24 ಗಂಟೆಯೊಳಗೆ ರಾಯಣ್ಣ ಪ್ರತಿಮೆ ಸ್ಥಾಪಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

24 ಗಂಟೆಯೊಳಗೆ ರಾಯಣ್ಣ ಪ್ರತಿಮೆ ಸ್ಥಾಪಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ - Janathavaniದಾವಣಗೆರೆ, ಆ. 28- ಮುಂದಿನ ಇಪ್ಪನ್ನಾಲ್ಕು ತಾಸಿನೊಳಗೆ ಬೆಳಗಾವಿಯ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸದಿದ್ದರೆ ಇದೇ 31 ರಂದು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕನ್ನಡಪರ ಹೋರಾಟ ಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ನಗರದ ಹೊರ ವಲಯದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಂದು ಬಸವೇಶ್ವರ ವೃತ್ತದಿಂದ ಮೆರವಣಿಗೆ ನಡೆಸಲಾಗುವುದು. ಯಾವ ಸಚಿವರೂ ವಿಧಾನಸೌಧ ಪ್ರವೇಶಿಸದಂತೆ ತಡೆಯಲಾಗು ವುದು ಎಂದು ಹೇಳಿದರು.

ಶನಿವಾರವೂ ಸಹ ಬೆಳಗಾವಿಯ ಸುವರ್ಣ ಸೌಧದ ಮುಂದೆ ಬೆಳಿಗ್ಗೆ 11.30ಕ್ಕೆ ಏಕಾಂಗಿಯಾಗಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು. 

ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಬದಲಾವಣೆ ಮಾಡುವ ಅಗತ್ಯವಿರಲಿಲ್ಲ. ಎಂ.ಇ.ಎಸ್. ರೌಡಿಗಳ ಮಾತು ಕೇಳಿಕೊಂಡು ಕರ್ನಾಟಕ ಸರ್ಕಾರ ಬದಲಾವಣೆ ಮಾಡಿದೆಯೇ?  ಎಂದು ವಾಟಾಳ್ ಪ್ರಶ್ನಿಸಿದರು. ರಾಜಕಾರಣಿಗಳು ಓಟ್ ಬ್ಯಾಂಕ್‌ಗಾಗಿ ನಾಳೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಮಾರಲೂ ಸಿದ್ಧರಿದ್ದಾರೆ. ಎಲ್ಲಾ ರಾಜಕಾರಣಿಗಳೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪಕ್ಕಾ ಏಜೆಂಟರಾಗಿದ್ದಾರೆ ಎಂದು ಆರೋಪಿಸಿದರು.

ಎಂ.ಇ.ಎಸ್. ಸಂಪೂರ್ಣ ರದ್ದು ಮಾಡಬೇಕು. ಸಂಗೊಳ್ಳಿ ರಾಯಣ್ಣನಿಗೆ ಅವಮಾನ ಮಾಡಿದ ಮರಾಠಿ ಗೂಂಡಾಗಳನ್ನು ಕೂಡಲೇ ಗಡಿ ಪಾರು ಮಾಡಬೇಕು. ಯಾರು ಮಹಾರಾಷ್ಟ್ರದಿಂದ ರಾಜಕಾರಣಿಗಳು ನಮ್ಮ ಗಡಿ ದಾಟಿ ಬಾರದಂತೆ ನೋಡಿಕೊಳ್ಳಬೇಕು.  ಕನ್ನಡಿಗರ ಮೇಲೆ ಹಾಕಿರುವ ಕೇಸು ಹಿಂಪಡೆಯಬೇಕು ಎಂದು ವಾಟಾಳ್ ಆಗ್ರಹಿಸಿದರು.

ಕೊರೊನಾದಿಂದ ರಾಜ್ಯದಲ್ಲಿ ಪ್ರತಿ ದಿನ ಸರಾಸರಿ 120 ಜನ ಸಾವನ್ನಪ್ಪುತ್ತಿದ್ದಾರೆ. ಸರ್ಕಾರ ಇದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಸಾಯುವವರು ಸಾಯುತ್ತಲೇ ಇದ್ದಾರೆ. ಕರ್ನಾಟಕ ಸಾವಿನ ಮನೆಯಾಗಿದೆ ಎಂದು ವಾಟಾಳ್ ನಾಗರಾಜ್ ಆತಂಕ ವ್ಯಕ್ತಪಡಿಸಿದರು.

ಕೊರೊನಾ ತಡೆಯುವಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಇಲ್ಲವಾದರೆ ರಾಜಕಾರಣಿಗಳು ಸರ್ಕಾರ ಬಿಟ್ಟು ಹೋಗಬೇಕು ಎಂದರು. ಇಂದು ರಾಜ್ಯಾದ್ಯಂತ ಪ್ರಾಣ ಉಳಿಸಿ ಹೋರಾಟ ಅನಿವಾರ್ಯವಾಗಿದೆ ಎಂದರು.

ಪರೀಕ್ಷೆ ಮುಂದೂಡಿ: ಆಂಧ್ರ, ದೆಹಲಿ, ತೆಲಂಗಾಣದಲ್ಲಿ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಅಂತೆಯೇ ನಮ್ಮ ರಾಜ್ಯದಲ್ಲೂ ಪರೀಕ್ಷೆಗಳನ್ನು ಮುಂದೂಡಬೇಕು. ಕೊನೆ ವರ್ಷದ ವಿದ್ಯಾರ್ಥಿಗಳು ತಾವು ಓದಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ ಎಂದು ಹೇಳಿದರು.

ಆನ್ ಲೈನ್ ಶಿಕ್ಷಣದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಾಟಾಳ್,  ಆನ್ ಲೈನ್ ವ್ಯವಸ್ಥೆಗೆ ಒಬ್ಬರಿಗೆ ಕನಿಷ್ಟ 50 ಸಾವಿರ ರೂಗಳಾದರೂ ಬೇಕಿದೆ.   ಗ್ರಾಮೀಣ ಪ್ರದೇಶದಲ್ಲಂತೂ ನೆಟ್ ವರ್ಕ್‌ ಸಮಸ್ಯೆ, ವಿದ್ಯುತ್ ಸಮಸ್ಯೆ ಇದೆ. ಕೆಲ ಮಕ್ಕಳಿಗಂತೂ ಅದನ್ನು ಉಪಯೋಗಿಸುವ ಅರಿವೂ ಇಲ್ಲ. ಆದ್ದರಿಂದ ಆನ್‌ಲೈನ್ ಬೇಕಾಗಿಲ್ಲ ಎಂದರು.

ಕೊರೊನಾ ವಾರಿಯರ್‌ ದೇವರುಗಳಿದ್ದಂತೆ, ಪ್ರಾಮಾಣಿಕವಾಗಿ ಕೆಲಸ ಮಾಡುವ ಅವರನ್ನು ಸರ್ಕಾರ ಸಂಪೂರ್ಣ ಕಡೆಗಣಿಸಿದೆ. ಕೊರೊನಾ ಹಣ ತಿನ್ನುವುದಕ್ಕಿಂತ ದ್ರೋಹ ಮತ್ತೊಂದಿಲ್ಲ ಎಂದರು.

error: Content is protected !!