ಅಧಿವೇಶನ ಮುಗಿಯುವುದರೊಳಗೆ ಎಸ್ಟಿ ಮೀಸಲಾತಿ ಹೆಚ್ಚಿಸದಿದ್ದರೆ ಉಗ್ರ ಹೋರಾಟ

ಮಲೇಬೆನ್ನೂರು, ಸೆ.6- ವಿಧಾನಸಭೆ ಅಧಿವೇಶನ ಮುಗಿಯುವುದರೊಳಗೆ ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ.7.5 ಕ್ಕೆ ಹೆಚ್ಚಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುವುದು ಸೇರಿದಂತೆ ವಿವಿಧ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಕರೆದಿದ್ದ ರಾಜ್ಯ ಮಟ್ಟದ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಮೀಸಲಾತಿ ಹೆಚ್ಚಳಕ್ಕಾಗಿ ಒತ್ತಾಯಿಸಿ ನಾವು ರಾಜನಹಳ್ಳಿ ಮಠದಿಂದ ರಾಜಧಾನಿವರೆಗೆ ಕೈಗೊಂಡ ಪಾದಯಾತ್ರೆಯ ಬಹಿರಂಗ ಸಭೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಗುಟುರು ಹಾಕಿದ್ದೇವೆ. ಆದರೆ ಬಿಜೆಪಿ ಸರ್ಕಾರದ ಬಗ್ಗೆ ಸ್ವಾಮೀಜಿ ಗಡುಸಾಗಿ ಮಾತನಾಡುತ್ತಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ. ನಾವು ಯಾರ ಪರವಾಗಿಯೂ ಇಲ್ಲ, ಯಾರ ವಿರುದ್ಧವಾಗಿಯೂ ಇಲ್ಲ. ನಾವು ಸಮಾಜದ ಪರವಾಗಿದ್ದೇವೆ. ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಮತ್ತು ಸಂವಿಧಾನಿಕ ಹಕ್ಕು ಪಡೆಯಲು ಹೋರಾಟ ಮಾಡುತ್ತಿದ್ದೇವೆ. ನಮ್ಮ ಸಮಸ್ಯೆಗಳಿಗೆ ಯಾರು ಸ್ಪಂದಿಸುತ್ತಾರೋ ಅವರನ್ನು ನಾವು ಅಭಿನಂದಿಸುತ್ತೇವೆ. ಸ್ಪಂದಿಸದಿದ್ದರೆ ಹಕ್ಕಿಗಾಗಿ ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ ಎಂಬುದನ್ನು ಸರ್ಕಾರ ನಡೆಸುವವರು ಅರ್ಥ ಮಾಡಿಕೊಳ್ಳಬೇಕೆಂದು ಸ್ವಾಮೀಜಿ ಹೇಳಿದರು.

ಸಮ್ಮಿಶ್ರ ಸರ್ಕಾರ ಕೊಟ್ಟ ಮಾತಿನಂತೆ ಆಯೋಗ ರಚನೆ ಮಾಡಿತು. ಈಗಿನ ಸರ್ಕಾರಕ್ಕೆ ಆಯೋಗ ತನ್ನ ವರದಿ ನೀಡಿ ತಿಂಗಳು ಕಳೆದಿದೆ. ಅಲ್ಲದೆ ಈ ವಿಚಾರವಾಗಿ ನಾವು ಹಾಗೂ ಸಮಾಜದ ಸಚಿವರು, ಸಂಸದರು, ಶಾಸಕರು, ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಯಾವ ಹೋರಾಟ, ಒತ್ತಾಯ ಇಲ್ಲದಿದ್ದರೂ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10 ರಷ್ಟು ಮೀಸಲಾತಿ ನೀಡುವ ಈ ಸರ್ಕಾರ ನಮಗೆ ಎಕೆ ಸತಾಯಿಸುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಕಳೆದ ಫೆಬ್ರವರಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಮುಖ್ಯಮಂತ್ರಿಗಳು ಎಸ್ಟಿಗೆ ಪ್ರತ್ಯೇಕ ಸಚಿವಾಲಯ ಮಾಡುವ ಘೋಷಣೆ ಮಾಡಿದ್ದರು. ಅದನ್ನೂ ಮಾಡಿಲ್ಲ. ನಮ್ಮ ಸಮಾಜದ ಬಗ್ಗೆ ನೀವು ಮೀನಾಮೇಷ ಮಾಡಬೇಡಿ. ನೀವು ಈಗ ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಮುಂದೆ ನಾವು ನಿಮ್ಮನ್ನು ನಿರ್ಲಕ್ಷ ಮಾಡಬೇಕಾಗುತ್ತದೆ ಎಂದು ಸ್ವಾಮೀಜಿ ಬಿಜೆಪಿ ಸರ್ಕಾರಕ್ಕೆ ನೇರ ಸಂದೇಶ ನೀಡಿದರು.

ರಾಜ್ಯದಲ್ಲಿ ಎಸ್ಟಿ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವವರ ವಿರುದ್ಧ ಮತ್ತು ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರಿಗಳ ವಿರುದ್ಧ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕು. ಸಮಾಜಕ್ಕೆ ಸೇರಿದ ಧಾರವಾಡದ ಸರ್ವೋದಯ ಶಿಕ್ಷಣ ಸಂಸ್ಥೆಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಅಕ್ರಮ ಎಸಗಿರುವ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ವಿರುದ್ಧ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಬೇಕೆಂದು ಸ್ವಾಮೀಜಿ ಒತ್ತಾಯಿಸಿದರು.

ಶ್ರೀರಾಮನನ್ನು ರಾಮಾಯಣದ ಮೂಲಕ ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ ಅವರನ್ನು ನಿರ್ಲಕ್ಷ್ಯ ಮಾಡಿರುವ ಬಗ್ಗೆ  ಬೇಸರ ವ್ಯಕ್ತಪಡಿಸಿದ ಶ್ರೀಗಳು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಜೊತೆಗೆ ವಾಲ್ಮೀಕಿ ಮಂದಿರವನ್ನೂ ನಿರ್ಮಾಣ ಮಾಡುವಂತೆ ಒತ್ತಾಯಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ನಿಯೋಗ ಹೋಗುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಸುರಪುರ ಶಾಸಕ ರಾಜುಗೌಡ ಅವರು, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಲಿಂಗಸಗೂರಿನಲ್ಲಿ ನಡೆದ ಬಿಜೆಪಿ ಎಸ್ಟಿ ಸಮಾವೇಶದಲ್ಲಿ ಕೊಟ್ಟ ಮಾತಿನಂತೆ ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ. 7.5 ಕ್ಕೆ ಹೆಚ್ಚಿಸುವುದು ಮತ್ತು ವಾಲ್ಮೀಕಿ ಸಮಾಜಕ್ಕೆ ಡಿಸಿಎಂ ಸ್ಥಾನ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರ ನಮ್ಮ ನ್ಯಾಯಬದ್ಧ ಬೇಡಿಕೆ ಈಡೇರಿಸಬೇಕು. ಅದಕ್ಕಾಗಿ ನಾವು ಯಾವ ತ್ಯಾಗಕ್ಕೂ ಸಿದ್ದ ಎಂದರು.

ಶಾಸಕ ಕಂಪ್ಲಿ ಗಣೇಶ್‌ ಮಾತನಾಡಿ, ಮೀಸಲಾತಿ ಹೆಚ್ಚಳ ರಾಜಕೀಯ ತಿರುವು ಪಡೆಯುತ್ತಿರುವುದು ಬೇಸರ ತಂದಿದೆ. ರಾಜಕೀಯ ಲಾಭಕ್ಕಾಗಿ ಒಂದೊಂದು ಪಕ್ಷ ಒಂದೊಂದು ರೀತಿ ಹೇಳಿಕೆ ನೀಡಿ ಲಾಭ ಪಡೆದುಕೊಂಡು ಜವಾಬ್ದಾರಿ ಮರೆತಿದೆ ಎಂದರು.

ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ ಮಾತನಾಡಿ, ಮೀಸಲಾತಿ ಹೆಚ್ಚಳಕ್ಕಾಗಿ ಎಲ್ಲಾ ಪಕ್ಷದ, ಸಮಾಜದ ಶಾಸಕರು ಒಟ್ಟಾಗಿ ರಾಜೀನಾಮೆ ನೀಡಲು ಬದ್ದರಾಗಿದ್ದೇವೆ. ಆದರೆ ನಮ್ಮ ಮುಖ್ಯಮಂತ್ರಿಗಳು ಇದಕ್ಕೆ ಅವಕಾಶ ನೀಡದೆ ನಮ್ಮ ದಶಕಗಳ ಬೇಡಿಕೆ ಈಡೇರಿಸುತ್ತಾರೆಂಬ ನಂಬಿಕೆ ಇದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಸತೀಶ್‌ ಜಾರಕಿಹೊಳಿ ಮಾತನಾಡಿ, ಎಸ್ಟಿ ಸಮಾಜದ ಮೀಸಲಾತಿ ಹೆಚ್ಚಳದ ಹೋರಾಟ ಕಳೆದ 40 ವರ್ಷಗಳಿಂದ ನಡೆಯುತ್ತಾ ಬಂದಿದೆ. ಶ್ರೀಗಳು ಪಾದಯಾತ್ರೆ ನಡೆಸಿದ ನಂತರ ಹೋರಾಟಕ್ಕೆ ಬಲ ಬಂದು ಆಯೋಗ ರಚನೆಯಾಗಿ ಸರ್ಕಾರಕ್ಕೆ ವರದಿ ನೀಡಿದೆ.

ಶಾಸಕರ ರಾಜೀನಾಮೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಸಂವಿಧಾನಬದ್ಧವಾಗಿ ನಾವೆಲ್ಲರೂ ಒಟ್ಟಾಗಿ ನ್ಯಾಯ ಕೇಳೋಣ. ಶ್ರೀರಾಮುಲು ಅವರು ಜವಾಬ್ದಾರಿ ತೆಗೆದುಕೊಂಡು ಸಿಎಂ ಮನವೊಲಿಸಬೇಕೆಂದ ಅವರು, ಎಸ್ಟಿಗೆ ಸೇರ್ಪಡೆಯಾಗಲು ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಸರ್ಕಾರ ಎಸ್ಟಿಗೆ ಯಾರನ್ನೇ ಸೇರಿಸಿದರೂ ಅವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿ ಮಾಡಿ ಸೇರಿಸಬೇಕೆಂದರು.

ಸಭೆಯ ಅಧ್ಯಕ್ಷತೆ ವಹಿಸಿ ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, 4 ದಶಕಗಳ ಹೋರಾಟಕ್ಕೆ ನಮ್ಮ ಬಿಜೆಪಿ ಸರ್ಕಾರ ಮುಕ್ತಿ ನೀಡಲಿದೆೆ ಎಂಬ ವಿಶ್ವಾಸ ನನಗಿದೆ. ಎಲ್ಲಾ ಶಾಸಕರು ಪಕ್ಷಾತೀತವಾಗಿ ನನ್ನ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ನೀಡಿದ್ದಾರೆ. ಮುಖ್ಯಮಂತ್ರಿಗಳು ಮೀಸಲಾತಿ ಹೆಚ್ಚಳ ಸಾಧ್ಯವಿಲ್ಲ ಎಂದರೆ ಮಾತ್ರ ನಾವೆಲ್ಲರೂ ಒಟ್ಟಾಗಿ ರಾಜೀನಾಮೆ ನೀಡೋಣ ಎಂದಾಗ ಸಭೆಯಲ್ಲಿ ಬೆಂಬಲ ವ್ಯಕ್ತವಾಯಿತು.

ಇದೇ ದಿನಾಂಕ 21ರಂದು ಬೆಳಿಗ್ಗೆ 11 ಗಂಟೆಗೆ ಶಾಸಕರ ಭವನದಲ್ಲಿ ಶ್ರೀಗಳ ನೇತೃತ್ವದಲ್ಲಿ ಸಚಿವರ, ಸಂಸದರ, ಶಾಸಕರ ಸಭೆ ನಡೆಸಿ, ನಂತರ ಮುಖ್ಯಮಂತ್ರಿಗಳನ್ನು ಭೇಟಿ ಮಾಡೋಣ ಎಂದು ಶ್ರೀರಾಮುಲು ತಿಳಿಸಿದರು.

ಮಾಜಿ ಸಚಿವ ಈ. ತುಕಾರಾಂ, ಹೆಚ್‌.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು, ರಾಯಚೂರು ಜಿಲ್ಲೆಯ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಪ್ರತಾಪ್‌ಗೌಡ ಪಾಟೀಲ್, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಮಠದ ಧರ್ಮದರ್ಶಿ ಶಾಂತಲಾ ರಾಜಣ್ಣ ಮಾತನಾಡಿ, ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಸ್ವಾಮೀಜಿ   ತೀರ್ಮಾನಕ್ಕೆ ಬದ್ಧ ಎಂದರು.

ಸಂಸದ ಅರಸಿಕೆರೆ ದೇವೇಂದ್ರಪ್ಪ, ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ.ಎಂ. ಸಾಲಿ, ಮಠದ ಧರ್ಮದರ್ಶಿಗಳಾದ ಡಾ. ವಾಲ್ಮೀಕಿ, ನಲುವಾಗಲು ನಾಗರಾಜಪ್ಪ, ಜಂಬಯ್ಯ ನಾಯಕ, ಬಿ. ವೀರಣ್ಣ, ಕೆ.ಬಿ. ಮಂಜುನಾಥ್‌, ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಮುಖಂಡರಾದ ಜಿ.ಟಿ. ಚಂದ್ರಶೇಖರಪ್ಪ, ಹರ್ತಿಕೋಟೆ ವೀರೇಂದ್ರಸಿಂಹ, ಹೊದಿಗೆರೆ ರಮೇಶ್‌, ಕೆ.ಪಿ. ಪಾಲಯ್ಯ, ಕೃಷ್ಣಕುಮಾರ್‌, ಹುಲ್ಲುಮನಿ ಗಣೇಶ್, ರಾಘು ದೊಡ್ಮನಿ, ಶಿವಯೋಗಿ, ತಿಪ್ಪೇಶ್‌, ಹರಪನಹಳ್ಳಿಯ ಉಚ್ಚೆಂಗ್ಯೆಪ್ಪ, ಹರಿಹರ ತಾಲ್ಲೂಕಿನ ಜಿ. ಆನಂದಪ್ಪ, ಕೆ.ಹೆಚ್‌. ಕೊಟ್ರಪ್ಪ, ದಿನೇಶ್‌ಬಾಬು, ಕೆ.ಆರ್‌. ರಂಗಪ್ಪ, ಡಿ. ಸೋಮಶೇಖರ್‌, ಟಿ. ಪುಟ್ಟಪ್ಪ ಮತ್ತು  ಇತರರು ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!