ಕೊರೊನಾದಿಂದ ಮೃತಪಟ್ಟವರ ಕಳೇಬರ ಕುಟುಂಬದವರಿಗೆ ನಿರಾಕರಿಸಲಾಗದು

ದಾವಣಗೆರೆ, ಸೆ. 1 – ಕೊರೊನಾಗೆ ಸಿಲುಕಿ ಸಾವನ್ನಪ್ಪಿದವರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸುವುದಕ್ಕೆ ಸಂಬಂಧಿಸಿದಂತೆ ಜನಸಾಮಾನ್ಯರಲ್ಲಿ ಹಲವಾರು ಗೊಂದಲಗಳಿವೆ. ಕೊರೊನಾದಿಂದ ಮೃತರ ಕಳೇಬರವನ್ನು ಕುಟುಂಬದವರಿಗೆ ನೀಡುವುದಿಲ್ಲ ಎಂದೂ ಕೆಲವರು ಭಾವಿಸಿದ್ದಾರೆ. ಆದರೆ, ಕೊರೊನಾಗೆ ಸಿಲುಕಿ ಸಾವನ್ನಪ್ಪಿದವರು ಹಾಗೂ ಕೊರೊನಾ ಶಂಕಿತರ ಮೃತದೇಹ ಗಳನ್ನು ಕುಟುಂಬದವರಿಗೆ ಹಸ್ತಾಂತರಿಸುವ ಬಗ್ಗೆ ಸರ್ಕಾರ ಸ್ಪಷ್ಟವಾದ ಆದೇಶವನ್ನೇ ಹೊರಡಿಸಿರುವುದು ಗಮನಾರ್ಹ.

ಕೊರೊನಾದಿಂದ ಮೃತರ ಕಳೇಬರಗಳನ್ನು ನೀಡಲು ಲಂಚ ಕೇಳಲಾಗುತ್ತಿದೆ ಎಂದು ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಜನಪ್ರತಿನಿಧಿಗಳು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇತ್ತೀಚೆಗೆ ಆಗಸ್ಟ್ 6ರಂದು ಹೊರಡಿಸಿದ ಆದೇಶ ಗಮನಾರ್ಹವಾಗಿದೆ.

ಕೊರೊನಾ ಇದೆ ಎಂಬ ಕಾರಣಕ್ಕಾಗಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸುವುದನ್ನು ನಿರಾಕರಿಸು ವಂತಿಲ್ಲ. ಒಂದು ವೇಳೆ ಕುಟುಂಬದವರು ಯಾವುದೋ ಕಾರಣಕ್ಕೆ ಅಂತ್ಯಕ್ರಿಯೆ ನಡೆಸಲು ತಮ್ಮಿಂದ ಸಾಧ್ಯವಾಗದು ಎಂದು ಹೇಳಿದಾಗ ಮಾತ್ರ ಆರೋಗ್ಯ ಪ್ರಾಧಿಕಾರ ಮೃತದೇಹದ ಅಂತ್ಯಕ್ರಿಯೆ ನಡೆಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಅಲ್ಲದೇ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೆ ಕೆಲ ಪ್ರಮುಖ ನಿರ್ದೇಶನಗಳನ್ನು ನೀಡಿದೆ. ರಾಜ್ಯ ಹೈಕೋರ್ಟ್  ಕೆಲ ಟಿಪ್ಪಣಿಗಳನ್ನು ಮಾಡಿದೆ. ಅದರ ಅನ್ವಯ ಮೃತದೇಹ ಹಸ್ತಾಂತರಿಸುವ ಮಾರ್ಗಸೂಚಿಗಳಲ್ಲಿ ಬದಲಾವಣೆ ಮಾಡಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಮೃತರು ಇಲ್ಲವೇ ಕುಟುಂಬದವರನ್ನು ಕಳಂಕಕ್ಕೆ ಗುರಿ ಮಾಡಬಾರದು. ಮೃತರ ಘನತೆ ಕಾಯ್ದುಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕಳೇಬರದ ಗೌರವ, ಕುಟುಂಬದವರ ಸಾಂಸ್ಕೃತಿಕ  ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಗೌರವಿಸಬೇಕು ಹಾಗೂ ರಕ್ಷಿಸಬೇಕು. ಮೃತದೇಹವನ್ನು ಅವಸರದಲ್ಲಿ ವಿಲೇವಾರಿ ಮಾಡುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಪ್ರತಿಯೊಂದು ಸಾವಿನ ಸಂದರ್ಭದಲ್ಲೂ ಕೊರೊನಾ ಪರೀಕ್ಷೆಗಾಗಿ ಒತ್ತಾಯಿಸಬಾರದು. ಫ್ಲು, ಉಸಿರಾಟದ ತೀವ್ರ ಸಮಸ್ಯೆ ಇದ್ದ ಸಂದರ್ಭದಲ್ಲಿ ಸಾವಿನ ಆರು ಗಂಟೆಯ ಒಳಗೆ ಕೊರೊನಾ ಪರೀಕ್ಷೆಗಾಗಿ ಗಂಟಲು ದ್ರವ ತೆಗೆದುಕೊಳ್ಳಬೇಕು

ಆನಂತರ ವರದಿ ಬರುವವರೆಗೂ ಕಾಯದೇ ಗೌರವದೊಂದಿಗೆ ಶಂಕಿತ ಮೃತದೇಹವನ್ನು ಕುಟುಂಬ ದವರಿಗೆ ಇಲ್ಲವೇ ಸಂಬಂಧಿಕರಿಗೆ ಹಸ್ತಾಂತರಿಸಬೇಕು. ಯಾವುದೇ ಸಂದರ್ಭದಲ್ಲಿ ಮೃತದೇಹವನ್ನು ಹಸ್ತಾಂತರಿ ಸುವುದು ವಿಳಂಬವಾಗಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ. ಈ ರೀತಿ ಶಂಕಿತ ಮೃತದೇಹದ ಅಂತ್ಯಕ್ರಿಯೆ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಆದೇಶದಲ್ಲಿ ವಿವರಿಸಲಾಗಿದೆ.

ಕುಟುಂಬದವರು ಯಾವುದೇ ಕಾರಣಗಳಿಗಾಗಿ ಕೊರೊನಾದಿಂದ ಮೃತಪಟ್ಟವರ ಕಳೇಬರವನ್ನು ಸ್ವೀಕರಿ ಸಲು ಇಲ್ಲವೇ ಅಂತ್ಯಕ್ರಿಯೆ ನೆರವೇರಿಸಲು ಸಾಧ್ಯವಾಗದು ಎಂದು ತಿಳಿಸಿದಾಗ ಸ್ಥಳೀಯ ವೈದ್ಯಕೀಯ ಪ್ರಾಧಿಕಾರ ಗೌರವದೊಂದಿಗೆ ಕುಟುಂಬದವರ ಸಂಪ್ರದಾಯಗಳಿಗೆ ಅನುಗುಣವಾಗಿ ಅಂತ್ಯಕ್ರಿಯೆ ನೆರವೇರಿಸಬೇಕು. 

ಆಸ್ಪತ್ರೆಗಳು ಮೃತದೇಹವನ್ನು ಸ್ವಚ್ಛವಾಗಿ, ಸೋರಿಕೆ ರಹಿತವಾದ ಜಿಪ್ಬರ್ ಬಾಡಿ ಬ್ಯಾಗ್‌ನಲ್ಲಿ ಕುಟುಂಬದವರಿಗೆ ನೀಡಬೇಕು.  ಕುಟುಂಬದವರು ಬಯಸಿದರೆ ಬಾಡಿ ಬ್ಯಾಗ್‌ನ ಜಿಪ್ ತೆಗೆದು ಮುಖ ದರ್ಶನ ಪಡೆಯಲು ಕುಟುಂಬದ ಸದಸ್ಯರು, ಸಂಬಂಧಿಕರು ಹಾಗೂ ಸ್ನೇಹಿತರಿಗೆ ಆಸ್ಪತ್ರೆಯ ಸಿಬ್ಬಂದಿ ಅವಕಾಶ ನೀಡಬೇಕು ಎಂಬ ಸೂಚನೆಗಳಿವೆ.

ಮೃತದೇಹವನ್ನು ನಿರ್ವಹಿಸುವ ಕುರಿತ ಸೂಚನೆಗಳನ್ನು ಇಂಗ್ಲಿಷ್ ಹಾಗೂ ಕನ್ನಡದಲ್ಲಿರುವಂತೆ ಕುಟುಂಬವದರಿಗೆ ಲಿಖಿತವಾಗಿ ನೀಡಬೇಕು. ಬಾಡಿ ಬ್ಯಾಗ್ ತೆರೆಯಬಾರದು, ಮೃತದೇಹವನ್ನು ಸ್ಪರ್ಷಿಸಬಾರದು, ಅಂತ್ಯಕ್ರಿಯೆಯಲ್ಲಿ 20ಕ್ಕೂ ಹೆಚ್ಚು ಜನ ಪಾಲ್ಗೊಳ್ಳಬಾರದು, ಬಾಡಿ ಬ್ಯಾಗ್ ತೆರೆಯದೇ ಧಾರ್ಮಿಕ ಸಂಪ್ರದಾಯ ನೆರವೇರಿಸಬೇಕು ಇತ್ಯಾದಿ ಸೂಚನೆಗಳನ್ನು ತಿಳಿಸಬೇಕು. 

ಗಮನಾರ್ಹ ಅಂಶವೆಂದರೆ ಈ ಪರಿಷ್ಕೃತ ಸುತ್ತೋಲೆಯಲ್ಲಿ ಮೃತದೇಹವನ್ನು ಆರೋಗ್ಯ ಕಾರ್ಯಕರ್ತರು ಹಾಗೂ ಮೃತರ ಕುಟುಂಬದವರು ಸೂಚಿತ ಪ್ರಕ್ರಿಯೆಗಳ ಮೂಲಕ ನಿರ್ವಹಿಸಿದರೆ ಕೋವಿಡ್ ಸೋಂಕಿನ ಅಪಾಯ ಸಾಧ್ಯತೆ ಇಲ್ಲ. ಆದರೂ, ಪೂರ್ಣ ವೈಜ್ಞಾನಿಕ ಮಾಹಿತಿ ಲಭ್ಯವಿರದ ಕಾರಣ, ಸೋಂಕು ಹರಡುವುದನ್ನು ತಡೆಯಲು ಎಚ್ಚರಿಕೆ ವಹಿಸಬೇಕೆಂದು ತಿಳಿಸಲಾಗಿದೆ.

ಮೃತದೇಹದಿಂದ ಸೋಂಕು ಹರಡುವುದಿಲ್ಲ ಎಂದು ಹೇಳುವುದಾದರೂ, ದೇಹದಿಂದ ದ್ರವ ಸ್ರವಿಸಿದಾಗ ಸೋಂಕು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಕುಟುಂಬದವರು, ಸಂಬಂಧಿಕರು ಹಾಗೂ ಮೃತದೇಹ ನಿರ್ವಹಿಸುವವರು ಎಚ್ಚರಿಕೆ ವಹಿಸಬೇಕು ಎಂದೂ ಹೇಳಲಾಗಿದೆ.

error: Content is protected !!