ದಾವಣಗೆರೆ ಕಳವಳಕಾರಿ ಜಿಲ್ಲೆ

ಟೆಸ್ಟ್, ಪರಿಶೀಲನೆ, ಆರೋಗ್ಯ ಕಾರ್ಯಕರ್ತರ ರಕ್ಷಣೆಗಾಗಿ ಕೇಂದ್ರ ಸೂಚನೆ

ನವದೆಹಲಿ, ಸೆ. 5 – ಕೊರೊನಾ ಸಾವುಗಳು ಅತಿ ಹೆಚ್ಚಾಗಿರುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ, ಸಾವಿನ ಸಂಖ್ಯೆ ಕಡಿಮೆ ಮಾಡಲು ತೀವ್ರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಅಲ್ಲದೇ, ಈ ರಾಜ್ಯಗಳಲ್ಲಿ ಯಾವ ಜಿಲ್ಲೆಗಳು ಕಳವಳಕಾರಿ ಪರಿಸ್ಥಿತಿಯಲ್ಲಿವೆ ಎಂಬುದನ್ನೂ ಸಹ ಕೇಂದ್ರ ಸರ್ಕಾರ ಗುರುತಿಸಿದ್ದು, ಅದರಲ್ಲಿ ದಾವಣಗೆರೆ ಜಿಲ್ಲೆಯೂ ಸೇರಿದೆ. 

ದಾವಣಗೆರೆ, ಕೊಪ್ಪಳ, ಮೈಸೂರು ಹಾಗೂ ಬಳ್ಳಾರಿ ಜಿಲ್ಲೆಗಳು ಆರ್.ಟಿ. – ಪಿಸಿಆರ್ ಪರೀಕ್ಷೆ ಸೌಲಭ್ಯಗಳನ್ನು ಗರಿಷ್ಠವಾಗಿ ಬಳಸಿಕೊಳ್ಳಬೇಕು, ಮನೆ – ಮನೆ ಪರಿಶೀಲನೆ ನಡೆಸಿ ಸಕ್ರಿಯ ಪ್ರಕರಣಗಳನ್ನು ಪತ್ತೆ ಮಾಡಬೇಕು ಹಾಗೂ ತಮ್ಮ ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸಿಕೊಳ್ಳಬೇಕು ಎಂದು ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಕಂಡು ಬಂದಿರುವ ಕೊರೊನಾ ಸೋಂಕುಗಳು ಹಾಗೂ ಸಾವುಗಳನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ ಈ ಸೂಚನೆ ನೀಡಿದ್ದು, ಕೊರೊನಾ ಹರಡುವ ಸರಣಿ ತುಂಡರಿಸಬೇಕು ಮತ್ತು ಸಾವಿನ ಪ್ರಮಾಣವನ್ನು ಶೇ.1ಕ್ಕಿಂತ ಕಡಿಮೆ ಹಂತಕ್ಕೆ ತರಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.

ಸಕ್ರಿಯವಾಗಿ ಟೆಸ್ಟ್‌ಗಳ ಸಂಖ್ಯೆ ಹೆಚ್ಚಿಸಬೇಕು ಹಾಗೂ ಸಾವಿನ ಸಂಖ್ಯೆ ಕಡಿಮೆ ಮಾಡಲು ಸೋಂಕಿತರಿಗೆ ದಕ್ಷವಾಗಿ ಚಿಕಿತ್ಸೆ ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಕಂಡು ಬಂದಿರುವ ಕೊರೊನಾ ಪ್ರಕರಣಗಳಲ್ಲಿ ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ಕರ್ನಾಟಕಗಳು ಮುಂಚೂಣಿ ಯಲ್ಲಿದ್ದು, ಇವುಗಳ ಪಾಲು ಶೇ.46ರಷ್ಟಾಗಿದೆ. ಸಾವುಗಳಲ್ಲೂ ಸಹ ಈ ರಾಜ್ಯಗಳು ಶೇ.52ರಷ್ಟು ಪಾಲು ಹೊಂದಿವೆ. 

ಈ ಮೂರು ರಾಜ್ಯಗಳು ಕೊರೊನಾ ಸಾವುಗಳಲ್ಲಿ ಶೇ.52ರಷ್ಟು ಪಾಲು ಹೊಂದಿವೆ. ಮಹಾರಾಷ್ಟ್ರ ಒಂದೇ ರಾಜ್ಯ ಸಾವಿನ ಶೇ.35ರಷ್ಟು ಪಾಲು ಹೊಂದಿದೆ ಎಂದು ಸಚಿವಾಲಯ ಹೇಳಿದೆ. ದೇಶದ ಒಟ್ಟು ಸಕ್ರಿಯ ಸೋಂಕಿತರಲ್ಲಿ ಐದು ರಾಜ್ಯಗಳು ಶೇ.60ಕ್ಕೂ ಹೆಚ್ಚು ಪಾಲು ಹೊಂದಿವೆ. ಇವುಗಳಲ್ಲಿ ಮಹಾರಾಷ್ಟ್ರ ಶೇ.25 ಸಕ್ರಿಯ ಸೋಂಕಿತರನ್ನು ಹೊಂದಿದೆ. ಶೇ.12.06ರೊಂದಿಗೆ ಆಂಧ್ರ ಪ್ರದೇಶ ಎರಡು ಹಾಗೂ ಶೇ.11.71 ಪ್ರಕರಣಗಳೊಂದಿಗೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಶೇ.6.92 ಪ್ರಕರಣಗಳನ್ನು ಹೊಂದಿರುವ ಉತ್ತರ ಪ್ರದೇಶ ನಾಲ್ಕು ಹಾಗೂ ಶೇ.6.10ರೊಂದಿಗೆ ತಮಿಳುನಾಡು ಐದನೇ ಸ್ಥಾನದಲ್ಲಿದೆ.

ಈ ಪೈಕಿ ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ಕರ್ನಾಟಕಗಳೇ ಶೇ.49ರಷ್ಟು ಸಕ್ರಿಯ ಪ್ರಕರಣಗಳ ಪಾಲು ಹೊಂದಿವೆ. ಶೇ.57ರಷ್ಟು ಕೊರೊನಾ ಸಾವುಗಳು ಇದೇ ರಾಜ್ಯಗಳಲ್ಲಿ ಸಂಭವಿಸಿವೆ. ಶನಿವಾರದಂದು ದೇಶದ ಒಟ್ಟು ಸೋಂಕಿತರ ಸಂಖ್ಯೆ 40,23,179ಕ್ಕೆ ತಲುಪಿದೆ. ಒಂದೇ ದಿನ ದಾಖಲೆಯ 86,432 ಸೋಂಕಿತರು ಕಂಡು ಬಂದಿದ್ದಾರೆ. ಸಾವಿನ ಸಂಖ್ಯೆ 69,561ಕ್ಕೆ ಏರಿಕೆಯಾಗಿದೆ.

error: Content is protected !!