ಸಾಣೇಹಳ್ಳಿ, ಆ.30- ಧರ್ಮದ ಮೂಲ ಉದ್ಧೇಶ ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದು. ಹಾಗೆ ಬಯಸದಿದ್ದರೆ ಅದು ಧರ್ಮವೇ ಅಲ್ಲ ಎನ್ನುವುದು ಶರಣರ ಸಿದ್ಧಾಂತವಾಗಿತ್ತು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ನುಡಿದರು.
ಶ್ರೀ ತರಳಬಾಳು ಜಗದ್ಗುರು ಶಾಖಾ ಸಾಣೇಹಳ್ಳಿ ಶ್ರೀಮಠದಿಂದ ಆಯೋಜನೆ ಗೊಂಡಿರುವ `ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಅತಿಯಾದ ಬಳಕೆಯಿಂದಾಗಿ `ಧರ್ಮ’ ಎನ್ನುವುದು ಈಗ ಕ್ಲೀಷೆಯಾಗಿ ಅಲರ್ಜಿ ಆದಂತಾಗಿದೆ. ಧರ್ಮದ ಕರ್ಮಾಚರಣೆಗಳು ಪ್ರಧಾನವಾಗಿ ತತ್ವ – ಸಿದ್ಧಾಂತಗಳು ಹಿಂದೆ ಸರಿಯುತ್ತಿರುವುದು ವಿಷಾದನೀಯ ಎಂದರು.
ಧರ್ಮ ಎನ್ನುತ್ತಲೇ ಅದಕ್ಕೊಬ್ಬ ಧರ್ಮ ಗುರು, ಧರ್ಮ ಗ್ರಂಥ, ಧರ್ಮ ಕ್ಷೇತ್ರ ಇರಬೇಕು ಎನ್ನುವುದು ಅಲಿಖಿತ ನಿಯಮವಾಗಿಬಿಟ್ಟಿದೆ. ಆದರೆ, ಇದಕ್ಕೆ ಅಪವಾದ ಬಸವಾದಿ ಶಿವಶರಣರಿಂದ ಅಸ್ತಿತ್ವಕ್ಕೆ ಬಂದ `ಲಿಂಗಾಯತ’ ಧರ್ಮ. ಶರಣರ ಉದ್ದೇಶ ಹೊಸ ಧರ್ಮವನ್ನು ಹುಟ್ಟುಹಾಕುವುದಾಗಿರಲಿಲ್ಲ. ಬದಲಾಗಿ ಆಗ ಇದ್ದ ಧರ್ಮಗಳ ಹುಳುಕುಗಳನ್ನು ಅನಾವರಣಗೊಳಿಸಿ, ಅವುಗಳನ್ನು ಇನ್ನಷ್ಟು ಶುದ್ಧ ಮಾಡುವ ಉದ್ದೇಶವಿತ್ತು. ಹಾಗಾಗಿ ಅವರು ಮೊದಲಿಗೆ ಧರ್ಮದಿಂದ ಜಾತಿಯನ್ನು ತೊಲಗಿಸುವ ಪ್ರಯತ್ನ ಮಾಡಿದರು ಎಂದರು.
ಯಾರು ಬೇಕಾದರೂ ತಮ್ಮ ದೇವರನ್ನು ತಾವೇ ಮುಟ್ಟಿ ಪೂಜೆ ಮಾಡಬಹುದೆಂಬ ವಿಶ್ವಾಸ ಧರ್ಮಾಸಕ್ತರಲ್ಲಿ ಬಂತು. ದೇವರನ್ನು ಎಲ್ಲೋ ಹುಡುಕಿಕೊಂಡು ಹೋಗಬೇಕಾಗಿಲ್ಲ, ಸಂಸ್ಕಾರದ ಮೂಲಕ ನಾವೇ ದೇವರಾಗಬಹುದು ಎನ್ನುವ ನಂಬಿಕೆ ಬಲಗೊಂಡಿತು. ಇದನ್ನೇ ಶರಣರು `ಲಿಂಗಾಯತ’ ಧರ್ಮ ಎಂದು ಕರೆದರು.
`ಲಿಂಗಾಯತ’ ಒಂದು ಜಾತಿಯಲ್ಲ. ಆಸಕ್ತಿ, ಸಾಧನೆ, ಅನುಭವ, ಅನುಭಾವದಿಂದ ಯಾರು ಬೇಕಾದರೂ `ಲಿಂಗಾಯತ’ ರಾಗಬಹುದು. `ಲಿಂಗಾಯತ’ರಾಗುವುದು ಎಂದರೆ ಜಾತಿಯ ಕರಾಳ ಸುಳಿಯಿಂದ ಹೊರಬಂದು ವಿಶ್ವಮಾನವರಾಗುವುದು. ಲಿಂಗ ಜಾತಿಯ ಸಂಕೇತವಲ್ಲ. ಕಾಯಕ, ದಾಸೋಹ ಈ ಧರ್ಮದ ತಳಹದಿ. ಇಂದು ಈ ಧರ್ಮ ಮೂಲಸ್ವರೂಪದಲ್ಲಿ ಉಳಿದಿಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ.
ಲಿಂಗಾಯತ ಧರ್ಮ ಕುರಿತಂತೆ ಲಿಂಗಾ ಯತ ಸ್ವತಂತ್ರ ಧರ್ಮದ ಹೋರಾಟಗಾರ, ನಿವೃತ್ತ ಐಎಎಸ್ ಅಧಿಕಾರಿ ಬೆಂಗಳೂರಿನ ಎಸ್.ಎಂ. ಜಾಮದಾರ್ ಮಾತನಾಡಿ, ದೇವರ ಅಸ್ತಿತ್ವದ ಬಗ್ಗೆ ಜಗತ್ತಿನಲ್ಲಿ ಮೂರು ಅಭಿಪ್ರಾಯಗಳಿವೆ. ಒಂದು; ದೇವರು ಇದ್ದಾನೆ, ನಾನು ದೇವರನ್ನು ನಂಬುತ್ತೇನೆ. ಎರಡು; ದೇವರು ಇಲ್ಲ, ನಾನು ನಂಬುವು ದಿಲ್ಲ. ಮೂರು; ದೇವರು ಇದ್ದಾನೋ, ಇಲ್ಲವೋ ಗೊತ್ತಿಲ್ಲ. ಅಮೇರಿಕಾದ ಪಿ. ಯು ರಿಸರ್ಚ್ ಸೆಂಟರ್‌ನವರು ಎಂಬತ್ತು ದೇಶಗಳಲ್ಲಿ ಸರ್ವೇ ಮಾಡಿದ ಪ್ರಕಾರ ನೂರಕ್ಕೆ ಎಪ್ಪತ್ತು ಜನ ದೇವರು ಇದ್ದಾನೆ ಎಂದೇ ಹೇಳಿದ್ದಾರೆ. ಐದರಿಂದ ಹತ್ತು ಪ್ರತಿಶತ ಜನ ದೇವರು ಇಲ್ಲ, ನಾನು ದೇವರನ್ನು ನಂಬೋದಿಲ್ಲ ಎಂದು ಹೇಳಿದರೆ, ಇನ್ನು ಉಳಿದವರು ದೇವರ ಬಗೆಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಲಿಂಗಾಯತರ ದೇವರು ನಿರಾಕಾರವಾದ್ದರಿಂದ ಅಲ್ಲಿ ಮೂರ್ತಿ ಪೂಜೆಗೆ, ಪೂಜಾರಿಗೆ, ದೇವಾಲಯಗಳಿಗೆ ಅವಕಾಶವಿಲ್ಲ. ನಿಜವಾಗಿಯೂ ಲಿಂಗಾಯತ ರಾದಂತವರು ಈ ರೀತಿಯ ಆಚರಣೆಯನ್ನು ಅನುಸರಿಸಬಾರದು ಎಂದು ಹೇಳಿದರು.
ಬೆಂಗಳೂರಿನ ಡಿ. ಪ್ರಸನ್ನ ಕುಮಾರ್ ಸ್ವಾಗತಿಸಿದರು. ಕಡೂರು ತಾಲ್ಲೂಕು ಯಳ್ಳಂ ಬೆಳೆಸೆಯ ಡಾ. ವೈ.ಸಿ. ವಿಶ್ವನಾಥ್, ಸುವರ್ಣ ಸ್ಮರಣಾರ್ಥ ಅವರ ಕುಟುಂಬದವರು, ಹೊಳಲ್ಕೆರೆ ತಾಲ್ಲೂಕು ಮುತ್ತುಗದೂರಿನ ಆರ್. ನಾಗರಾಜಪ್ಪ ಮತ್ತು ಕುಟುಂಬ, ಹೊಳಲ್ಕೆರೆ ತಾಲ್ಲೂಕು ತುಪ್ಪದಹಳ್ಳಿ ಯ ಜಿ. ಪರಮೇಶ್ವರಪ್ಪ ಮತ್ತು ಕುಟುಂಬದವರು ಕಾರ್ಯಕ್ರಮದ ದಾಸೋಹಿಗಳಾಗಿದ್ದರು.