ರಸ್ತೆ ಅಗಲೀಕರಣಕ್ಕೆ ಒಮ್ಮತದ ಅಭಿಪ್ರಾಯ
ದಾವಣಗೆರೆ, ಸೆ.8- ಮಹಾನಗರಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಮಹಾನಗರಪಾಲಿಕೆಯ ಮಹಾಪೌರರಾದ ಬಿ.ಜಿ.ಅಜಯ್ ಕುಮಾರ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಬಾಷಾನಗರ ಮುಖ್ಯರಸ್ತೆಯ (ಮದೀನಾ ಆಟೋ ಸ್ಟ್ಯಾಂಡ್ನಿಂದ ಅಕ್ತರ್ ರಜಾ ಸರ್ಕಲ್ವರೆಗೆ) ಅಗಲೀಕರಣ ಮಾಡುವ ಸಂಬಂಧ ಆ ಭಾಗದ ಮಹಾನಗರಪಾಲಿಕೆ ಸದಸ್ಯರು, ವಿವಿಧ ಸಂಘ, ಸಂಸ್ಥೆಗಳ ಹಾಗೂ ಧಾರ್ಮಿಕ ಮುಖಂಡರುಗಳನ್ನೊಳಗೊಂಡ ಸಭೆ ಇಂದು ನಡೆಯಿತು.
ಬಾಷಾನಗರ ಮುಖ್ಯ ರಸ್ತೆಯನ್ನು ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಕಾನೂನು ಪ್ರಕಾರವಾಗಿ ರಸ್ತೆ ಅಗಲೀಕರಣ ಮಾಡಲು ಸಭೆಯಲ್ಲಿ ಹಾಜರಿದ್ದ ಮುಖಂಡರುಗಳು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
ರಸ್ತೆ ಅಗಲೀಕರಣದ ಮೊದಲು ಆ ಪ್ರದೇಶದಲ್ಲಿ ಸರ್ವೇ ಮಾಡಿ ಮುಂದಿನ ದಿನಗಳಲ್ಲಿ ಶಾಸಕರೊಂದಿಗೆ, ಎಲ್ಲ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಒಂದು ನಿರ್ಧಾರ ಕೈಗೊಳ್ಳುವುದಾಗಿ ಅಭಿಪ್ರಾಯಕ್ಕೆ ಬರಲಾಯಿತು. ಜೊತೆಗೆ ಹೆಗಡೆ ನಗರ ರಿಂಗ್ ರಸ್ತೆಯಲ್ಲಿ ವಾಸ ಮಾಡುತ್ತಿರುವ ಕುಟುಂಬಗಳನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಿ, ಆ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಸಹ ಸಭೆಯಲ್ಲಿ ವ್ಯಕ್ತವಾಯಿತು.
ಮೇಯರ್ ಅಜಯ್ ಕುಮಾರ್ ಮಾತನಾಡಿ, 60 ಅಡಿ ರಸ್ತೆಯನ್ನು ಅಗಲೀಕರಣ ಮಾಡಿದರೆ ಮುಂದಿನ ಜನಾಂಗಕ್ಕೆ ಒಂದು ಕೊಡುಗೆ ನೀಡಿದಂತೆ ಆಗುತ್ತದೆ. ಜೊತೆಗೆ ಬಹಳ ದಿನಗಳ ಕನಸು ಈಡೇರಿದಂತೆ ಆಗುತ್ತದೆ ಎಂದರು.
ನೆನೆಗುದಿಗೆ ಬಿದ್ದದ್ದ ಈ ಕಾರ್ಯಕ್ಕೆ ಕಾಯಕಲ್ಪ ನೀಡಲು ಎಲ್ಲರೂ ಸಹಕಾರ ನೀಡಬೇಕಾಗಿ ಕೋರಿದ ಅವರು, ತಮ್ಮ ಸಹಕಾರದಿಂದ ನಗರವನ್ನು ಸುಂದರ ನಗರವನ್ನಾಗಿಸಲು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಸ್ಮಾರ್ಟ್ ಸಿಟಿಯಿಂದ ನಡೆಯುತ್ತಿರುವ ಚರಂಡಿ ಕಾಮಗಾರಿಯು ಎರಡು ಸ್ಥಳಗಳಲ್ಲಿ ಕುಂಠಿತವಾಗಿದ್ದು, ಮೊದಲು ಆ ಸ್ಥಳಗಳಲ್ಲಿ ಅತಿಕ್ರಮಣವನ್ನು ತೆರವುಗೊಳಿಸಿ ಚರಂಡಿ ಕಾಮಗಾರಿ ಪೂರ್ಣಗೊಳಿಸಿ ನಂತರ ರಸ್ತೆ ಅಗಲೀಕರಣ ಮಾಡುವುದು ಸೂಕ್ತ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹನುಮಂತರಾಯ, ಮಹಾನಗರ ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷರು, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರು, ಮಹಾನಗರ ಪಾಲಿಕೆ ಸದಸ್ಯರಾದ ಚಮನ್ಸಾಬ್, ಜಾಕೀರ್ ಅಲಿ, ಕಬೀರ್ ಖಾನ್, ಮುಖಂಡರಾದ ಸಾಧಿಕ್ ಪೈಲ್ವಾನ್, ಅಮಾನುಲ್ಲಾ ಖಾನ್, ಬುತ್ತಿ ಹುಸೇನ್ ಸೇರಿದಂತೆ ಮತ್ತಿತರರು ಹಾಜರಿದ್ದರು.