ಕೊರೊನಾದಿಂದ ಸದ್ದಿಲ್ಲದೇ ಬಂದು ಮುಳುಗಿದ ವಿಘ್ನ ನಿವಾರಕ : ವಿಸರ್ಜನೆಗೊಂಡ ಹಿಂದೂ ಮಹಾಗಣಪತಿ

ದಾವಣಗೆರೆ, ಸೆ.5- ಕೊರೊನಾ ಮಹಾಮಾರಿ ಜನರ ಬದುಕಿಗೆ ಮಾರಕವಾಗಿದೆಯಲ್ಲದೇ, ವಿಘ್ನಗಳನ್ನು ನಿವಾರಿಸಬಲ್ಲ ಗಣಪತಿ ಹಬ್ಬಕ್ಕೆ ವಿಘ್ನಗಳನ್ನು ತಂದೊಡ್ಡಿತು. ಈ ಬಾರಿ ಗಣೇಶ ಹಬ್ಬದಂದು ವಿಘ್ನ ನಿವಾರಕ ಸದ್ದಿಲ್ಲದೇ ಬಂದು ಹಾಗೆಯೇ ವಿಸರ್ಜನೆಗೊಂಡನು.

ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾಗಣಪತಿ ಟ್ರಸ್ಟ್‌ನಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದ ಮೂರನೇ ವರ್ಷದ ಗಣಪತಿ ಮಹೋತ್ಸವಕ್ಕೆ ಇಂದು ತೆರೆ ಬಿದ್ದಿದೆ. ಯಾವುದೇ ಡಿಜೆ, ಬ್ಯಾಂಡ್‍ಸೆಟ್, ಜಾನಪದ ಕಲಾತಂಡ, ನಾದಸ್ವರ ಸದ್ದಿಲ್ಲದೇ ಸಂಭ್ರಮ-ಸಡಗರವಿಲ್ಲದೇ ಟ್ರ್ಯಾಕ್ಟರ್‍ನಲ್ಲಿ ಸರಳವಾಗಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು. ಶಾಂತಯ್ಯ ಹಿರೇಮಠ, ಶಿವಕುಮಾರ ಹಿರೇಮಠ ಗಣಪತಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಈ ಬಾರಿ ಕೊರೊನಾದಿಂದ ಗಣಪತಿ ಪ್ರತಿಷ್ಠಾಪನೆ ಒಂದೇ ದಿನಕ್ಕೆ ಸಿಮೀತಗೊಳಿಸಲಾಗಿತ್ತು. ಆದರೆ, ಟ್ರಸ್ಟ್‌ನ ಮನವಿಗೆ ಜಿಲ್ಲಾಡಳಿತ 13 ದಿನಗಳವರೆಗೆ ಗಣೇಶನ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಹಿಂದೂ ಮಹಾ ಗಣಪತಿಯನ್ನು ಸಂಜೆ ಟ್ರ್ಯಾಕ್ಟರ್‍ನಲ್ಲಿ ಗಣಪತಿ ಪ್ರತಿಷ್ಠಾಪಿಸಿ ಅಶೋಕ ರಸ್ತೆ ಮೂಲಕ ಪಿ.ಬಿ. ರಸ್ತೆಯಲ್ಲಿ ಸಾಗಿ ಬಾತಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

ಹಿಂದೂ ಮಹಾಗಣಪತಿ ಟ್ರಸ್ಟ್‌ ನ ಹಿರಿಯ ಕೆ.ಬಿ. ಶಂಕರನಾರಾಯಣ ಮಾತನಾಡಿದರು.

ಈ ಸಂದರ್ಭದಲ್ಲಿ ಮೇಯರ್ ಬಿ.ಜಿ. ಅಜಯ್‌ಕುಮಾರ್‌, ಮಾಜಿ ಎಂಎಲ್‍ಸಿ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಟ್ರಸ್ಟ್ ಅಧ್ಯಕ್ಷ ಜೊಳ್ಳಿ ಗುರು, ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್‌, ಮಾಜಿ ಸದಸ್ಯ ಡಿ.ಕೆ. ಕುಮಾರ್, ಶಿವಗಂಗಾ ಬಸವರಾಜ್‌, ಶ್ರೀನಿ ವಾಸ್ ದಾಸಕರಿಯಪ್ಪ, ಅಜ್ಜಂಪುರ ಮೃತ್ಯುಂ ಜಯ, ಎಂ.ಜಿ. ಶ್ರೀಕಾಂತ, ವಕೀಲ ರಾಘ ವೇಂದ್ರ, ಚಿಕ್ಕಿ ಮಂಜು, ಇಂಡಿ ಬಸವರಾಜ್‌, ರಾಘವೇಂದ್ರ ಚವಾಣ್, ನವೀನ್, ದೀಪಕ್ ಸೇರಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು ಮಾತ್ರ‌ ಇದ್ದರು. ಕೊರೊನಾ ಮುಂಜಾಗ್ರತೆಗಾಗಿ ಸಾರ್ವಜನಿಕರಿಗೆ ಮೆರವಣಿಗೆಯಲ್ಲಿ ಅವಕಾಶ ನೀಡಿರಲಿಲ್ಲ.‌

ಡಿಎಸ್ಪಿ ನಾಗೇಶ್‌ ಐತಾಳ್‌, ಮಲೇಬೆನ್ನೂರು ಎಸ್‍ಐ ವೀರಬಸಪ್ಪ ಕುಸಲಾಪುರ, ಬಸವನಗರ, ಬಡಾವಣೆ ಪೊಲೀಸ್ ಠಾಣೆ ಸಿಬ್ಬಂದಿ, ಸಂಚಾರಿ ಪೊಲೀಸ್ ಅಧಿಕಾರಿಗಳು ಮೆರವಣಿಗೆಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದರು.

error: Content is protected !!