ಮೊದಲ ಹಂತದಲ್ಲಿ ಪ್ರತಿ ತಾಲ್ಲೂಕಿನ 8 ಗ್ರಾಮ ಆಯ್ಕೆ: ಜಿ.ಪಂ.ಸಿಇಒ
ದಾವಣಗೆರೆ, ಸೆ. 6- ಗ್ರಾಮೀಣ ಪ್ರದೇಶ ದಲ್ಲಿ ವಾಸಿಸುವ ಭೂಮಿಯನ್ನು ಗುರುತಿಸಿ ದಾಖಲಾತಿ ಗಳನ್ನು ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸ್ವಾಮಿತ್ವ ಯೋಜನೆ ಮಹತ್ವಪೂರ್ಣವಾಗಿದ್ದು, ದಾವಣಗೆರೆಯೂ ಸೇರಿದಂತೆ ರಾಜ್ಯದ 16 ಜಿಲ್ಲೆಗಳಲ್ಲಿ ಈ ಯೋಜನೆ ಆರಂಭಿಸಲಾಗಿದೆ ಎಂದು ಜಿ.ಪಂ. ಸಿಇಒ ಪದ್ಮಾ ಬಸವಂತಪ್ಪ ಮಾಹಿತಿ ನೀಡಿದರು.
ಆರಂಭಿಕವಾಗಿ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಈ ಯೋಜನೆಗೆ 8 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆಯ್ದ ಗ್ರಾಮಗಳಲ್ಲಿ ಯೋಜನೆ ಬಗ್ಗೆ ಅರಿವು ಮೂಡಿಸಲು ಈಗಾಗಲೇ ಗ್ರಾಮ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನರ ನಿಜ ಆಸ್ತಿ ಮೌಲ್ಯವನ್ನು ಮಾಪನ ಮಾಡಲಾಗುವುದು. ನಂತರ ಡ್ರೋನ್ನಲ್ಲಿ ಅಳತೆ ಕಾರ್ಯವನ್ನು ಮಾಡಲಾಗುವುದು. ಈ ಸಮಗ್ರ ಮಾಹಿತಿಯನ್ನು ಪಿ.ಆರ್. ಕಾರ್ಡ್ನಲ್ಲಿ ನಮೂದಿಸಿ ನೀಡಲಾಗುವುದು. ಆಸ್ತಿ ವಾರಸುದಾರರಿಗೆ ಪಿ.ಆರ್.ಕಾರ್ಡ್ ದಾಖಲಾತಿಯಲ್ಲಿ ವ್ಯತ್ಯಾಸ ಕಂಡಲ್ಲಿ ಅಥವಾ ಆಸ್ತಿಯಲ್ಲಿ ವಿವಾದ ಇದ್ದಲ್ಲಿ ಅದನ್ನು ವಿಚಾರಣಾಧಿಕಾರಿಗಳಿಗೆ ಅರ್ಜಿ ನೀಡಿ ಬಗೆಹರಿಸಿಕೊಳ್ಳಬಹುದು ಎಂದರು.
ಈ ಮೊದಲು ಗ್ರಾಮದಲ್ಲಿರುವ ಭೂಮಿಗಳ ಮೇಲೆ ಬ್ಯಾಂಕ್ ಲೋನ್ ನೀಡಲಾಗುತ್ತಿರಲಿಲ್ಲ. ಈ ಯೋಜನೆ ಜಾರಿಗೆ ಬರುತ್ತಿದ್ದಂತೆ ನಾಗರಿಕರು ತಮ್ಮ ಗ್ರಾಮದ ಆಸ್ತಿ-ಪಾಸ್ತಿಗಳ ಮೇಲೂ ಕೂಡ ಸಾಲವನ್ನು ಪಡೆಯಬಹುದಾಗಿದೆ ಎಂದರು.
ರಸ್ತೆ ಮೇಲೆ ಕೇಜ್ ವ್ಹೀಲ್ ಓಡಿಸಿದರೆ ಕ್ರಮ
ರಸ್ತೆ ಮೇಲೆ ರೈತರು ಟ್ರ್ಯಾಕ್ಟರ್ಗೆ ಕೇಜ್ ವ್ಹೀಲ್ ಅಳವಡಿಸಿ ಓಡಿಸುವುದರಿಂದ ರಸ್ತೆಗಳು ಹಾಳಾಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಕೇಜ್ ವ್ಹೀಲ್ ಬಳಸಿ ರೈತರು ತಮ್ಮ ಊರಿನ ರಸ್ತೆಗಳನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ. ನಂತರ ರಸ್ತೆ ನಿರ್ಮಿಸಿಕೊಡಿ ಎನ್ನುತ್ತಾರೆ. ಇದಕ್ಕೆ ಪರಿಹಾರವೇನು? ಎಂದು ಸಿದ್ದೇಶ್ವರ್ ಅಧಿಕಾರಿಗಳನ್ನು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಕೇಜ್ ವ್ಹೀಲ್ ಬಳಸಿ ರಸ್ತೆ ಹಾಳು ಮಾಡುವವರಿಗೆ ಪಿಎಆರ್ಡಿ ಕಚೇರಿಯಿಂದ ಎರಡು ಬಾರಿ ನೋಟೀಸ್ ಕಳುಹಿಸಿ, ಮೂರನೇ ಬಾರಿ ದಂಡ ವಿಧಿಸಬಹುದು ಎಂದು ಅಭಿಪ್ರಾಯಿಸಿದರು.
ಗ್ರಾಮ ಪಂಚಾಯ್ತಿ ವತಿಯಿಂದ ಪೊಲೀಸ್ ದೂರು ದಾಖಲಿಸಿ ಬಿಗಿ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ನನ್ನ ಅವಧಿ ಮುಗಿಯುತ್ತೆ ಅನ್ಕೋಬೇಡಿ ಮತ್ತೆ ಬರ್ತೀನಿ
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ವಿವರ ನೀಡು ವಾಗ, ನಾನು ಬಂದು ಭೂಮಿ ಪೂಜೆ ಮಾಡುವವರೆಗೆ ಕಾಮಗಾರಿ ಕೆಲಸ ಆರಂಭಿಸು ವಂತಿಲ್ಲ ಎಂದು ಸಂಸದ ಸಿದ್ದೇಶ್ವರ ಸೂಚಿಸಿದರು.
ಮುಂದುವರೆದು ಮಾತನಾಡಿದ ಅವರು, ರಸ್ತೆ ಕಾಮಗಾರಿಗಳು ಕಳಪೆಯಾಗುವಂತಿಲ್ಲ. 5 ವರ್ಷ ಗುತ್ತಿಗೆದಾರರೇ ನಿರ್ವಹಣೆ ವಹಿಸಿಕೊಳ್ಳಬೇಕು. ಗುಂಡಿಗಳು ಬಿದ್ದರೆ ಪ್ರತಿ ವರ್ಷ ಗುಂಡಿ ಮುಚ್ಚಿಸಿ ನಾಮಫಲಕ ಹಾಕಬೇಕು. ಆರನೇ ವರ್ಷ ಮತ್ತೆ ಟಾರ್ ರಸ್ತೆ ನಿರ್ಮಿಸಬೇಕು ಎಂದು ಹೇಳಿದರು.
ನನ್ನ ಅವಧಿ ಇನ್ನೂ ಮೂರು ಮುಕ್ಕಾಲು ವರ್ಷ ಅಷ್ಟೇ ಎಂದು ನಿರ್ಲಕ್ಷ್ಯ ವಹಿಸಬೇಡಿ ನಾನು ಮತ್ತೆ ಬರ್ತೀನಿ ಎಂದರು.
ನಗರದಲ್ಲಿ ಕಸ ಕಂಡರೆ ಆಯುಕ್ತರೇ ಜವಾಬ್ದಾರಿ
ನಗರದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾದರೂ ಕಸ ಕಂಡುಬಂದರೆ ನೀವೇ ನೇರ ಜವಾಬ್ದಾರರಾಗುತ್ತೀರಿ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಅವರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಎಚ್ಚರಿಕೆ ನೀಡಿದರು.
ಸ್ವಚ್ಛತೆ ನಿರ್ವಹಣೆಯಲ್ಲಿ ದಾವಣಗೆರೆ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದ ಅವರು, ಎಸ್ಡಬ್ಲ್ಯೂಎಂ ಯೋಜನೆಯಡಿಯಲ್ಲಿ ಕಸ ವಿಲೇವಾರಿಯ ಹಣದ ಕುರಿತು ಸರಿಯಾದ ಮಾಹಿತಿ ನೀಡಬೇಕು. ಕಾಂಪೋಸ್ಟ್ ಮಾರಾಟ ಮಾಡಿದ ಹಣ ಎಲ್ಲಿಗೆ ಜಮೆಯಾಗಿದೆ ಎಂದು ತಿಳಿಸಬೇಕು ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆಯಿಂದ ಹಳ್ಳಿಗರಿಗೆ ತುಂಬಾ ಅನುಕೂಲವಾಗಲಿದ್ದು, ಸರ್ವೇ ಕಾರ್ಯವನ್ನು ಒಂದು ವರ್ಷಗಳ ವರೆಗೆ ನಡೆಸದೆ, 6 ತಿಂಗಳ ಒಳಗೆ ಮುಗಿಸುವಂತೆ ಸೂಚಿಸಿದರು.
ಆಯುಷ್ಮಾನ್ ಕಾರ್ಡ್ ಚರಂಡಿಗೆ ಎಸೆದವರನ್ನು ಸಸ್ಪೆಂಡ್ ಮಾಡಿ: ಎಲೆ ಬೇತೂರು ಬಳಿ ಆಯುಷ್ ಮಾನ್ ಕಾರ್ಡ್ಗಳನ್ನು ಚರಂಡಿಗೆ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸಂಸದರು ಅಂಚೆ ಕಚೇರಿಯ ಸಹಾಯಕ ಅಧೀಕ್ಷಕರನ್ನು ಪ್ರಶ್ನಿಸಿದರು.
ಆಯುಷ್ಮಾನ್ ಕಾರ್ಡ್ ಗಳನ್ನು ತಿಪ್ಪೆಗೆಸದು ಇಬ್ಬರು ಕರ್ತವ್ಯಲೋಪ ಮಾಡಿದ ಕಾರಣಕ್ಕಾಗಿ ಅವರ ಮೇಲೆ ಚಾರ್ಜ್ ಶೀಟ್ ಹಾಕಲು ಹೇಳಿರುವುದಾಗಿ ಅಧೀಕ್ಷಕರು ಉತ್ತರಿಸಿದರು.
ಬೇತೂರು ಪೋಸ್ಟ್ ಮಾಸ್ಟರ್ ಕಾರ್ಯವೈಖರಿ ಕುರಿತು ಅಸಮಾಧಾನಗೊಂಡ ಸಿದ್ದೇಶ್ವರ್, ಬಡವರಿಗೆ ತಲುಪಬೇಕಾದ ಕಾರ್ಡ್ ತಿಪ್ಪೆಗೆ ಹಾಕಿದವರನ್ನು ಸಸ್ಪೆಂಡ್ ಮಾಡಿ ಎಂದು ಅಧಿಕಾರಿಗೆ ಸೂಚಿಸಿದರು. ಈ ಬಗ್ಗೆ ಪೊಲೀಸ್ ಇಲಾಖೆಯಲ್ಲೂ ಎಫ್ಐಆರ್ ಆಗಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಅಧಿಕಾರಿಗಳೇ ಹೊಣೆ: ಜುಲೈನಿಂದ ವೃದ್ಧಾಪ್ಯ ವೇತನ, ಅಂಗವಿಲಕರ ವೇತನ ಬಂದಿಲ್ಲ ಎಂದು ಫಲಾನುಭವಿಗಳು ದೂರಿದರೆ ಅಧಿಕಾರಿಗಳೇ ಹೊಣೆ ಎಂದು ಸಂಸದರು ಹೇಳಿದರು. ಡಿಸೆಂಬರ್ ಒಳಗೆ ಯಾವ ವೇತನ ಗಳನ್ನೂ ಬಾಕಿ ಉಳಿಸಿಕೊಳ್ಳದಂತೆ ತಾಕೀತು ಮಾಡಿದರು.
ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳು ಮನೆ ಕಟ್ಟಿಕೊಳ್ಳದಿದ್ದರೆ ನೋಟೀಸ್ ನೀಡಿ ರದ್ದು ಮಾಡುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಖಾತ್ರಿ ಯೋಜನೆಯಲ್ಲಿ ಲೇಬರ್ ವರ್ಕ್ಗೆ ಹೆಚ್ಚಿನ ಒತ್ತು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಗೆ 40 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದೆ. ನಿನ್ನೆಯವರೆಗೆ 12.72 ಲಕ್ಷ ಮಾನವ ದಿನಗಳ ಬಳಕೆಯಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯದರ್ಶಿ ಆನಂದ್ ತಿಳಿಸಿದರು.
ಸಾಮಗ್ರಿ ಹಾಗೂ ಲೇಬರ್ ರೆಷ್ಯೂ ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಸಕ್ತ ವರ್ಷ ಲೇಬರ್ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ದೀಪಾ ಜಗದೀಶ್, ದಿಶಾ ಸಮಿತಿ ಸದಸ್ಯರು, ತಾ.ಪಂ. ಅಧ್ಯಕ್ಷರು, ಅಧಿಕಾರಿಗಳು ಉಪಸ್ಥಿತರಿದ್ದರು.