ಕೊಮಾರನಹಳ್ಳಿಯಲ್ಲಿ ಕಾಮಗಾರಿಯ ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ
ಮಲೇಬೆನ್ನೂರು, ಆ. 31-ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ 166 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲು 140 ಕೋಟಿ ರೂ. ಮಂಜೂರಾಗಿದ್ದು, ಈಗಾಗಲೇ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಕೊಮಾರನಹಳ್ಳಿಯಲ್ಲಿ ತಿಮ್ಲಾಪುರ ಗಡಿಭಾಗದಿಂದ ಕೊಪ್ಪ-ಕೊಮಾರನಹಳ್ಳಿ-ವಡೆಯರ ಬಸಾಪುರ-ಕೊಕ್ಕನೂರು ಮಟ್ಟಿ
ಕ್ಯಾಂಪ್ ವಯಾ ಗೋವಿನಹಾಳ್ ಸಮೀಪದ
ಜಿಲ್ಲಾ ಮುಖ್ಯ ರಸ್ತೆಗೆ ಸೇರುವ ರಸ್ತೆ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹರಿಹರ ತಾಲ್ಲೂಕಿನ ಹನಗವಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಿಂದ ಹನಗವಾಡಿ-ಬೆಳ್ಳೂಡಿ-ಬನ್ನಿಕೋಡು-ಸತ್ಯನಾರಾಯಣ ಕ್ಯಾಂಪ್-ಹಳೇಕುಂದುವಾಡ ಸಂಪರ್ಕಿಸುವ ರಸ್ತೆಯನ್ನು 10.76 ಕೋಟಿ ರೂ. ವೆಚ್ಚದಲ್ಲಿ ಮತ್ತು ತಿಮ್ಲಾಪುರದಿಂದ ಕೊಕ್ಕನೂರು ಮಟ್ಟಿ ಕ್ಯಾಂಪ್ ವಯಾ ಗೋವಿನಹಾಳ್ ಸಮೀಪದ ಜಿಲ್ಲಾ ಮುಖ್ಯರಸ್ತೆಯನ್ನು 9.70 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
ರಸ್ತೆ ಅಭಿವೃದ್ಧಿ ಪಡಿಸುವ ವೇಳೆ ರೈತರು ಸಹಕಾರ ನೀಡಿ. ರಸ್ತೆ ಒತ್ತುವರಿಯಾಗಿದ್ದರೆ ಬಿಟ್ಟುಕೊಡಬೇಕೆಂದು ಮನವಿ ಮಾಡಿದ ಸಂಸದ ಸಿದ್ದೇಶ್ವರ ಅವರು, ಈ ರಸ್ತೆ ಅಭಿವೃದ್ಧಿಗೊಂಡ ನಂತರ 5 ವರ್ಷ ನಿರ್ವಹಣೆ ಇರುತ್ತದೆ. ಹಾಗಂತ ರಸ್ತೆಯ ಮೇಲೆ ಕೇಜ್ವ್ಹೀಲ್ ಹಾಕಿಕೊಂಡು ಟ್ರ್ಯಾಕ್ಟರ್ ಓಡಿಸಬೇಡಿ ಎಂದರು.
ಬೆಳ್ಳೂಡಿಯಲ್ಲಿ ಗ್ರಾಮಸ್ಥರು ಸಿಸಿ ರಸ್ತೆ ಮಾಡಿಸಿಕೊಡಿ ಎಂದು ಒತ್ತಾಯಿಸಿದ್ದಾರೆ. ಆದರೆ ಗ್ರಾಮ ಸಡಕ್ ಯೋಜನೆಯಲ್ಲಿ ಸಿಸಿ ರಸ್ತೆಗೆ ಅವಕಾಶ ಇರುವುದಿಲ್ಲ. ಜನರು ಇದನ್ನು ಅರ್ಥಮಾಡಿಕೊಳ್ಳಬೇಕೆಂದರು.
ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್ ಮತ್ತು ನಾನು ಸೇರಿಕೊಂಡು ಹರಿಹರ ತಾಲ್ಲೂಕಿನಲ್ಲಿ ಆಗಬೇಕಾದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ತರಲು ಶ್ರಮಿಸುತ್ತೇವೆ ಎಂದ ಸಿದ್ದೇಶ್ವರ ತಿಳಿಸಿದರು.
ಶಾಸಕ ಎಸ್. ರಾಮಪ್ಪ ಮಾತನಾಡಿ, ಭೈರನಪಾದ ಏತ ನೀರಾವರಿ ಯೋಜನೆ ಮತ್ತು ಕೊಮಾರನಹಳ್ಳಿ ಕೆರೆ ಅಭಿವೃದ್ಧಿಪಡಿಸಿ, ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ಹಾಗೂ ಈ ಹಿಂದೆ ಮಂಜೂರಾಗಿದ್ದ ರಸ್ತೆ ಕಾಮಗಾರಿಗಳಿಗೂ ಸರ್ಕಾರದಿಂದ ಅನುದಾನ ಕೊಡಿಸಿ ಎಂದು ಸಂಸದ ಸಿದ್ದೇಶ್ವರ ಅವರನ್ನು ಕೇಳಿಕೊಂಡರು.
ಮಾಜಿ ಶಾಸಕ ಬಿ.ಪಿ. ಹರೀಶ್,
ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ್ ನಾಯ್ಕ, ತಾ.ಪಂ. ಅಧ್ಯಕ್ಷೆ
ಶ್ರೀದೇವಿ ಮಂಜಪ್ಪ, ಎಪಿಎಂಸಿ ಸದಸ್ಯ ಜಿ. ಮಂಜುನಾಥ್ ಪಟೇಲ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಮುಖಂಡರಾದ ಯಕ್ಕನಹಳ್ಳಿ ಜಗದೀಶ್, ಐರಣಿ ಮಹೇಶ್ವರಪ್ಪ, ಅಣ್ಣಪ್ಪ, ಸುನೀಲ್, ಎಸ್.ಎಂ. ಮಂಜುನಾಥ್, ರಾಜಪ್ಪ, ಬಸವರಾಜ್, ಆದಾಪುರ ವೀರೇಶ್, ಪಿಎಂಜಿಎಸ್ವೈ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ, ಎಇಇ ಚಂದ್ರಮೌಳಿ, ಎಇ ಬಾಳಪ್ಪ, ಗುತ್ತಿಗೆದಾರ ಟಿ. ಶೇಖರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.