ಅಂಗನವಾಡಿಗಳ ಡಿಜಿಟಲೀಕರಣ; ಕಾರ್ಯಕರ್ತೆಯರಿಗೆ ಮೊಬೈಲ್‌

ಅಂಗನವಾಡಿಗಳ ಡಿಜಿಟಲೀಕರಣ; ಕಾರ್ಯಕರ್ತೆಯರಿಗೆ ಮೊಬೈಲ್‌ - Janathavani

ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರಿಗೆ 1,786 ಮೊಬೈಲ್‌ ವಿತರಣೆ

ದಾವಣಗೆರೆ, ಆ. 2 – ಜಿಲ್ಲೆಯ 1,723 ಅಂಗನವಾಡಿ ಕೇಂದ್ರಗಳಿನ್ನು ಡಿಜಿಟಲೀಕರಣಗೊಳ್ಳಲಿವೆ. ಕೇಂದ್ರಗಳ ಕಾರ್ಯ ನಿರ್ವಹಣೆ ಪೇಪರ್‌ಲೆಸ್ ಆಗಲಿದ್ದು, ಸಂಪೂರ್ಣ ಆನ್‌ಲೈನ್ ಮೂಲಕವೇ ಹಾಜರಾತಿ, ಮಾಹಿತಿ ಸಂಗ್ರಹಣೆ ಹಾಗೂ ಯೋಜನೆಗಳ ಉಸ್ತುವಾರಿ ನಡೆಯಲಿದೆ. ಇದಕ್ಕಾಗಿ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ 1,786 ಮೊಬೈಲ್‌ಗಳನ್ನು ರವಾನಿಸಲಾಗಿದೆ.

ಕೇಂದ್ರ ಸರ್ಕಾರದ ಪೋಷಣ್ ಅಭಿಯಾನ್ ಯೋಜನೆಯಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರಿಗೆ ಮೊಬೈಲ್‌ಗಳನ್ನು ವಿತರಿಸಲಾಗುತ್ತಿದೆ. ಯೋಜನೆ ಸಂಪೂರ್ಣ ಕೇಂದ್ರ ಸರ್ಕಾರದ ಅನುದಾನ ಹೊಂದಿದೆ. ಜಿಲ್ಲೆಗೆ ಈಗಾಗಲೇ ಮೊಬೈಲ್‌ಗಳು ಬಂದಿದ್ದು, ಬಿಎಸ್‌ಎನ್‌ಎಲ್‌ ಸಿಮ್ ನೀಡುವುದನ್ನು ನಿರೀಕ್ಷಿಸಲಾಗುತ್ತಿದೆ. ಸಿಮ್ ದೊರೆತ ತಕ್ಷಣವೇ ಮೊಬೈಲ್ ವಿತರಣೆಯಾಗಲಿದೆ.

ಮೊಬೈಲ್ ಜೊತೆಗೆ ಪವರ್ ಬ್ಯಾಂಕ್ ಮತ್ತಿತರೆ ಅಗತ್ಯ ಸಲಕರಣೆಗಳನ್ನೂ ನೀಡಲಾಗಿದೆ. ಈ ಮೊಬೈಲ್‌ನಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಆನ್‌ ಲೈನ್‌ ಮೂಲಕವೇ ಸಭೆಗಳಲ್ಲಿ ಪಾಲ್ಗೊಳ್ಳ ಬಹುದಾಗಿದೆ. ಕೊರೊನಾ ಅವಧಿಯಲ್ಲಿ ಈ ರೀತಿಯ ಸೌಲಭ್ಯ ಹೆಚ್ಚು ಉಪಯುಕ್ತ ಹಾಗೂ ಸುರಕ್ಷಿತವೂ ಆಗಿರಲಿದೆ.

ಈ ಬಗ್ಗೆ ವಿವರ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಹೆಚ್. ವಿಜಯ್‌ಕುಮಾರ್, ಈ ತಿಂಗಳಲ್ಲೇ ಸಿಮ್‌ಗಳು ಸಿಗುವ ನಿರೀಕ್ಷೆ ಇದೆ. ನಂತರ ಜನಪ್ರತಿನಿಧಿಗಳ ಜೊತೆ ಚರ್ಚಿಸಿ, ಮೊಬೈಲ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದವರು ತಿಳಿಸಿದ್ದಾರೆ.

ರಾಜ್ಯ ಮಟ್ಟದ ಟೆಂಡರ್ ಮೂಲಕ ಸ್ಯಾಮ್‌ಸಂಗ್ ಮೊಬೈಲ್‌ಗಳನ್ನು ಖರೀದಿಸಲಾಗಿದೆ. ಇವುಗಳಿಗೆ §ಸ್ನೇಹ’ ಎಂಬ ಆಪ್ ರೂಪಿಸಲಾಗಿದೆ. ಈ ಆಪ್ ಬಳಕೆ ಕುರಿತು ಕಾರ್ಯಕರ್ತೆಯರಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಡಿಜಿಟಲೀಕರಣದ ಯೋಜನೆ ನಿರ್ವಹಿಸಲು ತಂಡವೊಂದನ್ನು ರಚಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಗರ್ಭಿಣಿಯರು ಹಾಗೂ ಮಕ್ಕಳ ಆರೋಗ್ಯ, ಪೋಷಣೆಗಳು ಕಾರ್ಯಕರ್ತೆ ಯರ ಪ್ರಮುಖ ಜವಾಬ್ದಾರಿಗಳಾಗಿವೆ. ಮೊಬೈಲ್ ಮೂಲಕ ಈ ಕಾರ್ಯ ನಿರ್ವಹಣೆಗಳು ಸುಲಭವಾಗಲಿವೆ. ಈ ಮೊಬೈಲ್‌ಗಳು ಜಿಯೋ ಟ್ಯಾಗ್ ಆಗಿವೆ. ಹೀಗಾಗಿ ಅಂಗನವಾಡಿ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇರಲಿದೆ ಎಂದವರು ಹೇಳಿದ್ದಾರೆ.

ಅಂಗನವಾಡಿಯಲ್ಲಿ ಮಕ್ಕಳ ಹಾಜರಾತಿ, ಅವರ ಆರೋಗ್ಯ, ಬೆಳವಣಿಗೆ ಮುಂತಾದ ಮಾಹಿತಿಗಳನ್ನು ಮೊಬೈಲ್ ಮೂಲಕವೇ ಪಡೆಯಲಾಗುವುದು. ಗರ್ಭಿಣಿಯರ ಆರೋಗ್ಯ ತಪಾಸಣೆಯ ವಿವರ, ನೀಡಬೇಕಾದ ಚುಚ್ಚುಮದ್ದುಗಳ ವಿವರಗಳೂ ಮೊಬೈಲ್‌ನಲ್ಲಿರಲಿವೆ. ಕಾಲಾನುಕಾಲಕ್ಕೆ ಗರ್ಭಿಣಿಯರ ಬಗ್ಗೆ ತೆಗೆದುಕೊಳ್ಳಬೇಕಾದ ಕಾಳಜಿ ಬಗ್ಗೆ ಅಲಾರಾಂ ವ್ಯವಸ್ಥೆ ಇದೆ. ಹೀಗಾಗಿ ಗರ್ಭಿಣಿಯರಿಗೆ ಸೌಲಭ್ಯಗಳು ಸುಲಭವಾಗಿ ಸಿಗಲಿವೆ ಎಂದವರು ಹೇಳಿದ್ದಾರೆ.

ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಯ ಫಲಾನುಭವಿಗಳನ್ನೂ ಈ ಮೊಬೈಲ್ ಆಪ್ ಮೂಲಕ ಗುರುತಿಸಲಾಗುವುದು. ಅವರ ಎಲ್ಲ ವಿವರಗಳನ್ನು ಅಪ್ಡೇಟ್ ಮಾಡುವುದು ಸುಲಭವಾಗಲಿದೆ. ಗರ್ಭಿಣಿಯರ ವಿವರಗಳು ಡಿಜಿಟಲ್ ಆಗುವುದರಿಂದ, ಸ್ತ್ರಿ ಭ್ರೂಣ ಹತ್ಯೆ ತಡೆಗೆ ನಿಗಾ ವಹಿಸಲು ಅನುಕೂಲವಾಗಲಿದೆ ಎಂದು ವಿಜಯ್ ಕುಮಾರ್ ಹೇಳಿದ್ದಾರೆ.

ಕೆಲವೊಮ್ಮೆ ಅಂಗನವಾಡಿಗಳನ್ನು ತೆರೆದಿದ್ದೇವೆ ಎಂದು ಸುಳ್ಳು ಹೇಳುವ, ಸುಳ್ಳು ಲೆಕ್ಕ ತೋರಿಸುವ ದೂರುಗಳಿಗೆ ಕಡಿವಾಣ ಬೀಳಲಿದೆ. ಅಧಿಕಾರಿಗಳು, ಸೂಪರ್‌ವೈಸರ್‌ಗಳು ಅಂಗನವಾಡಿಗಳಿಗೆ ಭೇಟಿ ನೀಡುವ ಬಗ್ಗೆಯೂ ನಿಖರ ಮಾಹಿತಿ ಸಿಗಲಿದೆ ಎಂದವರು ಹೇಳಿದ್ದಾರೆ.


ಎಸ್.ಎ. ಶ್ರೀನಿವಾಸ್
[email protected]

error: Content is protected !!