ದಾವಣಗೆರೆ, ಆ.31- ಕನ್ನಡ ಚಿತ್ರರಂಗದಲ್ಲಿನ ಡ್ರಗ್ಸ್ ಪ್ರಕರಣದಲ್ಲಿ ನಟ ದಿ. ಚಿರಂಜೀವಿ ಸರ್ಜಾ ಹೆಸರನ್ನು ಪ್ರಸ್ತಾಪಿಸುತ್ತಿರುವುದರಿಂದ ತನಗೆ ತುಂಬಾ ಬೇಸರವಾಗಿದೆ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೋವು ಹೊರಹಾಕಿದ್ದಾರೆ.
ಕಾರ್ಯನಿಮಿತ್ತ ನಗರಕ್ಕೆ ಭೇಟಿ ನೀಡಿದ್ದ ಅವರು, ಬಾಪೂಜಿ ಅತಿಥಿ ಗೃಹದಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು.
ಒಂದು ತರಗತಿಯಲ್ಲಿ ಫಸ್ಟ್ ರಾಂಕ್ ವಿದ್ಯಾರ್ಥಿ ಇರುವಂತೆ ಝೀರೋ ಅಂಕ ಪಡೆದ ವಿದ್ಯಾರ್ಥಿ ಸಹ ಇರುತ್ತಾನೆ. ಹಾಗಂತ ಇಡೀ ಕ್ಲಾಸ್ ಝೀರೋ ಎಂದರೆ ಹೇಗೆ ಎಂದು ಡ್ರಗ್ಸ್ ವಿಚಾರ ದಲ್ಲಿ ಇಡೀ ಕನ್ನಡ ಚಿತ್ರರಂಗವನ್ನೇ ದೂಷಿಸುವುದು ತಪ್ಪು ಎಂದು ಬೇಸರ ವ್ಯಕ್ತಪಡಿಸಿದರು.
ಚಿರು ಸತ್ತು ಎಲ್ಲಿ ಇದಾನೋ ಏನು ಮಾಡುತ್ತಿದ್ದಾನೋ ಗೊತ್ತಿಲ್ಲ. ಡ್ರಗ್ಸ್ ಜಾಲದಲ್ಲಿ ಚಿರು ಹೆಸರು ಬರ್ತಾ ಇರುವುದು ಬೇಸರ ತರಿಸಿದೆ. ಹಾಗೇನಾದರೂ ಕೇಸ್ ಆಗಿ ಫ್ರೂ ಆಯಿತು ಅಂದರೆ ಅವನಿಗೆ ಶಿಕ್ಷೆ ಕೊಡಲು ಸಾಧ್ಯವೇ. ನನಗೆ ನಮ್ಮ ಹಿರಿಯರು ಹೇಳಿ ಕೊಟ್ಟಿರುವುದೇನೆಂದರೆ ಸತ್ತವನು ನಮ್ಮ ಶತ್ರುವೇ ಆಗಿರಲಿ ಒಳ್ಳೆಯ ಮಾತಾಡಬೇಕಂತೆ. ಅದಕ್ಕಾಗಿಯೇ ವರ್ಷದ ತಿಥಿ ಮಾಡೋದು. ಆದರೆ ಸತ್ತವರ ಮೇಲೆ ಹೀಗೆ ಮಾತನಾಡಬಾರದು ಎಂದರು.
ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದು, ಅದನ್ನು ಕಾದು ನೋಡೋಣ ಏನು ಆಗುತ್ತೆ. ಈ ಡ್ರಗ್ಸ್ ಅನ್ನೋದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ. ಎಲ್ಲಾ ಕಡೆ ಇರಬಹುದು. ತನಿಖೆ ನಡೆಯಲಿ ಆಮೇಲೆ ನೋಡೋಣವೆಂದರು.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪದ ಬಗ್ಗೆ ಉತ್ತರಿಸಿದ ದರ್ಶನ್, ಇನ್ನೊಬ್ಬರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಅಲ್ಲದೆ ಈ ಡ್ರಗ್ಸ್ ಕೇಸ್ ಇಡೀ ಕನ್ನಡ ಚಿತ್ರರಂಗಕ್ಕೆ ಮಾತ್ರ ಅಲ್ಲ. ಇಡೀ ಕರ್ನಾಟಕಕ್ಕೆ ಕೆಟ್ಟ ಹೆಸರು. ನಾನು ಕೂಡ 26- 27 ವರ್ಷದಿಂದ ಸಿನಿಮಾ ರಂಗದಲ್ಲಿದ್ದೀನಿ. ಲೈಟ್ ಬಾಯ್ ಯಿಂದ ಇಲ್ಲಿಯವರೆಗೂ ಬೆಳೆದಿದ್ದೇನೆ. ಇದುವರೆಗೂ ನನಗೆ ಈ ರೀತಿಯ ಅನುಭವವಾಗಿಲ್ಲ ಎಂದರು.
ದಚ್ಚುಗೆ ಎಸ್ಸೆಸ್ಸೆಂ ಕುದುರೆ ಕೊಡುಗೆ: ದಾವಣಗೆರೆಗೆ ಬಂದಿದ್ದು ತನಗೆ ಖುಷಿಯಾಗಿದೆ. ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು ಒಳ್ಳೆಯ ಕುದುರೆಗಳನ್ನು ಸಾಕಿದ್ದಾರೆ. ಅವುಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದೇನೆ. ಮೊನ್ನೆ ಮರಿ ಹಾಕಿದ್ವಂತೆ. ಕೇಳಿದ್ದಕ್ಕೆ ತೆಗೆದುಕೊಂಡು ಹೋಗುವಂತೆ ಮಲ್ಲಣ್ಣ ಸಮ್ಮತಿಸಿದ್ದರು. ಅದಕ್ಕೆ ಬಂದೆ. ಪ್ರೀತಿಯಿಂದ ಮಲ್ಲಣ್ಣನವರು ನನಗೆ ಎರಡು ಕುದುರೆ ನೀಡಿದ್ದಾರೆ, ಖರೀದಿ ಮಾಡಿಲ್ಲವೆಂದರು.
ಲಾಕ್ ಡೌನ್ ಟೈಂ ನಲ್ಲಿ ನನಗೆ ಕೆಲಸ ಇಲ್ಲವಾಗಿದೆ. ಹೀಗಾಗಿ ಕುರಿ, ಕೋಳಿ, ಕುದುರೆ ಸಾಕಾಣಿಕೆ ಮಾಡುತ್ತಿದ್ದೇನೆ. ನಿಮ್ಮ ಮನೆಯಲ್ಲಿ ಒಳ್ಳೆಯ ಕುದುರೆ ಸಾಕಿ ನಾನು ನಿಮ್ಮ ಮನೆಗೂ ಬರ್ತೀನಿ ಎಂದರು. ಅಪ್ಪಾಜ್ಜಿ ಅಂಬರೀಷ್ ಹಾಗೂ ಮಲ್ಲಣ್ಣ ಇಬ್ಬರೂ ಒಳ್ಳೆಯ ಫ್ರೆಂಡ್ಸ್. ಅಪ್ಪಾಜಿ ಅಂಬರೀಷ್ ಫ್ರೆಂಡ್ಸ್ ನನಗೆ ಹಿರಿಯರ ಸಮಾನವೆಂದರು.