ದಾವಣಗೆರೆ. ಸೆ.7- ಮೇಲಾಧಿಕಾರಿಗಳ ಕಿರುಕುಳದ ಹಿನ್ನೆಲೆಯಲ್ಲಿ ಜೀವನ ನಿರ್ವಹಣೆಗಾಗಿ ಆಟೋ ಚಾಲನೆ ಮಾಡುತ್ತಿರುವ ವೈದ್ಯ ಎಂ.ಹೆಚ್. ರವೀಂದ್ರನಾಥ್ ಅವರಿಗೆ ಐಎಂಎ ದಾವಣಗೆರೆ ಸಂಘ ಬೆಂಬಲಿಸುವ ಜೊತೆಗೆ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಐಎಂಎ ಪದಾಧಿಕಾರಿ ಡಾ. ಜಯಂತ್ ತಿಳಿಸಿದರು.
ಅಧಿಕಾರಿಗಳ ಬೇಜವಾಬ್ದಾರಿತನದಿಂದ ರವೀಂದ್ರ ಅವರು ಸಾಕಷ್ಟು ತೊಂದರೆ ಅನುಭ ವಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಸಂಘದಿಂದ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಿದ್ದೇವೆ ಎಂದು ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವೈದ್ಯ ಡಾ. ರವೀಂದ್ರನಾಥ್ ಮಾತನಾಡಿ, ಬಳ್ಳಾರಿಯಲ್ಲಿ ಆರ್ಸಿಎಚ್ ಆಗಿ ಕೆಲಸ ಮಾಡುತ್ತಿದ್ದ ವೇಳೆ ಆಗಿನ ಐಎಎಸ್ ಅಧಿಕಾರಿಯೊಬ್ಬರು ಕಾನೂನು ಪ್ರಕ್ರಿಯೆ ವಿಚಾರದಲ್ಲಿ ನನ್ನ ಮೇಲೆ ಸಿಟ್ಟಿಗೆದ್ದು ಕಿರುಕುಳ ನೀಡಲು ಪ್ರಾರಂಭಿಸಿದ್ದರು. ಅವರು ವರ್ಗವಾದ ನಂತರ ಬಂದ ಅಧಿಕಾರಿಗೂ ನನ್ನ ಬಗ್ಗೆ ಇಲ್ಲ-ಸಲ್ಲದ್ದನ್ನು ಹೇಳಿ ಅವರೂ ಸಹ ನನಗೆ ಕಿರುಕುಳ ನೀಡುವಂತೆ ಮಾಡಿದರು. ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಲಸಿಕಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಟೆಂಡರ್ ಟೆಕ್ನಿಕಲ್ ಬಿಡ್ ಇವ್ಯಾಲುಯೇಷನ್ ಸಂಬಂಧ ದಾಖಲೆ ಇಲ್ಲ ಎಂಬ ಕಾರಣಕ್ಕೆ 2019ರ ಜೂನ್ 6ರಂದು ಅಮಾನತ್ತುಗೊಳಿಸಲಾಯಿತು. ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಕ್ಲರ್ಕ್ ಮಾಡಿದ ತಪ್ಪಿಗೆ ನನ್ನನ್ನು ಗುರಿ ಮಾಡಿ ಅಮಾನತ್ತು ಮಾಡಲಾಯಿತು ಎಂದು ನೋವು ತೋಡಿಕೊಂಡರು.
ಅಮಾನತ್ತು ಆದ ನಾಲ್ಕು ದಿನಗಳಲ್ಲೇ ಬೆಳಗಾವಿಯ ಕೆಎಟಿಯ ಮೊರೆ ಹೋದೆ. ಎಲ್ಲಾ ದಾಖಲೆಗಳನ್ನು ಒದಗಿಸಿದೆ. ತೀರ್ಪು ನನ್ನ ಪರವಾಗಿ ಬಂತು. ಆಗ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕು ಆಸ್ಪತ್ರೆಗೆ ನಿಯೋಜನೆ ಮಾಡಲಾಯಿತು. ಪುನಃ ಡಿಸೆಂಬರ್ ತಿಂಗಳಲ್ಲಿ ಕೆಎಟಿ ಮೊರೆ ಹೋದೆ. 2020ರ ಜನವರಿಯಲ್ಲಿ ತೀರ್ಪು ಬಂದಿದ್ದು, ಉನ್ನತ ಅಧಿಕಾರಿಗಳು ನನಗೆ ಇಲ್ಲಿಯವರೆಗೂ ಜಿಲ್ಲಾ ಮಟ್ಟದ ಹುದ್ದೆ ತೋರಿಸಿಲ್ಲ. ಎರಡು ಬಾರಿ ಕೋರ್ಟ್ ನಲ್ಲಿ ತೀರ್ಪು ಬಂದಿದೆ. ಅದರ ಪ್ರಕಾರ ನನಗೆ ಪೋಸ್ಟಿಂಗ್ ಕೊಟ್ಟಿಲ್ಲ. ಹಣ ನೀಡದೇ ಇದ್ದರೆ ಪೋಸ್ಟಿಂಗ್ ನೀಡುವುದಿಲ್ಲ. ಅಧಿಕಾರಿಗಳ ಕಾಟಕ್ಕೆ ಬೇಸತ್ತು ಜೀವನೋಪಾಯಕ್ಕಾಗಿ ಆಟೊ ಓಡಿಸುತ್ತಿದ್ದೇನೆ. 24 ವರ್ಷ ಸೇವೆ ಸಲ್ಲಿಸಿದ್ದೇನೆ. 15 ತಿಂಗಳ ವೇತನ ನೀಡಿಲ್ಲ. ನನಗೆ ಜಿಲ್ಲಾ ಮಟ್ಟದ ಹುದ್ದೆ ನೀಡಬೇಕು. ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕೋರ್ಟ್ ಗೆ ಮೊರೆ ಹೋಗಿದ್ದೇನೆ ಎಂದರು.