ನವದೆಹಲಿ, ಆ. 3 – ಸಣ್ಣ ಸಣ್ಣ ನಗರಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದು, ಸೋಂಕು ಸಮುದಾಯ ಮಟ್ಟದಲ್ಲಿ ಹರಡಿರುವುದನ್ನು ತೋರಿಸುತ್ತದೆ. ಈ ಹಂತದಲ್ಲಿ ಟೆಸ್ಟ್ ಹೆಚ್ಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಇದರ ಬದಲು ಸಾವುಗಳನ್ನು ತಡೆಗಟ್ಟುವ ಕಡೆ ಗಮನ ಹರಿಸಬೇಕೆಂದು ಆರೋಗ್ಯ ವಲಯದ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
ಎಐಐಎಂಎಸ್ ಹಾಗೂ ಐ.ಸಿ.ಎಂ.ಆರ್. ರಾಷ್ಟ್ರೀಯ ಕಾರ್ಯಪಡೆಯ ವೈದ್ಯರೂ ಸೇರಿದಂತೆ ಪರಿಣಿತರು ಈ ಬಗ್ಗೆ ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಸಮುದಾಯದ ಹಂತದಲ್ಲಿ ಸೋಂಕು ಹರಡಿದ ಮೇಲೆ ಸೋಂಕಿತರ §ಪತ್ತೆ ಮಾಡಿ, ಪರೀಕ್ಷಿಸಿ, ಪ್ರತ್ಯೇಕಿಸಿ ಹಾಗೂ ಚಿಕಿತ್ಸೆ ನೀಡಿ’ ಎಂಬ ಸೂತ್ರ ಫಲ ನೀಡದು ಎಂದಿದ್ದಾರೆ. ದೇಶದ ಹಲವು ಭಾಗಗಳಲ್ಲಿ ನಡೆಸಲಾದ ಸೆರೋ – ಸರ್ವೈಲೆನ್ಸ್ ವರದಿಗಳನ್ನು ಪರಿಗಣಿಸಿದಾಗ ಒಟ್ಟು ಸೋಂಕಿತರ ಶೇ.5ಕ್ಕೂ ಕಡಿಮೆ ಜನರನ್ನು ಮಾತ್ರ ಪರೀಕ್ಷೆಯಿಂದ ಪತ್ತೆ ಮಾಡಲು ಸಾಧ್ಯವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಪರಿಣಿತರು ಹೇಳಿದ್ದಾರೆ. ಸೋಂಕಿತರ ನಿಕಟವರ್ತಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆದರೆ, ರಾಜ್ಯಗಳಲ್ಲಿ ದೊಡ್ಡ ಪ್ರಮಾಣದ ಲಕ್ಷಣ ರಹಿತ ಸೋಂಕಿತರಿದ್ದಾರೆ. ಹೀಗಾಗಿ ಲಕ್ಷಣ ರಹಿತರು ಸೋಂಕಿತರ ನಿಕಟ ಸಂಪರ್ಕದಲ್ಲಿದ್ದರೆ ಮಾತ್ರ ಪತ್ತೆಯಾಗುತ್ತಾರೆ. ಇಲ್ಲವಾದರೆ ಲಕ್ಷಣ ರಹಿತರು ಪರೀಕ್ಷೆಗೆ ಸಿಗುವುದೇ ಇಲ್ಲ ಎಂದವರು ಹೇಳಿದ್ದಾರೆ.
ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್ (ಐ.ಪಿ.ಹೆಚ್.ಎ.), ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟಿವ್ ಅಂಡ್ ಸೋಷಿಯಲ್ ಮೆಡಿಸಿನ್ (ಐ.ಎ.ಪಿ.ಎಸ್.ಎಂ.) ಹಾಗೂ ಇಂಡಿಯನ್ ಅಸೋಸಿಯೇಷನ್ ಆಫ್ ಎಪಿಡಮಾಲಜಿಸ್ಟ್ಸ್ (ಐ.ಎ.ಇ.) ಸಂಸ್ಥೆಗಳ ಪರಿಣಿತರು ಜಂಟಿ ಹೇಳಿಕೆ ನೀಡಿದ್ದು, ಇದನ್ನು ಪ್ರಧಾನ ಮಂತ್ರಿಗೆ ಸಲ್ಲಿಸಲಾಗಿದೆ.
ಟೆಸ್ಟ್ ಕಡಿಮೆ, ಸಾವೂ ಕಡಿಮೆ : ಟೆಸ್ಟ್ಗಳನ್ನು ಹೆಚ್ಚಿಸುವುದರಿಂದ ಕೊರೊನಾ ಸಾವುಗಳನ್ನು ತಡೆಯಲು ಸಾಧ್ಯವಾಗದು ಎಂಬುದನ್ನು ಇತರೆ ದೇಶಗಳ ಅನುಭವ ತಿಳಿಸುತ್ತದೆ ಎಂದು ಆರೋಗ್ಯ ವಲಯದ ಪರಿಣಿತರು ಹೇಳಿದ್ದಾರೆ. ಮತ್ತೊಂದೆಡೆ ಜಪಾನ್, ಶ್ರೀಲಂಕಾಗಳು ಅತಿ ಕಡಿಮೆ ಪರೀಕ್ಷೆ ನಡೆಸಿದರೂ ಸಹ, ಕಡಿಮೆ ಸಾವುಗಳನ್ನು ಕಂಡಿವೆ ಎಂದು ಪರಿಣಿತರು ಹೇಳಿದ್ದಾರೆ. ಮತ್ತೊಂದೆಡೆ ಇತರೆ ಕೆಲ ದೇಶಗಳು ವ್ಯಾಪಕ ಪರೀಕ್ಷೆಗೆ ಮುಂದಾದರೂ ಸಹ ಸಾವು ಹಾಗೂ ಸೋಂಕು ಹರಡುವಿಕೆ ತಡೆಯಲು ಸಾಧ್ಯವಾಗಿಲ್ಲ ಎಂಬುದರತ್ತ ಅವರು ಗಮನ ಸೆಳೆದಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸಿ ಸೋಂಕಿತರನ್ನು ಪ್ರತ್ಯೇಕಿಸುವುದು ಆರಂಭಿಕ ಹಂತದಲ್ಲಿ ಹೆಚ್ಚು ಉಪಯುಕ್ತವಾಗಿದೆ. ಇದರಿಂದಾಗಿ ಸೋಂಕು ಸಮುದಾಯ ಮಟ್ಟಕ್ಕೆ ತಲುಪುವುದನ್ನು ತಡೆಯಬಹುದಾಗಿದೆ. ಸೋಂಕು ಈಗಾಗಲೇ ವ್ಯಾಪಕವಾಗಿ ಹರಡಿದೆ. ಹೀಗಾಗಿ ಪರೀಕ್ಷೆ ಹೆಚ್ಚಿಸುವುದರಿಂದ ನಿಗದಿತ ಉದ್ದೇಶ ಈಡೇರುವುದಿಲ್ಲ ಎಂದವರು ಹೇಳಿದ್ದಾರೆ.
ಸೋಂಕು ವ್ಯಾಪಕವಾಗಿ ಹರಡಿರುವುದರಿಂದ, ಪರೀಕ್ಷೆ ಹೆಚ್ಚಿಸಿದಷ್ಟೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಾರೆ. ಆದರೆ, ಸೋಂಕು ಹರಡುವು ದನ್ನು ತಡೆಯುವ ಇಲ್ಲವೇ ಸಾವುಗಳನ್ನು ತಡೆಗಟ್ಟುವ ಮುಖ್ಯ ಉದ್ದೇಶಕ್ಕೆ ಹೆಚ್ಚು ಉಪಯುಕ್ತವಾಗದು ಎಂದು ಪರಿಣಿತರು ತಿಳಿಸಿದ್ದಾರೆ.
ಸಣ್ಣ ನಗರಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸೋಂಕು ದೇಶದ ಬಹುತೇಕ ಭಾಗಗಳಿಗೆ ಹರಡಿರುವುದನ್ನು ಸೆರೋ – ಸರ್ವೇ ತೋರಿಸುತ್ತಿದೆ. ಇದು ಸೋಂಕು ಸಮುದಾಯ ಮಟ್ಟದಲ್ಲಿ ಹರಡಿರುವುದನ್ನು ತೋರಿಸುತ್ತದೆ. ಹೀಗಾಗಿ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಟೆಸ್ಟ್ ಮಾಡುವ ವಿಧಾನವನ್ನು ಬದಲಿಸಬೇಕಿದೆ ಎಂದವರು ಹೇಳಿದ್ದಾರೆ.
ಸಮುದಾಯ ಹರಡುವಿಕೆಯ ಈ ಹಂತದಲ್ಲಿ ಟೆಸ್ಟ್ ಮಾಡಲು ಹೆಚ್ಚು ಒತ್ತು ಕೊಡುವುದು, ಸೋಂಕು ನಿಯಂತ್ರಣಕ್ಕೆ ಹೆಚ್ಚು ಉಪಯುಕ್ತವಲ್ಲ. ಇದರಿಂದಾಗಿ ನಿಯಂತ್ರಣದ ಗಮನ ಹಾಗೂ ಸಂಪನ್ಮೂಲವನ್ನು ಬೇರೆಡೆಗೆ ಕಳಿಸಿದಂತಾಗುತ್ತದೆ.
ಈ ಸೋಂಕಿನ ಸ್ವರೂಪ ಹಾಗೂ ಹೆಚ್ಚು ಅಪಾಯದಲ್ಲಿರುವ ವರ್ಗ ಯಾವುದು ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಹೀಗಾಗಿ ಟೆಸ್ಟ್ ಅನ್ನು ಹೆಚ್ಚು ಎಚ್ಚರಿಕೆಯಿಂದ ಬಳಸಬೇಕು. ಹೆಚ್ಚು ಅಪಾಯ ಎದುರಿಸುತ್ತಿರುವ ವ್ಯಕ್ತಿಗಳು, ಆರೋಗ್ಯ ಕಾರ್ಯಕರ್ತರು ಆರೋಗ್ಯ ಸಮಸ್ಯೆ ಹೊಂದಿರುವ ಹಿರಿಯರು, ಶಸ್ತ್ರ ಚಿಕಿತ್ಸೆಗೆ ಒಳಗಾಗುವವರು ಮತ್ತಿತರರು ಮಾತ್ರ ಪರೀಕ್ಷೆಗೆ ಒಳಗಾಗುವುದು ಸೂಕ್ತ.
ಆದರೆ, ಇನ್ನೂ ಈಗಷ್ಟೇ ಸೋಂಕು ಕಂಡು ಬರುತ್ತಿರುವ ಸ್ಥಳಗಳಲ್ಲಿ ವ್ಯಾಪಕ ಪರೀಕ್ಷೆ ನಡೆಸುವ ಮೂಲಕಕ ಸೋಂಕು ಹರಡುವುದನ್ನು ತಡೆಯುವುದು ಸೂಕ್ತವಾಗಿದೆ ಎಂದು ಪರಿಣಿತರು ತಿಳಿಸಿದ್ದಾರೆ.