ಸುಪ್ರೀಂ ಕೋರ್ಟ್ ಈ ಬಗ್ಗೆ ಪರಿಶೀಲಿಸಬಹು ದಾಗಿದೆ. ಈ ವಿಷಯದ ಬಗ್ಗೆ ನಾಳೆ ಇಲ್ಲವೇ ನಾಡಿದ್ದು ಪರಿಶೀಲಿಸಬಹುದು. ಬಡ್ಡಿಗೂ ಬಡ್ಡಿ ವಿಧಿಸುವ ವಿಷಯದ ಕುರಿತು ಆರ್.ಬಿ.ಐ. ಅಧಿಕಾರಿಗಳ ಜೊತೆ ನಾವು ಚರ್ಚಿಸುತ್ತಿದ್ದೇವೆ
– ತುಶಾರ್ ಮೆಹ್ತಾ
ನವದೆಹಲಿ, ಸೆ. 1 – ಕೊರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಲದ ಕಂತುಗಳಿಗೆ ನೀಡಲಾಗಿದ್ದ ವಿನಾಯಿತಿಯನ್ನು ಎರಡು ವರ್ಷಗಳ ಕಾಲ ವಿಸ್ತರಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಸಾಲದ ಕಂತು ಮರು ಪಾವತಿಗೆ ನೀಡಲಾಗಿದ್ದ ವಿನಾಯಿತಿಯ ಗಡುವು ಸೋಮವಾರವಷ್ಟೇ ಅಂತ್ಯಗೊಂಡಿತ್ತು. ಅದರ ಮರುದಿನ ಸುಪ್ರೀಂ ಕೋರ್ಟ್ಗೆ ಸರ್ಕಾರ ಈ ಮಾಹಿತಿ ನೀಡಿದೆ.
ಕೊರೊನಾ ಹಿನ್ನೆಲೆಯಲ್ಲಿ ವ್ಯಕ್ತಿಗಳು ಹಾಗೂ ಕಾರ್ಪೊರೇಟ್ಗಳು ಪಡೆದ ಸಾಲದ ಕಂತು ಮರು ಪಾವತಿಸಲು ಬ್ಯಾಂಕುಗಳು ಆರು ತಿಂಗಳವರೆಗೆ ಅಂದರೆ ಆಗಸ್ಟ್ 31ರವರೆಗೆ ವಿನಾಯಿತಿ ನೀಡಬಹುದು ಎಂದು ರಿಸರ್ವ್ ಬ್ಯಾಂಕ್ ತಿಳಿಸಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್ ಎದುರು ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತ, ವಿನಾಯಿತಿ ನೀಡಲಾದ ಅವಧಿಯಲ್ಲಿನ ಬಡ್ಡಿ ಮನ್ನಾ ಮಾಡುವ ಬಗ್ಗೆ ರಿಸರ್ವ್ ಬ್ಯಾಂಕ್ ಹಾಗೂ ಬ್ಯಾಂಕರ್ಗಳ ಒಕ್ಕೂಟದ ಜೊತೆ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ಇದರಲ್ಲಿ ಹಲವಾರು ವಿಷಯಗಳು ಸೇರಿಕೊಂಡಿವೆ. ಜಿಡಿಪಿ ಶೇ.23ರಷ್ಟು ಕುಸಿದಿದೆ ಹಾಗೂ ಆರ್ಥಿಕ ಒತ್ತಡವಿದೆ ಎಂದು ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಬಡ್ಡಿಗೂ ಬಡ್ಡಿ ವಿಧಿಸುತ್ತಿರುವ ವಿಷಯದ ಕುರಿತು ನಾವು ಪರಿಶೀಲನೆ ನಡೆಸುತ್ತೇವೆ ಎಂದು ನ್ಯಾಯಮೂರ್ತಿ ಎಂ.ಆರ್. ಷಾ ಅವರನ್ನು ಒಳಗೊಂಡ ಪೀಠ ಹೇಳಿದೆ. ನ್ಯಾಯಾಲಯ ಈ ಕುರಿತ ವಿಚಾರಣೆಯನ್ನು ಬುಧವಾ ರವೂ ನಡೆಯಲಿದೆ.
ಆರು ತಿಂಗಳ ಕಂತು ವಿನಾಯಿತಿ ಅವಧಿಯಲ್ಲಿನ ಬಡ್ಡಿ ಮನ್ನಾ ಮಾಡುವ ಬಗ್ಗೆ ಸರ್ಕಾರದ ನಿಲುವು ತಿಳಿಸಬೇಕು. ಸರ್ಕಾರ ಈ ವಿಷಯದಲ್ಲಿ ಆರ್.ಬಿ.ಐ. ಹಿಂದೆ ಅಡಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ತಿಳಿಸಿತ್ತು.
ಕಂತು ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದರೆ ಬ್ಯಾಂಕುಗಳ ಹಣಕಾಸು ಆರೋಗ್ಯ ಹಾಗೂ ಸ್ಥಿರತೆಗೆ ಧಕ್ಕೆಯಾಗುತ್ತದೆ. ಹೀಗಾಗಿ ಬಡ್ಡಿ ಮನ್ನಾ ಮಾಡಲು ಸಾಧ್ಯವಾಗದು ಎಂದು ಆರ್.ಬಿ.ಐ. ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು. ಸಾಲದ ಮೇಲಿನ ಬಡ್ಡಿ ಪಾವತಿಗೆ ಹೆಚ್ಚಿನ ವಿನಾಯಿತಿ ನೀಡಬೇಕು ಎಂದು ಗಜೇಂದ್ರ ಶರ್ಮ ಎಂಬ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.