ಗುಣಮಟ್ಟದ ಹೆಲ್ಮೆಟ್ ಖರೀದಿಸಲು ವಾರದ ಸಮಯ : ಎಸ್ಪಿ
ದಾವಣಗೆರೆ, ಸೆ. 10 – ಪ್ಲಾಸ್ಟಿಕ್ ಟೋಪಿಯ ರೀತಿಯ ಹೆಲ್ಮೆಟ್‌ಗೆ ನಿಯಮಗಳಲ್ಲಿ ಮಾನ್ಯತೆ ಇಲ್ಲ ಎಂದಿರುವ ಎಸ್ಪಿ ಹನುಮಂತರಾಯ, ತಲೆಯನ್ನು ಪೂರ್ಣ ಪ್ರಮಾಣದಲ್ಲಿ ಮುಚ್ಚುವ ಐ.ಎಸ್.ಐ. ಗುಣಮಟ್ಟದ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಹೆಲ್ಮೆಟ್ ಕುರಿತು ಹೊಸ ನಿಯಮವನ್ನೇನೂ ಜಾರಿಗೆ ತರುತ್ತಿಲ್ಲ. ಇದು ಮೊದಲಿನಿಂದಲೂ ಇರುವ ನಿಯಮ ಎಂದು ಸ್ಪಷ್ಟಪಡಿಸಿದ್ದಾರೆ.
ಜನರು ದಂಡದಿಂದ ತಪ್ಪಿಸಿಕೊಳ್ಳಲು ಪ್ಲಾಸ್ಟಿಕ್ ಟೋಪಿಯ ರೀತಿಯದ್ದನ್ನು ಧರಿಸುತ್ತಿದ್ದಾರೆ. ಇದಕ್ಕೆ ಬೆಲ್ಟ್ ಸಹ ಹಾಕಿಕೊಳ್ಳುತ್ತಿಲ್ಲ. ಇದರಿಂದ ತಲೆಗೆ ಯಾವುದೇ ರಕ್ಷಣೆಯೂ ಸಿಗುವುದಿಲ್ಲ. ಅಂಥದನ್ನು ಹೆಲ್ಮೆಟ್ ಎಂದು ಪರಿಗಣಿಸಲೂ ಸಾಧ್ಯವಿಲ್ಲ.
ಜನರಿಗೆ ಈ ಬಗ್ಗೆ ದಂಡವನ್ನೂ ವಿಧಿಸುತ್ತಿಲ್ಲ. ಒಳ್ಳೆಯ ಗುಣಮಟ್ಟದ ಹೆಲ್ಮೆಟ್ ಧರಿಸಲು ನಾವು ಜನರಿಗೆ ಒಂದು ವಾರದ ಸಮಯವನ್ನೂ ನೀಡಿದ್ದೇವೆ. ಒಳ್ಳೆಯ ಹೆಲ್ಮೆಟ್ ಅನ್ನು ಜನರು ಖರೀದಿಸಬೇಕು ಎಂದು ಎಸ್ಪಿ ತಿಳಿಸಿದ್ದಾರೆ.
ಹಾಫ್ ಹೆಲ್ಮೆಟ್ ಧರಿಸುವುದನ್ನು ಪೊಲೀಸರು ತಡೆಯಲು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಬುಧವಾರ ಒಂದೇ ದಿನ 650ಕ್ಕೂ ಹೆಚ್ಚು ‘ಪ್ಲಾಸ್ಟಿಕ್ ಟೋಪಿ’ಗಳನ್ನು ಪೊಲೀಸರು ಬೈಕ್ ಸವಾರರಿಂದ ಪಡೆದುಕೊಂಡು, ಐ.ಎಸ್.ಐ. ಗುಣಮಟ್ಟದ ಹೆಲ್ಮೆಟ್ ಖರೀದಿಸಲು ಎಚ್ಚರಿಕೆ ನೀಡಿದ್ದರು.