ದಾವಣಗೆರೆ, ಸೆ. 7 – ದಾವ ಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಹಾಗೂ ಬಾಪೂಜಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪ ಅವರಿಗೆ ಕೇಂದ್ರ ಹಣಕಾಸು ಇಲಾಖೆಯ ನೇರ ತೆರಿಗೆಯ ಕೇಂದ್ರೀಯ ಮಂಡಳಿಯು ‘ಪ್ಲಾಟಿನಂ’ ಪುರಸ್ಕಾರದ ಮಾನ್ಯತೆ ನೀಡಿದೆ. 2019-20ರ ಅಸೆಸ್ ಮೆಂಟ್ ವರ್ಷದಲ್ಲಿ ಸಮಯಕ್ಕೆ ಸರಿಯಾಗಿ ಸಮರ್ಪಕವಾಗಿ ತೆರಿಗೆ ಪಾವತಿಸಿರುವುದಕ್ಕೆ ಈ ಗೌರವ ಪ್ರದಾನ ಮಾಡಿರುವುದಾಗಿ ಮಂಡಳಿಯ ಅಧ್ಯಕ್ಷ ಪಿ.ಸಿ. ಮೋಡಿ ಅವರು ಪ್ರಶಂಸಾ ಪತ್ರದಲ್ಲಿ ತಿಳಿಸಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ಸರ್ಕಾರ ತೆರಿಗೆದಾರರಿಗೆ ಉತ್ತೇಜನ ನೀಡುವ ಸಲುವಾಗಿ ಗೌರವ ಪ್ರಮಾಣ ಪತ್ರ ನೀಡುವ ಯೋಜನೆಯನ್ನು ಈ ಹಿಂದೆ ಆರಂಭಿಸಿತ್ತು.
ಅದರ ಅನ್ವಯ ತೆರಿಗೆ ಪಾವತಿಯ ಮೊತ್ತ ಸೇರಿದಂತೆ ಕೆಲ ಅಂಶಗಳನ್ನು ಆಧರಿಸಿ ಪುರಸ್ಕಾರದ ಪತ್ರ ನೀಡುತ್ತಾ ಬರಲಾಗಿದೆ. 1 ಕೋಟಿ ರೂ.ಗಳಿಗೂ ಹೆಚ್ಚಿನ ಆದಾಯ ತೆರಿಗೆ ಪಾವತಿಸುವವರು ಪ್ಲಾಟಿನಂ ಗೌರವ ಪಡೆಯುವ ಅವಕಾಶ ಪಡೆದುಕೊಳ್ಳುತ್ತಾರೆ. ಬಂಗಾರ, ಬೆಳ್ಳಿ ಹಾಗೂ ಕಂಚಿನ ಪ್ರಶಂಸಾ ಪತ್ರಗಳನ್ನೂ ಸಹ ಇಲಾಖೆ ಪ್ರದಾನ ಮಾಡುತ್ತದೆ.