ಕೊರೊನಾ ಆತಂಕ : ಶಾಲೆ ತರೆದರೂ ಮಕ್ಕಳನ್ನು ಕಳುಹಿಸಲು ಪೋಷಕರ ಹಿಂದೇಟು
ದಾವಣಗೆರೆ, ಆ. 28- ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು, ಸಿದ್ಧತೆಗಳು ನಡೆಯುತ್ತಲೇ ಇವೆ. ಈ ಮಧ್ಯೆಯೇ ಶಾಲೆ ಆರಂಭದ ದಿನವನ್ನು ಸರ್ಕಾರ ಘೋಷಿಸಿದರೂ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಭಯ, ಆತಂಕ, ಮುಂದುವರಿದೇ ಇದೆ.
ಶಾಲೆಗಳು ಶೀಘ್ರದಲ್ಲಿಯೇ ಪುನರಾರಂಭ ಗೊಳ್ಳಲಿವೆ ಎಂಬ ಸುದ್ದಿಗಳು ಆಗಾಗ್ಗೆ ಹರಿದಾಡುತ್ತಲೇ ಇವೆ. ಆದರೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಸದ್ಯ ಇನ್ನೂ ಸರ್ಕಾರ ಶಾಲಾರಂಭದ ಬಗ್ಗೆ ದೃಢ ನಿರ್ಧಾರ ಪ್ರಕಟಿಸುವ ಗೋಜಿಗೆ ಹೋಗಿಲ್ಲ.
ಇತ್ತ ಶಾಲೆ ಆರಂಭವಾದರೂ ಈ ವರ್ಷ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಹಲವಾರು ಕಾರಣಗಳೂ ಇವೆ.
ಈಗಾಗಲೇ ವಿದೇಶಗಳಲ್ಲಿ ಶಾಲೆಗಳನ್ನು ಆರಂಭ ಮಾಡಿದ ನಂತರ ಶಾಲೆಗಳಲ್ಲೇ ಕೊರೊನಾ ವ್ಯಾಪಕವಾಗಿ ಹರಡಿದ ಬಗ್ಗೆ ಸುದ್ದಿಗಳು ಪೋಷಕರಲ್ಲಿ ಆಂತಕ ಮೂಡಿಸಿವೆ.
ರಾಜ್ಯದಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ವೇಳೆ ಶಾಲೆಗಳನ್ನು ಆರಂಭಿಸಿದರೆ ಮನೆ-ಮಂದಿಗೆಲ್ಲಾ ಕೊರೊನಾ ಹರಡಲು ನಾವೇ ದಾರಿ ಮಾಡಿಕೊಟ್ಟಂ ತಾಗುತ್ತದೆ ಎಂಬುದು ಪೋಷಕರ ವಾದವಾಗಿದೆ.
ಶಾಲೆಗಳಲ್ಲಿ ಮಕ್ಕಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಷ್ಟು ಅರಿವು ಇರುವುದಿಲ್ಲ. ತಿಳಿದೋ ಅಥವಾ ತಿಳಿಯದೆಯೋ ಸಹಜವಾಗಿ ಮಕ್ಕಳು ಪರಸ್ಪರ ಮಾತನಾಡುತ್ತಾರೆ. ಇದನ್ನು ಶಿಕ್ಷಕರಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಇದು ಸೋಂಕು ಹೆಚ್ಚಳಕ್ಕೆ ದಾರಿಯಾಗುತ್ತದೆ ಎನ್ನುತ್ತಾರೆ ಕೆಲವು ಪೋಷಕರು.
ಕೆಲ ಪ್ರತಿಷ್ಠಿತ ಖಾಸಗಿ ಶಾಲೆಗಳು ಈಗಾಗಲೇ ಮಕ್ಕಳಿಗೆ ಆನ್ಲೈನ್ ಮೂಲಕ ಪಾಠ ಮಾಡಲಾರಂಭಿಸಿವೆ.
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಸರ್ಕಾರ ಸೂಚಿಸಿರುವಂತೆ `ವಿದ್ಯಾಗಮ’ ಯೋಜನೆಯಡಿ ಮಕ್ಕಳಿದ್ದಲ್ಲಿಗೇ ತೆರಳಿ ಪಾಠ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿವೆ.
ಕೊರೊನಾ ಭಯದ ಹಿನ್ನೆಲೆಯಲ್ಲಿ ಮಕ್ಕಳು ಕೂಡ ಶಾಲೆಗಳಲ್ಲಿ ಏಕಾಗ್ರತೆಯಿಂದ ಮತ್ತು ನೆಮ್ಮದಿಯಾಗಿ ಕಲಿಯಲು ಸಾಧ್ಯವಿಲ್ಲ. ಹೀಗಾಗಿ ಶಾಲೆ ಆರಂಭಿಸಲು ಆತುರ ತೋರುವುದು ಬೇಡ ಎಂಬುದು ಪೋಷಕರ ಮಾತು.
ಬರುವ ಅಕ್ಟೋಬರ್ 1 ರಿಂದ ಶಾಲಾ-ಕಾಲೇಜುಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ನಿಗದಿತ ವೇಳೆಯಲ್ಲೇ ಪೂರ್ಣಗೊಳಿಸಲು ಶೇ. 40 ರಿಂದ 45 ರಷ್ಟು ಪಠ್ಯ ಕಡಿತ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿತ್ತು.
ಅಕ್ಟೋಬರ್ ಪ್ರಾರಂಭ ಇಲ್ಲವೇ ಅಂತ್ಯದ ವೇಳೆಗೆ ಕೊರೊನಾ ಸಾಂಕ್ರಾಮಿಕಕ್ಕೆ ಲಸಿಕೆಗಳು ಮುಕ್ತ ಮಾರುಕಟ್ಟೆಗೆ ಬರಬಹುದೆಂಬ ನಿರೀಕ್ಷೆ ಯನ್ನೂ ಸರ್ಕಾರ ಇಟ್ಟುಕೊಂಡಿದೆ. ಆದರೆ ಪೋಷಕರಲ್ಲಿ ಮಾತ್ರ ಈ ಭರವಸೆ ಇಲ್ಲ.
ಶಿಕ್ಷಣ ಇಲಾಖೆಯು ರಾಜ್ಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳು, ಶಾಲಾಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಗಳು ಹಾಗೂ ಪೋಷಕರಿಂದ ಜೂ.10ರಿಂದ 20ರ ವರೆಗೆ ಪೋಷಕರ ಅಭಿಪ್ರಾಯ ಸಂಗ್ರಹಿಸಿದೆ. ರಾಜ್ಯದ 75 ಸಾವಿರ ಶಾಲೆಗಳ ಪೈಕಿ ಸದ್ಯ ಅಂದಾಜು 35 ಸಾವಿರ ಶಾಲೆಗಳಿಂದ ಮಾಹಿತಿ ಲಭ್ಯವಾಗಿದೆ. ಈ ಪೈಕಿ ಭಾಗಶಃ ಪೋಷಕರು ಶಾಲೆ ಆರಂಭ ಬೇಡ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ ಕೊರೊನಾ ಸಮಯದಲ್ಲಿ ಶಾಲೆಗಳಿಗೆ ಕಳುಹಿಸುವುದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ’ ಎನ್ನುತ್ತವೆ ಇಲಾಖೆಯ ಮೂಲಗಳು.
ಈ ಮೂಲಗಳ ಪ್ರಕಾರ ಶೇ.95ರಷ್ಟು ಪೋಷಕರು ಕೊರೊನಾ ಸಮಯದಲ್ಲಿ ಶಾಲೆ ಆರಂಭ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ತಮಗೆ ಕಲಿಕೆಗಿಂತ ತಮ್ಮ ಮಕ್ಕಳ ಜೀವ ಮುಖ್ಯ ಎಂದು ನೇರವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಆದರೂ, ಶಾಲಾ ಕೊಠಡಿಗಳಲ್ಲಿ, ಶೌಚಾಲಯಗಳಲ್ಲಿ ಮಕ್ಕಳನ್ನು ನಿಯಂತ್ರಿಸುವುದು ಕಷ್ಟ. ಸೆಪ್ಟೆಂಬರ್ ವೇಳೆಗೆ ಅಧಿಕೃತವಾಗಿ ಕೊರೊನಾ ಸೋಂಕಿಗೆ ಲಸಿಕೆ ಕಂಡು ಹಿಡಿದರೆ ಮಾತ್ರ ನಾವು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಾಗಬಹುದು ಎಂದು ಪೋಷಕರು ಇಲಾಖೆಗೆ ಸಲಹೆ ನೀಡಿದ್ದಾರೆ.
ಮಕ್ಕಳಿಗೆ ಶಾಲೆಗಳು ಸದ್ಯಕ್ಕೆ ಸುರಕ್ಷಿತವಲ್ಲ ಎಂಬ ವಾದದ ನಡುವೆ, ಮಕ್ಕಳಾದರೂ ಮನೆಯಲ್ಲಷ್ಟೇ ಇರುತ್ತಾರಾ? ಮನೆ ಬಿಟ್ಟು ಹೊರಗಡೆ ತಿರುಗಾಡಿ ಬರುವ ಮಕ್ಕಳನ್ನು ನಿಯಂತ್ರಿಸುವ ಸಾಹಸಕ್ಕಿಂತ ಶಾಲೆಯೇ ವಾಸಿ ಎನ್ನುತ್ತಾರೆ ಕೆಲ ಪೋಷಕರು.