ಡ್ರಗ್ ಮಾಫಿಯಾದಲ್ಲಿ ರಾಜಕಾರಣಿಗಳು, ಪೊಲೀಸ್ ಇಲಾಖೆ ಭಾಗಿ

ಡ್ರಗ್ ಮಾಫಿಯಾದಲ್ಲಿ ರಾಜಕಾರಣಿಗಳು, ಪೊಲೀಸ್ ಇಲಾಖೆ ಭಾಗಿ - Janathavaniದಾವಣಗೆರೆ, ಸೆ. 3-ರಾಜ್ಯದಲ್ಲಿ ಡ್ರಗ್ ಮಾಫಿಯಾ ಇಂದು ನಿನ್ನೆಯದಲ್ಲ. ಪ್ರತಿ ಬಾರಿಯೂ ಮಾಫಿಯಾ ಮಟ್ಟ ಹಾಕುವುದಾಗಿ, ಬೇರು ಸಹಿತ ಕಿತ್ತು ಹಾಕುವುದಾಗಿ ಹೇಳುವ ಪೊಲೀಸರಿಗೆ ಇದುವರೆಗೂ ಸಾಧ್ಯವಾಗಿಲ್ಲ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ಯುವಕ, ಯುವತಿಯರನ್ನು ದುರ್ಬಲ ಗೊಳಿಸುವ ವ್ಯವಸ್ಥಿತ ಷಡ್ಯಂತ್ರ ಡ್ರಗ್ ಮಾಫಿಯಾದಲ್ಲಿ ನಡೆಯುತ್ತಿದೆ. ರಾಜಕಾ ರಣಿಗಳು ಮತ್ತು ಪೊಲೀಸ್ ಇಲಾಖೆಯವರು ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ.

ಮಾಫಿಯಾದ ಇಂಚಿಂಚೂ ಮಾಹಿತಿ ಪೊಲೀಸರಿಗೆ ತಿಳಿದಿದೆ. ಆದರೆ ರಾಜಕರಾಣಿಗಳ ಕೈ ಅವರನ್ನು ಹಿಡಿದಿಟ್ಟಿದೆ. ಕಾರಣ ಸಾವಿರಾರು ಕೋಟಿ ರೂ. ವ್ಯವಹಾರ ಡ್ರಗ್ ಮಾಫಿಯಾದಲ್ಲಿ ನಡೆಯುತ್ತಿದೆ ಎಂದರು.

ಕಳೆದ ಹತ್ತು ವರ್ಷಗಳಿಂದ ಬೆಳೆದಿರುವ ಮಾಫಿಯಾ ಬಗ್ಗೆ ಬೇಹುಗಾರಿಕೆಗೆ ತಿಳಿದಿಲ್ಲವೇ? ಅದರ ಬೇರು ಎಲ್ಲಿದೆ ಎಂದು ಗೊತ್ತಿಲ್ಲವೇ ಎಂದು ಮುತಾಲಿಕ್ ಪ್ರಶ್ನಿಸಿದರು.

2009ರಲ್ಲಿ ಮಂಗಳೂರು ಪಬ್ ಘಟನೆಯಾದಾಗಲೇ ಕ್ಲಬ್ಬು, ಪಬ್ಬುಗಳಲ್ಲಿ ಡ್ರಗ್ಸ್, ಸೆಕ್ಸ್ ಮಾಫಿಯಾ ನಡೆಯುತ್ತಿದೆ ಎಂದು ಆರೋಪಿಸಿದ್ದೆ. ಆಗ ಇದೇ ಬಿಜೆಪಿ ಸರ್ಕಾರ ಮುತಾಲಿಕ್ ಹಾಗೂ ಶ್ರೀರಾಮ ಸೇನೆಯನ್ನು ಟಾರ್ಗೆಟ್ ಮಾಡಿ 15 ದಿನ ಜೈಲಿಗೆ ಹಾಕಿದ್ದರು. ಆಗಲೇ ಈ ಬಗ್ಗೆ ಕ್ರಮ ಕೈಗೊಂಡಿದ್ದರೆ ಇಷ್ಟು ಬೆಳವಣಿಗೆ ಆಗುತ್ತಿ ರಲಿಲ್ಲ ಎಂದರು.  ಸಿದ್ದರಾಮಯ್ಯನ ಪುತ್ರ ರಾಕೇಶ್ ಸಿದ್ದರಾಮಯ್ಯ ಸಾವನ್ನಪ್ಪಿದ್ದೂ ಡ್ರಗ್ಸ್ ನಿಂದಾಗಿಯೇ. ಆಗಲೇ ಸಿದ್ಧರಾಮಯ್ಯ ನವರಿಗೆ ಜನತೆ  ಬಗ್ಗೆ ಕಳಕಳಿ ಇದ್ದರೆ ಮಾಫಿ ಯಾವನ್ನು ಬೇರು ಸಹಿತ ಕಿತ್ತು ಹಾಕ ಬಹುದಿತ್ತು ಎಂದು ಮುತಾಲಿಕ್ ಹೇಳಿದರು.

ಶಿವಾಜಿ-ರಾಯಣ್ಣನ ನಡುವೆ ಹುಳಿ ಹಿಂಡುವುದು ಬೇಡ: ಛತ್ಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ ಅವರ ಜಾತಿಗಾಗಿ ಹೋರಾಡದೆ, ಸಮಾಜಕ್ಕಾಗಿ, ದೇಶಕ್ಕಾಗಿ, ಜಾತಿ ಮೀರಿ ಹೋರಾಡಿದವರು. ಅವರಿಗೆ ಜಾತಿ, ಭಾಷೆ, ಗಡಿಯ ಪಟ್ಟ ಕಟ್ಟುವುದು ಬೇಡ ಎಂದು ಮುತಾಲಿಕ್ ಹೇಳಿದರು.

ಬೆಳಗಾವಿಯಲ್ಲಿ ಶಿವಾಜಿ ಹಾಗೂ ರಾಯಣ್ಣ ಇಬ್ಬರ ಪ್ರತಿಮೆಯನ್ನೂ ನಿರ್ಮಿಸಿ ಸಮಾನತೆ ಸಾರುವ ಕೆಲಸ ಮಾಡಲಾಗಿದೆ. ಅಲ್ಲಿನ ಶಾಂತಿ, ಸೌಹಾರ್ಧತೆಗೆ ಹುಳಿ ಹಿಂಡುವ ಕೆಲಸ ಯಾರೂ ಮಾಡಬಾರದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ರಾಜ್ ಡಿ.ಬಿ., ಶ್ರೀಧರ್, ಕರಾಟೆ ರಮೇಶ್, ಸಾಗರ್, ಮಾರ್ಕಂಡೇಯ, ರಾಜು ಮತ್ತಿತರರು ಉಪಸ್ಥಿತರಿದ್ದರು.

error: Content is protected !!