲಾಗುತ್ತಿದೆ ಎಂದು ತಿಳಿಸಿದರು.
ಡಿ.ಹೆಚ್.ಒ. ರಾಘವೇಂದ್ರ ಸ್ವಾಮಿ ಮಾತನಾಡಿ, ಮೂರ್ನಾಲ್ಕು ದಿನಗಳಲ್ಲಿ ವೈದ್ಯರು ಹಾಗೂ ಅನಸ್ತೇಷಿಯಾ ಪರಿಣಿತರು ಚಿಕಿತ್ಸೆಗೆ ಲಭ್ಯವಾಗಲಿದ್ದಾರೆ. ಆಗ ಸ್ವಲ್ಪ ಸಮಸ್ಯೆ ಕಡಿಮೆಯಾಗಲಿದೆ. ಆಸ್ಪತ್ರೆಗೆ ಹಲವು ವಿಭಾಗಗಳ ವೈದ್ಯರೂ ಸೇರಿದಂತೆ 260 ಸಿಬ್ಬಂದಿಯ ಅಗತ್ಯವಿದೆ. ಈ ಬಗ್ಗೆ ಪ್ರಸ್ತಾವನೆ ಕಳಿಸಿದ್ದೇವೆ ಎಂದರು.
ವೆಂಟಿಲೇಟರ್ಗೂ ಸೀನಿಯಾರಿಟಿ!
ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ 260 ಆಕ್ಸಿಜನ್ ಬೆಡ್ಗಳು, 48 ಉಸಿರಾಟದ ಸಮಸ್ಯೆಗೆ ಚಿಕಿತ್ಸೆ ನೀಡುವ ಬೆಡ್ಗಳು ಹಾಗೂ 10 ವೆಂಟಿಲೇಟರ್ಗಳಿವೆ. ಇವುಗಳೆಲ್ಲವೂ ರೋಗಿಗಳಿಗೆ ಬಳಕೆಯಾ ಗುತ್ತಿವೆ. ಹೀಗಾಗಿ ಹೊಸದಾಗಿ ತುರ್ತು ಚಿಕಿತ್ಸೆ ಬೇಕಾದವರು §ಸೀನಿಯಾರಿಟಿ’ಗೆ (ಹಿರಿತನ) ಕಾಯಬೇಕಿದೆ.
ಬೆಡ್ ಖಾಲಿಯಾದ ಸಂದರ್ಭದಲ್ಲಿ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಯಾರು ಮೊದಲು ದಾಖಲಾಗಿರುತ್ತಾರೋ, ಅವರ ಸೀನಿಯಾರಿಟಿ ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಹೆಚ್.ಒ. ಡಾ. ರಾಘವೇಂದ್ರ ಸ್ವಾಮಿ, ರೋಗಿಯು ತುರ್ತು ಸ್ಥಿತಿಯಲ್ಲಿದ್ದಾಗ ಸೀನಿಯಾರಿಟಿ ಪರಿಗಣಿಸದೇ ಚಿಕಿತ್ಸೆ ನೀಡುತ್ತೇವೆ. ರೋಗಿಯ ತುರ್ತು ಸ್ಥಿತಿ ಬಗ್ಗೆ ಜಿಲ್ಲಾ ಪಂಚಾಯ್ತಿ ಸದಸ್ಯರು ತಿಳಿಸಿದಾಗಲೂ ಚಿಕಿತ್ಸೆ ಕೊಡಿಸುತ್ತಿದ್ದೇವೆ ಎಂದರು.
1,500 ಬಿಪಿಎಲ್ ಕಾರ್ಡು ರದ್ದು
ಸರ್ಕಾರಿ ನೌಕರರೂ ಸೇರಿದಂತೆ, ಅನರ್ಹರು ಬಿಪಿಎಲ್ ಕಾರ್ಡ್ಗಳನ್ನು ಪಡೆದಿದ್ದರೆ ವಾಪಸ್ ನೀಡುವಂತೆ ಎಚ್ಚರಿಕೆ ನೀಡಲಾಗಿತ್ತು. ಅದರಂತೆ ಕಳೆದ ಆಗಸ್ಟ್ 31ರ ಒಳಗೆ 1,500 ಜನರು ಕಾರ್ಡ್ ವಾಪಸ್ ಕೊಟ್ಟಿದ್ದಾರೆ.
ಇವುಗಳನ್ನು ರದ್ದು ಮಾಡುವ ಜೊತೆಗೆ ಕೆಲವರಿಂದ ದಂಡ ವಸೂಲಿ ಮಾಡಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.
ಶೀತ ಹಾಗೂ ಕೆಮ್ಮಿಗೆ ಚಿಕಿತ್ಸೆ ನೀಡಲೂ ಕೊರೊನಾ ಟೆಸ್ಟ್ ಮಾಡಬೇಕು ಎಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಹೇಳಲಾಗುತ್ತಿದೆ. ಟೆಸ್ಟ್ ಮಾಡಿಸಿ, ಆದರೆ, ಅದಕ್ಕೂ ಮುಂಚೆ ಪ್ರಾಥಮಿಕ ಚಿಕಿತ್ಸೆ ಕೊಡಿ ಎಂದ ಅಧ್ಯಕ್ಷೆ ದೀಪಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ಜನಔಷಧಿ ಇದ್ದರೂ ಹೊರಗೆ ಚೀಟಿ ಬರೆದು ಕೊಡಲಾಗುತ್ತಿದೆ. ಜನೌಷಧಿ ಕೇಂದ್ರಗಳ ಔಷಧಗಳ ಬೆಲೆಗಳಲ್ಲೂ ವ್ಯತ್ಯಾಸ ಇದೆ ಎಂದರು.
ಜನೌಷಧಿ ಕೇಂದ್ರಗಳಲ್ಲಿ ಬೆಲೆಗಳಲ್ಲಿ ವ್ಯತ್ಯಾಸ ಇದ್ದರೆ ಆ ಬಗ್ಗೆ ಪರಿಶೀಲನೆ ನಡೆಸಬೇಕು. ಜನೌಷಧಿ ಕೇಂದ್ರದ ಲೋಪಗಳ ಬಗ್ಗೆ ಎಂ.ಎಸ್.ಐ.ಎಲ್.ಗೆ ದೂರು ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪದ್ಮಾ ಬಸವಂತಪ್ಪ ಸೂಚಿಸಿದರು.
ಯಾಂತ್ರಿಕ ನಾಟಿ : ಭತ್ತ ಬೆಳೆಯುವ ರೈತರ ಖರ್ಚು ಕಡಿಮೆ ಮಾಡಲು ಯಾಂತ್ರಿಕ ನಾಟಿಗೆ ಉತ್ತೇಜನ ನೀಡಬೇಕು. ರೈತರಿಗೆ ಬಿತ್ತನೆಯ ಕೂಲಿ ಹೊರೆಯಾಗುತ್ತಿದೆ ಎಂದು ವೀರಶೇಖರಪ್ಪ ತಿಳಿಸಿದರು.
ಈ ವರ್ಷ 1,500 ಹೆಕ್ಟೇರ್ ಪ್ರದೇಶದಲ್ಲಿ ಯಾಂತ್ರಿಕ ಬಿತ್ತನೆ ಮಾಡಲಾಗಿದೆ. ಇದರ ಇಳುವರಿ ಸಾಮಾನ್ಯವಾಗಿರಲಿದೆ ಎಂದು ರೈತರಿಗೆ ಮನವರಿಕೆ ಮಾಡಿಕೊಡುವ ಮೂಲಕ ಯಾಂತ್ರಿಕ ಬಿತ್ತನೆಗೆ ಉತ್ತೇಜನ ನೀಡಲಾಗುವುದು ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಹೇಳಿದರು.
ಬಾರದ ಅಧಿಕಾರಿಗಳಿಗೆ ತರಾಟೆ : ಕೊರೊನಾ ಸೋಂಕಿಗೆ ಸಿಲುಕಿದ ಕಾರಣಕ್ಕಾಗಿ ಕೆಲ ಇಲಾಖೆಗಳ ಮುಖ್ಯಸ್ಥರು ಸಭೆಗೆ ಬಂದಿರಲಿಲ್ಲ. ಇನ್ನು ಕೆಲವರು ಅನ್ಯ ಸಭೆ ಸೇರಿದಂತೆ ಹಲವು ಕಾರಣಗಳಿಗೆ ಗೈರಾಗಿದ್ದರು. ಆದರೆ, ಈ ಬಗ್ಗೆ ಮುಂಚೆಯೇ ಸೂಚನೆ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ಪದ್ಮಾ ಬಸವಂತಪ್ಪ, ಮುಂದಿನ ಸಭೆಯಲ್ಲಿ ಇದೇ ವರ್ತನೆ ತೋರಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಸಾಕಮ್ಮ, ಜಿ.ಪಂ. ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಫಕ್ಕೀರಪ್ಪ, ಜಿ.ಪಂ. ಉಪ ಕಾರ್ಯದರ್ಶಿ ಆನಂದ್ ಮತ್ತಿತರರು ಉಪಸ್ಥಿತರಿದ್ದರು.