ಅಖಿಲ ಕರ್ನಾಟಕ ಬೇಡ ಜಂಗಮ ಜನಾಂಗ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಡಿ. ಹಿರೇಮಠ
ಬಳ್ಳಾರಿ, ಸೆ. 8- ಬೇಡ ಜಂಗಮರ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ರೀತಿಯ ಹೋರಾಟ ಹಮ್ಮಿಕೊಳ್ಳುವುದರ ಜೊತೆಗೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅಖಿಲ ಕರ್ನಾಟಕ ಬೇಡ ಜಂಗಮ ಜನಾಂಗ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಡಿ. ಹಿರೇಮಠ ಹೇಳಿದ್ದಾರೆ.
ಬಳ್ಳಾರಿಯ ಕಮ್ಮರ ಚೇಡು ಸಂಸ್ಥಾನ ಮಠದ ಕಲ್ಯಾಣ ಸ್ವಾಮಿಗಳ ಸಾನ್ನಿಧ್ಯದಲ್ಲಿ ಮೊನ್ನೆ ನಡೆದ ಬೇಡ ಜಂಗಮ ಸಮುದಾಯದ ಚಿಂತನ-ಮಂಥನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಚಿವ ಗೋವಿಂದ ಕಾರಜೋಳ ಅವರು ಮತ್ತು ಪಿ.ರಾಜೀವ್ ಸೇರಿದಂತೆ ಮತ್ತಿತರೆ ಶಾಸಕರು ಬೇಡ ಜಂಗಮರ ಗುಣಲಕ್ಷಣ, ಧಾರ್ಮಿಕ ಆಚರಣೆಗಳ ಕುರಿತು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯಗಳ ತೀರ್ಪುಗಳಲ್ಲಿನ ಮತ್ತು ಸರಕಾರದ ಸಮಾಜ ಕಲ್ಯಾಣ ಇಲಾಖೆಯ ದಾಖಲೆಗಳಲ್ಲಿ ಗುರುತಿಸಲ್ಪಟ್ಟು ಒಪ್ಪಿತವಾದ ಅಂಶಗಳಿಗೆ ವ್ಯತಿರಿಕ್ತವಾಗಿ ಸಾರ್ವಜನಿಕವಾಗಿ ಬಿಂಬಿಸಿರುವು ದನ್ನು ಹಿಂಪಡೆದು ಸರ್ಕಾರದ ದಾಖಲೆ ಆಧಾರಿತ ಅಂಶಗಳನ್ನು ಸಾರ್ವಜನಿಕಗೊಳಿಸಬೇಕು.
ಬಾಧಿತ ವ್ಯಕ್ತಿಯಿಂದ ಹೊರತಾದ ದೂರುಗಳನ್ನು ಆಧರಿಸಿ, ಕಾಯ್ದೆಗೆ ವಿರುದ್ಧವಾಗಿ ಮತ್ತು ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘಿಸಿ ವಿಚಾರಣೆಗೆ ಆದೇಶಿಸಿರುವ ಎಡಿಜಿಪಿ ರಾಮಚಂದ್ರರಾವ್ ಅವರ ವಿರುದ್ದ ಇಲಾಖೆ ವಿಚಾರಣೆ ಕೈಗೆತ್ತಿಕೊಂಡು, ಕಾನೂನಿಗೆ ಅವಿಧೇಯತೆ ತೋರಿದ ಅಪರಾಧಗಳಡಿ ಸರಕಾರವೇ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮಗಳನ್ನು ಜರುಗಿಸಬೇಕು.
ಕಾಯ್ದೆಯಲ್ಲಿ ನಿರ್ದಿಷ್ಟಗೊಳಿಸಿದ ಕಾರ್ಯವಿಧಾನಗಳನ್ನು ಅನುಸರಿಸದಿರುವ ಮತ್ತು ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶನಗಳನ್ನು ಅನುಸರಿಸದಿರುವ, ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳನ್ನು ಮಂಜೂರು ಮಾಡದಿರುವ ತಹಶೀಲ್ದಾರರ ವಿರುದ್ದ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು.
ಬೇಡ ಜಂಗಮ ಜಾತಿ ಜನಾಂಗದ ಸಂವಿಧಾನಿಕ ಹಕ್ಕುಗಳನ್ನು 70 ವರ್ಷಗಳಿಂದ ವಂಚಿಸಿದ್ದು, ದಕ್ಕಿಸಿಕೊಡತಕ್ಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ವೀರಣ್ಣ ಹಿರೇಮಠ, ಕೆ.ಎಂ. ವಿಶ್ವನಾಥಸ್ವಾಮಿ, ಬಸವರಾಜ ಪಿ.ಹಳ್ಳೂರು, ಜಿ.ಎಂ.ವಿಶ್ವನಾಥಸ್ವಾಮಿ, ಡಾ. ಎಂ.ಪಿ.ದಾರುಕೇಶ್ವರಯ್ಯ, ಸುಜಾತ ಮಠದ, ಭೂಸನೂರ ಮಠ, ವೀರೇಶ್ ಕೂಡ್ಲಗಿಮಠ, ಅಶೋಕ ಪೂಜಾರಿ, ಕೆ.ಎಂ.ವೀರೇಶ್, ಶ್ರೀ ಮಲ್ಲಿಕಾರ್ಜುನಯ್ಯ ಭಂಗಿಮಠ ಅವರುಗಳು ಮಾತನಾಡಿದರು.
ವಿರೂಪಾಕ್ಷಯ್ಯ ನೀರಲಗಿ ಮಠರವರು ನಿರೂಪಿಪಿಸಿದರು. ಎಂ.ಪಿ.ಶಿವಶಂಕರಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖಂಡರುಗಳಾದ ಶಿವು ಹಿರೇಮಠ, ಸೋಮನಾಥ ಎಚ್.ಎಂ., ಶ್ರೀಕಾಂತ ಹೊಳಿಮಠ, ರಾವೂರ ಮಠ, ಶಂಕ್ರಯ್ಯ ಹಿರೇಮಠ, ಚಂದ್ರಶೇಖರಯ್ಯ ಸವಡಿ, ಗಿರೀಶ್ ಹಿರೇಮಠ, ಮಹಾಂತೇಶ ಕಡಾಮುಡಿ ಮಠ, ಬಂಗಾರೇಶ ಹಿರೇಮಠ, ಪಂಕಜಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.