ನವದೆಹಲಿ, ಸೆ. 7 – ದೇಹದಲ್ಲಿ ಆಂಟಿಬಡಿಗಳು ಇದ್ದರೆ ಅದು ಕೊರೊನಾ ಸೋಂಕಿಗೆ ಗುರಿಯಾಗಿ ರುವುದನ್ನು ಸೂಚಿಸುತ್ತದೆಯೇ ವಿನಃ, ಅದರಿಂದ ರೋಗದಿಂದ ರಕ್ಷಣೆ ಸಿಗುವ ಗ್ಯಾರಂಟಿ ಇಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 42 ಲಕ್ಷ ದಾಟಿದೆ. ಪ್ರತಿನಿತ್ಯ 90 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಆಂಟಿಬಡಿಗಳು ಕೊರೊನಾದಲ್ಲಿ ಹೊಂದಿರುವ ಪಾತ್ರದ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದ್ದಾರೆ.
ಆಂಟಿಬಡಿಗಳ ಬಗ್ಗೆ ಹಲವಾರು ಅಧ್ಯಯನಗಳು ಹಾಗೂ ಸಿದ್ಧಾಂತಗಳು ಮೂಡಿ ಬಂದಿವೆಯಾದರೂ, ಒಮ್ಮತ ರೂಪುಗೊಂಡಿಲ್ಲ. ಆಂಟಿಬಡಿಗಳು ದೇಹದಲ್ಲಿ ಕಂಡು ಬಂದರೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂಬುದನ್ನು ಮಾತ್ರ ಖಚಿತವಾಗಿ ಹೇಳಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆಂಟಿಬಡಿಗಳು ರೋಗ ನಿರೋಧಕತೆಯಲ್ಲಿ ಹೊಂದಿರುವ ಪಾತ್ರದ ಬಗ್ಗೆ ಕಾದು ನೋಡಲು ಬಯಸುವುದಾಗಿ ರೋಗ ನಿರೋಧಕ ಪರಿಣಿತ ಸತ್ಯಜಿತ್ ರಥ್ ಹೇಳಿದ್ದಾರೆ.
ನವದೆಹಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಮ್ಯುನಾಲಜಿ (ಎನ್.ಐ.ಐ.) ವಿಜ್ಞಾನಿಯಾಗಿ ರುವ ರಥ್, ಆಂಟಿಬಡಿಗಳಿಂದ ವ್ಯಕ್ತಿಗಳಲ್ಲಿನ ಸೋಂಕು ಯಾವ ಹಂತದಲ್ಲಿದೆ ಎಂಬ ಬಗ್ಗೆ ಯಾವುದೇ ಸುಳಿವು ಸಿಗುವುದಿಲ್ಲ ಎಂದಿದ್ದಾರೆ.
ದೇಹದಲ್ಲಿ ಎರಡು ರೀತಿಯ ಆಂಟಿಬಡಿಗಳಿರುತ್ತವೆ. ಕೆಲವು ನ್ಯೂಟ್ರಲೈಸಿಂಗ್ ಆಂಟಿಬಡಿಗಳು (ಎನ್ಎಬಿಎಸ್) ಹಾಗೂ ಕೆಲವು ಸಾಮಾನ್ಯ ಆಂಟಿಬಡಿ ಆಗಿರುತ್ತವೆ. ಎನ್ಎಬಿಎಸ್ಗಳು ಕೊರೊನಾ ಹರಡುವುದನ್ನು ತಡೆಯುತ್ತವೆ. ಉಳಿದಂತೆ ಸಾಮಾನ್ಯ ಆಂಟಿಬಡಿಗಳು ರೋಗ ಬಂದಿರುವುದನ್ನಷ್ಟೇ ಸೂಚಿಸುತ್ತವೆ ಎಂದು ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಎಜುಕೇಷನ್ ಹಾಗೂ ರೀಸರ್ಚ್ (ಐಐಎಸ್ಇಆರ್)ನ ವಿನೀತಾ ಬಾಲ್ ಹೇಳಿದ್ದಾರೆ.
ಎನ್ಎಬಿಎಸ್ಗಳು ಸಾಕಷ್ಟಿದ್ದರೆ ಹಾಗೂ ಬ ಹಳ ಕಾಲ ಇದ್ದರೆ ಮಾತ್ರ ವೈರಸ್ ಮತ್ತೊಮ್ಮೆ ಬರುವುದನ್ನು ತಡೆಯಬಹುದು ಎಂದು ಭಾವಿಸಬಹುದಾಗಿದೆ ಎಂದು ಬಾಲ್ ಹೇಳಿದ್ದಾರೆ.
ಎಷ್ಟು ಹಂತದ ಎನ್ಎಬಿಎಸ್ ಇದ್ದರೆ ರೋಗ ತಡೆಯಲು ಸಾಧ್ಯ ಎಂಬುದರ ಬಗ್ಗೆ ಒಮ್ಮತವಿಲ್ಲ. ಪ್ಲಾಸ್ಮಾ ಥೆರಪಿಯ ಉಪಯುಕ್ತತೆಯೂ ಸ್ಪಷ್ಟವಾಗಿಲ್ಲ ಎಂದೂ ಅವರು ತಿಳಿಸಿದ್ದಾರೆ.
ದೇಶದಲ್ಲಿ ಇತ್ತೀಚೆಗೆ ಹಲವಾರು ಸೆರೋ ಸರ್ವೇಗಳನ್ನು ನಡೆಸುವ ಮೂಲಕ ವ್ಯಕ್ತಿಗಳ ದೇಹದಲ್ಲಿರುವ ಆಂಟಿಬಡಿಗಳನ್ನು ಪತ್ತೆ ಮಾಡಲಾಗುತ್ತಿದೆ. ಆಂಟಿಬಡಿಗಳು ಇರುವ ವ್ಯಕ್ತಿಗಳ ಸಂಖ್ಯೆಯನ್ನು ಆಧರಿಸಿ ರೋಗ ಹರಡಿರುವ ಪ್ರಮಾಣವನ್ನು ಗುರುತಿಸಲಾಗುತ್ತಿದೆ.
ಇದುವರೆಗೂ ನಡೆಸಲಾಗಿರುವ ಕೊರೊನಾ ಟೆಸ್ಟ್ಗಳಲ್ಲಿ ಬಹುತೇಕವು ಪಾಸಿಟಿವ್ ಇಲ್ಲವೇ ನೆಗೆಟಿವ್ ಗುರುತಿಸುವ ಉದ್ದೇಶ ಮಾತ್ರ ಹೊಂದಿವೆ. ಆಂಟಿಬಡಿಗಳ ಹಂತ ಹಾಗೂ ಅದರಿಂದ ರೋಗದಿಂದ ರಕ್ಷಣೆ ದೊರೆಯುವ ಬಗ್ಗೆ ಅಧ್ಯಯನ ನಡೆದಿಲ್ಲ. ಹೀಗಾಗಿ ಆಂಟಿಬಡಿಗಳ ಕಾರಣದಿಂದ ರೋಗದಿಂದ ರಕ್ಷಣೆ ಸಿಗುವ ಬಗ್ಗೆ ಸ್ಪಷ್ಟವಾಗಿ ಹೇಳಲಾಗದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ನಡುವೆ, ವಿಶ್ವದ ಹಲವೆಡೆಗಳಿಂದ ವ್ಯಕ್ತಿಗಳಿಗೆ ಎರಡನೇ ಬಾರಿಗೆ ಕೊರೊನಾ ಸೋಂಕು ಬಂದ ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದಾಗಿ ಆಂಟಿಬಡಿಗಳ ಮೂಲಕ ಕೊರೊನಾದಿಂದ ರಕ್ಷಣೆ ಸಿಗಬಹುದು ಎಂಬ ಆಶಾಭಾವನೆಗೆ ಧಕ್ಕೆಯಾಗುತ್ತಿದೆ.
ಈ ಬಗ್ಗೆ ಹೆಚ್ಚಿನ ವಿವರ ನೀಡಿರುವ ವಿನೀತಾ ಬಾಲ್, ಮತ್ತೆ ಸೋಂಕು ಬಂದಿತು ಎಂಬ ಮಾತ್ರಕ್ಕೆ ವ್ಯಕ್ತಿಗಳು ಅಸ್ವಸ್ಥರಾಗುವುದಿಲ್ಲ ಎಂದಿದ್ದಾರೆ.
ಮೊದಲು ಸೋಂಕು ಬಂದ ವ್ಯಕ್ತಿಗಳಲ್ಲಿ ಆಂಟಿಬಡಿಗಳು ಇಲ್ಲವಾದರೂ ಸಹ, ‘ರಕ್ಷಣಾತ್ಮಕ ರೋಗ ನಿರೋಧಕತೆ’ ಇರುತ್ತದೆ. ಇದು ನಂತರದ ಮರು ಸೋಂಕು ಎದುರಿಸಲು ನೆರವಾಗುತ್ತದೆ. ಇದರಿಂದಾಗಿ ರೋಗದ ತೀವ್ರತೆ ಹಾಗೂ ಸಾವು ತಪ್ಪಿಸಲು ನೆರವಾಗುತ್ತದೆ ಎಂದವರು ಹೇಳಿದ್ದಾರೆ.