ದಾವಣಗೆರೆ, ಆ. 30- ಜಿಲ್ಲೆಯಲ್ಲಿ ಭಾನುವಾರ 374 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ವರದಿಯಾಗಿದೆ. ನಾಲ್ವರು ಸಾವನ್ನಪ್ಪಿದ್ದು, 168 ಜನರು ಬಿಡುಗಡೆಯಾಗಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ 9231 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 6632 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2414 ಸಕ್ರಿಯ ಪ್ರಕರಣಗಳಿವೆ.
ದಾವಣಗೆರೆ ತಾಲ್ಲೂಕಿನಲ್ಲಿ 163, ಹರಿಹರ 40, ಜಗಳೂರು 33, ಚನ್ನಗಿರಿ 84, ಹೊನ್ನಾಳಿ 44 ಹಾಗೂ ಹೊರ ಜಿಲ್ಲೆಯ 10 ಜನರಲ್ಲಿ ಸೋಂಕು ದೃಢಪಟ್ಟಿದೆ.
ಶಾಸಕ ರವೀಂದ್ರನಾಥ್ಗೆ ಪಾಸಿಟಿವ್ – ನೆಗೆಟಿವ್
ದಾವಣಗೆರೆ, ಆ. 30 – ಶಾಸಕ ಎಸ್.ಎ. ರವೀಂದ್ರನಾಥ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಜಿಲ್ಲಾಡಳಿತದ ಭಾನುವಾರದ ವರದಿಯಲ್ಲಿ ತಿಳಿಸಲಾಗಿದೆ. ಮತ್ತೊಂದೆಡೆ, ಶಾಸಕರು ಆರ್.ಟಿ. – ಪಿ.ಸಿ.ಆರ್. ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿದೆ. ಶಿರಮಗೊಂಡನಹಳ್ಳಿ ಶಾಸಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇವರ ಜಿಲ್ಲಾ ಸಂಖ್ಯೆ ಡಿವಿಜಿ – 9035 ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಆದರೆ, ಜೆಜೆಎಂಸಿ ಆಸ್ಪತ್ರೆಯಲ್ಲಿ ಆಗಸ್ಟ್ 29ರ ಶನಿವಾರದಂದು ನಡೆಸಲಾದ ಆರ್.ಟಿ. – ಪಿ.ಸಿ.ಆರ್. ಪರೀಕ್ಷೆಯಲ್ಲಿ ಶಾಸಕರಿಗೆ ನೆಗೆಟಿವ್ ಬಂದಿದೆ.
ರಾಪಿಡ್ ಟೆಸ್ಟ್ ಮಾಡಿಸಿದ ಸಂದರ್ಭದಲ್ಲಿ ಶಾಸಕರಿಗೆ ಪಾಸಿಟಿವ್ ಬಂದಿದೆ. ಮರು ದಿನವೇ ನಡೆಸಲಾದ ಆರ್.ಟಿ.-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಒಂದು ದಿನದಲ್ಲೇ ಶಾಸಕರ ಕೊರೊನಾ ಫಲಿತಾಂಶದಲ್ಲಿ ಬದಲಾವಣೆಯಾಗಿದೆ ಎಂದು ಹೇಳಲಾಗುತ್ತಿದೆ.
ದಾವಣಗೆರೆ ನಗರ ಸೇರಿದಂತೆ ಕುರ್ಕಿ , ಆವರಗೆರೆ, ಬಿಸಲೇರಿ ಕ್ಯಾಂಪ್, ಹೊನ್ನೂರು ಗೊಲ್ಲರಹಟ್ಟಿ, ಐಗೂರು, ಹೊಸ ಬೆಳವನೂರು, ಕುಕ್ಕವಾಡ, ಬಸಾಪುರ, ಕೊಡಗನೂರು, ಹಾಲವರ್ತಿ ಗ್ರಾಮಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಜೆಜೆಎಂಎಂ ಕಾಲೇಜಿನ ನಿವಾಸಿ ವೈದ್ಯ, ಚರ್ಮರೋಗ ವಿಭಾಗದ ಪಿ.ಜೆ. ವಿದ್ಯಾರ್ಥಿ, ಕಾಲೇಜಿನ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಇಬ್ಬರು, ಸಿ.ಜೆ. ಆಸ್ಪತ್ರೆಯ ನಿವಾಸಿ ವೈದ್ಯರು, ಸಿಬ್ಬಂದಿಗಳು, ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಅಧಿಕಾರಿ, ಎಸ್.ಎಸ್.ಐ.ಎಂ.ಎಸ್. ರಿಸರ್ಚ್ ಸೆಂಟರ್‌ನ ಸಿಬ್ಬಂದಿಗಳು, ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ಕೆಲ ಕೊರೊನಾ ವಾರಿಯರ್ಸ್‌ಗಳೂ ಸಹ ಸೋಂಕಿಗೆ ತುತ್ತಾಗಿದ್ದಾರೆ.