ಎಸ್ಸಿ ಮೋರ್ಚಾ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ
ದಾವಣಗೆರೆ, ಸೆ. 7 – ಎಲ್ಲರನ್ನೂ ಮೆಚ್ಚಿಸುವ ರೀತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಒಳಮೀಸಲಾತಿ ವಿಷಯವನ್ನು ಇತ್ಯರ್ಥಪಡಿಸಲಾಗುವುದು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಘಟಕದ ರಾಜ್ಯಾಧ್ಯಕ್ಷ ಎ. ಛಲವಾದಿ ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಒಳಮೀಸಲಾತಿ ಚರ್ಚೆ ಹೊಸದಲ್ಲ. ಒಳ ಮೀಸಲಾತಿ ಕೇಳುವುದು ಸಹಜ. ಸದಾಶಿವ ಆಯೋಗದ ವರದಿ, ಹೋರಾಟಗಳು – ಒತ್ತಡ ಎಲ್ಲವನ್ನೂ ಸರ್ಕಾರ ಗಮನಿಸುತ್ತಿದೆ. ಸಾಧಕ – ಬಾಧಕಗಳನ್ನು ಗಮನಿಸಿ ಎಲ್ಲರಿಗೂ ನ್ಯಾಯ ಒದಗಿಸುವ ರೀತಿಯಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರ ಮೀಸಲಾತಿ ಪ್ರಕಟಿಸಿದೆ. ಆದರೆ, ಶೇ.50ರ ಮೀಸಲಾತಿ ಮಿತಿ ಇರುವುದರಿಂದ ಇದನ್ನು ಜಾರಿಗೆ ತರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮೇಲ್ವರ್ಗದ ಆರ್ಥಿಕ ಹಿಂದುಳಿದವರಿಗೂ ಮೀಸಲಾತಿ ಕಲ್ಪಿಸಿರುವುದರಿಂದ ಇಂದು ಮೀಸಲಾತಿ ಹೊರತು ಪಡಿಸದ ಯಾವ ಜಾತಿಯೂ ಇಲ್ಲದಂತಾಗಿದೆ. ಎಲ್ಲರೂ ಭೇದ ಭಾವ ಇಲ್ಲದೇ ಮೀಸಲಾತಿಗೆ ಬಂದಿರುವುದು ತಮಗೆ ಸಮಾಧಾನ ತಂದಿದೆ ಎಂದರು.
ಮೀಸಲಾತಿಗೆ ಸುಪ್ರೀಂ ಕೋರ್ಟ್ ಶೇ.50ರ ಮಿತಿ ನಿಗದಿ ಪಡಿಸಿದೆ. ಆದರೆ, ತಮಿಳುನಾಡಿನಲ್ಲಿ ಶೇ.69ರ ಮೀಸಲಾತಿಯವರೆಗೂ ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ಈ ಎಲ್ಲ ವಿಷಯಗಳನ್ನು ಪರಿಗಣಿಸಿ, ಮೀಸಲಾತಿ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನಾರಾಯಣ ಸ್ವಾಮಿ ಹೇಳಿದರು. ಇತ್ತೀಚಿನ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ದಲಿತರ ಸಂಖ್ಯೆಯೇ ಎಲ್ಲರಿಗಿಂತ ಹೆಚ್ಚಾಗಿದೆ. ದಲಿತರು ಒಗ್ಗಟ್ಟಾದರೆ ನಾವೇ ನಿರ್ಣಾಯಕರಾಗುತ್ತೇವೆ. ಹೀಗಾಗಿ ದಲಿತರನ್ನು ಬಿಜೆಪಿ ಪರವಾಗಿ ಸಂಘಟಿಸುತ್ತಿರುವುದಾಗಿ ಹೇಳಿದ ಅವರು, ಮುಂದಿನ ಬಾರಿ ಬಿಜೆಪಿ ದಲಿತ ಮತದಾರರ ನೆರವಿನೊಂದಿಗೆ 150 ರಿಂದ 170 ಸ್ಥಾನಗಳನ್ನು ಪಡೆದು, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬಸವರಾಜ ನಾಯ್ಕ, ಜಿಲ್ಲಾಧ್ಯಕ್ಷ ಹನುಮಂತ ನಾಯ್ಕ, ಬಿಜೆಪಿ ಮುಖಂಡರಾದ ಮಂಜಾನಾಯ್ಕ, ಅಂಜಿನಪ್ಪ, ಜಿ.ವಿ. ಗಂಗಾಧರ, ನಾಗರಾಜ ಲೋಕಿಕೆರೆ ಮತ್ತಿತರರು ಉಪಸ್ಥಿತರಿದ್ದರು.