ಅತಿ ಮಳೆಯಿಂದ ಈರುಳ್ಳಿ ಬೆಳೆ ರೋಗ : ರೈತರಲ್ಲಿ ಆತಂಕ

ಜಗಳೂರು ತಾಲ್ಲೂಕು : ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ಪರಿಶೀಲನೆ

ಜಗಳೂರು, ಸೆ. 3- ತಾಲ್ಲೂಕಿನಲ್ಲಿ ಕಳೆದ 15 ದಿನಗಳಿಂದ ಉತ್ತಮ ಮಳೆಯಾಗಿದ್ದು, ಮೋಡ ಮುಸುಕಿದ ವಾತಾವರಣ ಇದೆ. ಇದರಿಂದಾಗಿ ಈರುಳ್ಳಿ ಬೆಳೆಗೆ ರೋಗ ಕಾಣಿಸಿಕೊಂಡಿದ್ದು, ರೈತರು ಆತಂಕಗೊಂಡಿದ್ದಾರೆ.

ತಾಲ್ಲೂಕಿನಾದ್ಯಂತ 1300 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆ ಬೆಳೆದಿದ್ದಾರೆ. ಫಸಲು ಉತ್ತಮವಾಗಿದ್ದರೂ ರೋಗ ಕಾಣಿಸಿಕೊಂಡಿದ್ದು, ರೈತರು ಸಹಜವಾಗಿ ಆತಂಕಗೊಂಡಿದ್ದಾರೆ.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ಮತ್ತು ದಾವಣಗೆರೆ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನಿ ಎಂ.ಜಿ. ಬಸವನಗೌಡ ಅವರುಗಳು ಇಂದು ತಾಲ್ಲೂಕಿನ ತೋರಣಗಟ್ಟೆ, ಜಮ್ಮಾಪುರ, ಗೌರಮ್ಮನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡಿ, ಈರುಳ್ಳಿ ತಾಕುಗಳಿಗೆ ರೋಗ ಮತ್ತು ಕೀಟ ಸಮೀಕ್ಷೆ ನಡೆಸಿದರು.

ಅತಿಯಾದ ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಈರುಳ್ಳಿ ಬೆಳೆಗೆ ಎಲೆ ಮಚ್ಚೆರೋಗ ಹಾಗೂ ಲಘು ಪೋಷಕಾಂಶದ ಕೊರತೆಯುಂಟಾಗಿ ಎಲೆ ತಿರುಗುಣಿ ರೋಗದ ಲಕ್ಷಣಗಳು ಕಂಡು ಬಂದಿವೆ ಎಂದು ವಿಜ್ಞಾನಿ ಎಂ.ಜಿ. ಬಸವನಗೌಡ ತಿಳಿಸಿದರು.

ತಾಲ್ಲೂಕಿನಲ್ಲಿ ಈರುಳ್ಳಿ ಬೆಳೆ 90 ದಿವಸದ ಹಂತದಲ್ಲಿದ್ದು, ಬಹಳಷ್ಟು ಈರುಳ್ಳಿ ತಾಕುಗಳಲ್ಲಿ ನೇರಳೆ ಎಲೆ ಮಚ್ಚೆ ರೋಗದ ಲಕ್ಷಣಗಳು ಕಂಡು ಬಂದಿವೆ. ಕೆಲವು ಕಡೆ ಬೆಳವಣಿಗೆ ಹಂತ ಮುಗಿದಿರುವ ಕಡೆ ರೈತರು ಈಗಾಗಲೇ ಗಡ್ಡೆಗಳನ್ನು ಕಿತ್ತು ಮಾರಾಟಕ್ಕೆ ಅನುವಾಗುತ್ತಿದ್ದಾರೆ.

ಇನ್ನು ಕೆಲವು ಪ್ರದೇಶಗಳಲ್ಲಿ ಬೆಳೆ ಬೆಳವಣಿಗೆಯ ಹಂತದಲ್ಲಿದ್ದು, ಅಂತಹ ತಾಕುಗಳಲ್ಲಿ ನೇರಳೆ ಎಲೆ ಮಚ್ಚೆ ರೋಗದ ಲಕ್ಷಣಗಳಿದ್ದಲ್ಲಿ ರೈತರು, ಹೆಕ್ಸಾಕೋನ್ ಓಜೋಲ್ 1 ಮಿ.ಲೀ. ಅಥವಾ ಪ್ರೋವಿ ಕೋನೋಜೋಲ್ 1 ಮೀ ಲೀ. ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಿ, ಜೊತೆಗೆ ಲಘು ಪೋಷಕಾಂಶ ಮಿಶ್ರಣ 5 ಗ್ರಾಂ ಮತ್ತು ನೀರಿನಲ್ಲಿ ಕರಗುವ ಪೊಟ್ಯಾಷ್ 5 ಗ್ರಾಂ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಿದರೆ ಗಡ್ಡೆ ಉತ್ತಮ ಗುಣಮಟ್ಟದ್ದಾಗಿರುತ್ತದೆ ಎಂದು ತಿಳಿಸಿದರು.

ರೈತರು ರೋಗ ಮತ್ತು ಕೀಟಬಾಧೆ ಬಂದಂತಹ ಸಂದರ್ಭದಲ್ಲಿ ಇಲಾಖೆಗೆ ಭೇಟಿ ನೀಡಿ, ವೈಜ್ಞಾನಿಕ ಮಾಹಿತಿ ಪಡೆದು, ತಜ್ಞರ ಶಿಫಾರಸ್ಸಿನಂತೆ ಸಿಂಪರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ವೆಂಕಟೇಶಮೂರ್ತಿ ರೈತರಲ್ಲಿ ಮನವಿ ಮಾಡಿದ್ದಾರೆ.

ಸಮೀಕ್ಷೆಯ ಸಂದರ್ಭದಲ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಅನಂತ್‌ಕುಮಾರ್, ಜಿ.ಹೆಚ್. ಪ್ರಸನ್ನಕುಮಾರ್ ಮತ್ತು ಶಿವಣ್ಣ, ರೈತರಾದ ಗಿರೀಶ್, ಮಹೇಶ್, ಚಂದ್ರಪ್ಪ, ಶಿವಕುಮಾರ್, ಅಜ್ಜಯ್ಯ, ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!